ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧನೆಗೆ ಆತ್ಮವಿಶ್ವಾಸ ಪೂರಕ

ರಾಮಕೃಷ್ಣ ಆಶ್ರಮದಲ್ಲಿ ಟಿಇಟಿ ಉಚಿತ ಕಾರ್ಯಾಗಾರ
Last Updated 9 ಡಿಸೆಂಬರ್ 2018, 16:12 IST
ಅಕ್ಷರ ಗಾತ್ರ

ಬೀದರ್‌: ‘ವ್ಯಕ್ತಿಯಲ್ಲಿನ ಆತ್ಮವಿಶ್ವಾಸವು ಗುರಿ ಸಾಧನೆಯತ್ತ ಹೆಜ್ಜೆಗಳನ್ನಿಡುವಂತೆ ಮಾಡಿದರೆ, ನಿರಾಸಕ್ತಿಯು ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಸಲಹೆ ನೀಡಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವಿವೇಕಾನಂದ ಅಕಾಡೆಮಿ ಫಾರ್‌ ಎಜುಕೇಷನಲ್ ಎಕ್ಸ್‌ಲೆನ್ಸ್‌ ಕೇಂದ್ರದ ವತಿಯಿಂದ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವ್ಯಕ್ತಿ ಮೊದಲು ತನ್ನಲ್ಲಿನ ಕೀಳರಿಮೆ ಹಾಗೂ ಸಂಕುಚಿತ ಭಾವನೆಯನ್ನು ತೊರೆಯಬೇಕು. ಉನ್ನತವಾದ ಗುರಿ ಇಟ್ಟುಕೊಂಡು ಛಲದೊಂದಿಗೆ ಮುನ್ನುಗ್ಗಿದರೆ ಸಾಧನೆ ಕಷ್ಟವಲ್ಲ’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಹೊರಗೆ ಹಾಕಲು ಪ್ರಯತ್ನ ಮಾಡಬೇಕು. ಉನ್ನತ ಗುರಿ ಇಟ್ಟುಕೊಂಡರೆ ಸಾಲದು ಸಾಧನೆಗೆ ಪ್ರಯತ್ನಪಡಬೇಕು. ನನಗೆ ಕೆಂಪು ದೀಪದ ಕಾರಿನಲ್ಲಿ ಓಡಾಡಬೇಕು ಎನ್ನುವ ಅಸೆ ಇತ್ತು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಆಸೆ ಈಡೇರಿಸಿಕೊಂಡಿದ್ದೇನೆ’ ಎಂದು ತಿಳಿಸಿದರು.

‘ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಕನಿಷ್ಠ 10 ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿರಬೇಕು. ಒಂದು ರೀತಿಯಲ್ಲಿ ಪ್ರಶ್ನೆಪತ್ರಿಕೆಗಳ ಒಡನಾಡಿಯಾಗಬೇಕು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿನ ಪಠ್ಯಪುಸ್ತಕಗಳನ್ನು ಮತ್ತೊಮ್ಮೆ ಓದಿಕೊಂಡು ಮನನ ಮಾಡಿಕೊಳ್ಳಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಕೊಂಡು ಪರೀಕ್ಷೆಗೆ ಅಣಿಯಾಗಬೇಕು’ ಎಂದು ಸಲಹೆ ನೀಡಿದರು.

‘ರಾಮಕೃಷ್ಣ ಮಠವು ಮನುಕುಲಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡುತ್ತಿದೆ. ವಿವೇಕಾನಂದ ಅಕಾಡೆಮಿ ಫಾರ್‌ ಎಜುಕೇಷನಲ್ ಎಕ್ಸ್‌ಲೆನ್ಸ್‌ ಕೇಂದ್ರದ ಮೂಲಕ ಮಠವು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ವೇದಾಂತಾಶ್ರಮದ ಅಧ್ಯಕ್ಷ ಅಭಯಾನಂದ ಸ್ವಾಮೀಜಿ ಮಾತನಾಡಿ,‘ಮನಸ್ಸು ಚಂಚಲ ಹಾಗೂ ದುರ್ಬಲವಾಗಿರುತ್ತದೆ. ನಮ್ಮಲ್ಲಿನ ಮನೋದೌರ್ಬಲ್ಯಗಳನ್ನು ಅರಿತುಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಬೇಕು. ವಿಚಲಿತವಾಗದಂತೆ ಮನಸ್ಸಿಗೆ ಒಂದು ನಿರ್ಧಿಷ್ಠ ದಿಕ್ಕು ತೋರಿಸಬೇಕು’ ಎಂದು ಹೇಳಿದರು.

‘ಮನಸ್ಸು ಬ್ರಹ್ಮ ರಾಕ್ಷಸ ಇದ್ದ ಹಾಗೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಏಕಾಗೃತೆಯನ್ನು ಸಾಧಿಸಲು ಹಾಗೂ ಗುರಿ ತಲುಪಲು ಸುಲಭವಾಗುತ್ತದೆ’ ಎಂದು ತಿಳಿಸಿದರು.

ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ವ್ಯಕ್ತಿಯ ಉದ್ದೇಶ ಹಾಗೂ ಗುರಿ ಸ್ಪಷ್ಟವಾಗಿರಬೇಕು. ಅಧ್ಯಯನ ಮೂಲಕ ಅನುಭವ ಬರುತ್ತದೆ. ಈ ಅನುಭವ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮೌಲಿಕ ಕೃತಿಗಳ ಅಧ್ಯಯನ ಮಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಣೆಗೆ ಪೂರಕವಾಗಿ ವಿವೇಕಾನಂದ ಅಕಾಡೆಮಿಯು ವಿದ್ಯಾರ್ಥಿಗಳಿಗೆ ತರಬೇತಿ ನಡೆಸುತ್ತಿದೆ. ಕಾರ್ಯಾಗಾರದ ಮೂಲಕ ಪರಿಣಿತ ಬೋಧಕರಿಂದ ಮಾರ್ಗದರ್ಶನ ನೀಡಿ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.

ಪತ್ರಕರ್ತ ಚಂದ್ರಕಾಂತ ಮಸಾನಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಹಣಮಂತರಾವ್‌ ಪಾಟೀಲ ಇದ್ದರು. ಉದಯ ನಿರಂಜನ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT