ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭವನ ಕಾಮಗಾರಿ ಶೀಘ್ರ ಪೂರ್ಣ

ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭರವಸೆ
Last Updated 23 ನವೆಂಬರ್ 2020, 5:49 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಕನ್ನಡ ಭವನ ನಿರ್ಮಾಣ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭರವಸೆ ನೀಡಿದರು.

ನಗರದ ಚಿಕ್ಕಪೇಟೆ ಸಮೀಪದ ನಿವೇಶನದಲ್ಲಿ ಭಾನುವಾರ ಸಮಗ್ರ ವಚನ ಸಾಹಿತ್ಯ ಹಾಗೂ ತಾಯಿ ಭುವನೇ ಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡ ಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಭವನವು ₹8 ಕೋಟಿಯ ಯೋಜನೆಯಾಗಿದೆ. ಸರ್ಕಾರ ಈಗಾಗಲೇ ₹2 ಕೋಟಿ ಮಂಜೂರು ಮಾಡಿದ್ದು, ₹1 ಕೋಟಿ ಬಿಡುಗಡೆ ಕೂಡ ಆಗಿದೆ. ಕಾಮಗಾರಿ ಅಗತ್ಯಕ್ಕೆ ಅನುಗುಣವಾಗಿ ಉಳಿದ ಅನುದಾನವನ್ನೂ ಮಂಜೂರು ಮಾಡಿಸಲಾಗುವುದು ಎಂದರು.

ಕನ್ನಡ ಭವನ ನೋಡುವುದ ಕ್ಕಾಗಿಯೇ ಜನ ಬೀದರ್‌ಗೆ ಬರುವಂತಾ ಗುವ ದಿಸೆಯಲ್ಲಿ ಐತಿಹಾಸಿಕ ಸ್ಮಾರಕದ ರೀತಿಯಲ್ಲಿ ಸುಂದರವಾದ ಮಾದರಿ ಕನ್ನಡ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ಔರಾದ್ ತಾಲ್ಲೂಕಿನ ಶಾಲೆಗಳಲ್ಲಿ ಖಾಲಿ ಇದ್ದ ಕನ್ನಡ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.

ಕನ್ನಡ ಭವನ ಭೂಮಿಪೂಜೆಯಿಂದ ಕಸಾಪ ಚುನಾವಣೆಯಲ್ಲಿ ಗೆದ್ದ ಖುಷಿ ಗಿಂತ ಹೆಚ್ಚು ಸಂತಸವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಕನ್ನಡ ಭವನದ ಜತೆಗೆ ಕನ್ನಡ ಮನಸ್ಸುಗಳನ್ನೂ ಕಟ್ಟಬೇಕು ಎನ್ನುವುದು ತಮ್ಮ ಅಪೇಕ್ಷೆಯಾಗಿದೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಗಡಿಯಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು, ತಾಲ್ಲೂಕು ಘಟಕಗಳ ಮಾಜಿ ಅಧ್ಯಕ್ಷರು ಹಾಗೂ ಸಮ್ಮೇಳನ ಸರ್ವಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯ, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ಹುಲಸೂರಿನ ಶಿವಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಬರೂರು, ಎಂಎಸ್‍ಐಎಲ್ ನಿರ್ದೇಶಕ ಬಾಬುವಾಲಿ, ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಬಾಬುರಾವ್ ವಡ್ಡೆ, ಬಸವರಾಜ ಖಂಡೇರಾವ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪೂರ್ಣಿಮಾ ಜಿ. ಇದ್ದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ನಿರೂಪಿಸಿದರು. ಖಜಾಂಚಿ ಟಿ.ಎಂ. ಮಚ್ಚೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ವಂದಿಸಿದರು.

ಭಾವಚಿತ್ರದ ಮೆರವಣಿಗೆ

ಇದಕ್ಕೂ ಮುನ್ನ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಂದ ಸಿದ್ಧಾರೂಢ ಮಠದಿಂದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಗುರುನಾನಕ ಝೀರಾ ದ್ವಾರದ ಮೂಲಕ ಚಿಕ್ಕಪೇಟೆ ಸಮೀಪದ ಕಾರ್ಯಕ್ರಮ ಸ್ಥಳದವರೆಗೆ ಬೈಕ್ ರ್‍ಯಾಲಿ ಹಾಗೂ ಅಲಂಕೃತ ವಾಹನದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು.

ಹಾರಕೂಡಶ್ರೀ, ಧನ್ನೂರ ದೇಣಿಗೆ

ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಹಾರಕೂಡದ ಚನ್ನವೀರ ಶಿವಾಚಾರ್ಯರು ಹಾಗೂ ಉದ್ಯಮಿ ಬಸವರಾಜ ಧನ್ನೂರ ತಲಾ ₹1 ಲಕ್ಷ ದೇಣಿಗೆ ನೀಡಿದರು.

₹2 ಲಕ್ಷ ಕೊಡುವ ಮಾತು ನೀಡಿದ್ದ ಹಾರಕೂಡಶ್ರೀ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕಕ್ಕೆ ಈ ಪೈಕಿ ₹1 ಲಕ್ಷ ನಗದು ನೀಡಿದರು.

ಇನ್ನು ಕಸಾಪ ಕಾರ್ಯಕ್ರಮವೊಂದರಲ್ಲಿ ಕನ್ನಡ ಭವನಕ್ಕೆ ಭೂಮಿ ಪೂಜೆ ನಡೆದ ದಿನವೇ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡುವುದಾಗಿ ಧನ್ನೂರ ಘೋಷಿಸಿದ್ದರು. ಅದರಂತೆ ₹1 ಲಕ್ಷದ ಚೆಕ್ ಹಸ್ತಾಂತರಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು ಭವನದ ನಿರ್ಮಾಣ ಕಾರ್ಯಕ್ಕಾಗಿ ನೌಕರರ ಒಂದು ದಿನದ ವೇತನ ಕೊಡಿಸಲು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT