ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year Ender - 2022| ಬೀದರ್‌: ಅಧಿಕಾರಿಗಳು ಬದಲಾದರೂ ಬದಲಾಗದ ಅಭಿವೃದ್ಧಿ ಚಿತ್ರಣ

Last Updated 30 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: 2022ನೇ ವರ್ಷದಲ್ಲಿ ಸಿಹಿ–ಕಹಿ ಘಟನೆಗಳು ನಡೆದು ಹೋದವು. ಅನೇಕ ಅಧಿಕಾರಿಗಳು ಬದಲಾದರೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣ ಬದಲಾಗಲಿಲ್ಲ. ವರ್ಷ ಕಳೆದರೂ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿಲ್ಲ. ಜಿಲ್ಲಾ ಪಂಚಾಯಿತಿ ಚುನಾವಣೆ ನಿರೀಕ್ಷೆಯಲ್ಲೇ ವರ್ಷ ಜಾರಿ ಹೋಯಿತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಯೋಜನೆಗಳು ಈ ವರ್ಷವೂ ಆರಂಭವಾಗದೇ ಜಿಲ್ಲೆಯ ಜನರಲ್ಲಿ ನಿರುತ್ಸಾಹ ಮೂಡಿಸಿದವು.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮತ್ತೆ ಕನಸುಗಳ ಪಟ್ಟಿಗೆ ಸೇರಿತು. ತಾಲ್ಲೂಕು ಕೇಂದ್ರಗಳಲ್ಲಿ ಹೊಸ ಕಚೇರಿ ಕಟ್ಟಡಗಳು ನಿರ್ಮಾಣವಾಗಲಿಲ್ಲ. ಮಿನಿ ವಿಧಾನಸೌಧದ ಶಂಕುಸ್ಥಾಪನೆಗೂ ಶುಭ ಮುಹೂರ್ತ ಕೂಡಿ ಬರಲಿಲ್ಲ. ದಿನದ 24 ಗಂಟೆ ನೀರು ಪೂರೈಸುವ ಯೋಜನೆ, ಒಳ ಚರಂಡಿ ನಿರ್ಮಾಣ ಕಾಮಗಾರಿ ಈ ವರ್ಷವೂ ಪೂರ್ಣಗೊಳ್ಳಲಿಲ್ಲ. ಹೆದ್ದಾರಿ ಕಾಮಗಾರಿಗಳು ತೆವಳುತ್ತ ಸಾಗಿದವು. ಕಾಂಗ್ರೆಸ್‌ನಿಂದ ಆಗದ ಕೆಲಸ ಬಿಜೆಪಿಯಿಂದ ಆಗಲಿದೆ ಎನ್ನುವ ಭರವಸೆ ಹುಸಿ ಆಯಿತು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಬೀದರ್‌ ಜಿಲ್ಲೆಯ ಹಣೆಬರಹ ಇಷ್ಟೇ ಎಂದು ಜನ ಆಡಿಕೊಳ್ಳುವಂತಾಯಿತು.

ಜಿಲ್ಲಾ ಕೇಂದ್ರ ಕಾರಾಗೃಹ, ಅನುಭವ ಮಂಟಪ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ದೊರಕಿದ್ದು ಮಾತ್ರ ಸ್ವಲ್ಪ ಮಟ್ಟಿಗೆ ಸಮಾಧಾನ ಉಂಟು ಮಾಡಿತು. ಔರಾದ್ ತಾಲ್ಲೂಕಿನ ಬಲ್ಲೂರ್‌ ಗ್ರಾಮದಲ್ಲಿ ಸಿಪೆಟ್‌ಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬಿಜೆಪಿ ಜಿಲ್ಲಾ ಘಟಕದ ಕಚೇರಿಯನ್ನು ಮಾತ್ರ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಉದ್ಘಾಟಿಸಲಾಯಿತು.

2022ರ ಮುಂಗಾರಿನಲ್ಲಿ ಅತಿಯಾದ ಮಳೆ ಕಾಡಿದರೆ, ಹಿಂಗಾರಿನಲ್ಲಿ ತೊಗರಿಗೆ ನೆಟೆ ರೋಗ ಕಾಣಿಸಿಕೊಂಡು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತು. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಕಬ್ಬಿನ ಪಾವತಿ ಮಾಡಲಿಲ್ಲ. ಉತ್ತಮ ಬೆಲೆಯನ್ನೂ ಕೊಡಲಿಲ್ಲ.

ಜನವರಿ

03. ಶಾಲಾ, ಕಾಲೇಜುಗಳಲ್ಲಿನ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

04 ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ.

08 ಕೋವಿಡ್ ಕಾರಣ ಜಾರಿಗೊಳಿಸಿದ ವಾರಾಂತ್ಯ ಕರ್ಫ್ಯೂದಿಂದ ಜಿಲ್ಲೆ ಬಹುತೇಕ ಸ್ತಬ್ಧ.

20 ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಿತು.

ಫೆಬ್ರುವರಿ

01. ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿರುವ ಬೀದರ್‌ ಜಿಲ್ಲೆಯಲ್ಲಿ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದ್ದರೂ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಒಂದೇ ಒಂದು ಯೋಜನೆ ಪ್ರಕಟಿಸಲಿಲ್ಲ.

02. ಜಿಲ್ಲೆಯ ಎಲ್ಲ ಠಾಣೆಗಳಲ್ಲೂ ಎಲೆಕ್ಟ್ರಾನಿಕ್‌ ಇ-ಬೀಟ್‌ ವ್ಯವಸ್ಥೆ ಜಾರಿ ಮಾಡಲಾಯಿತು. ಆದರೆ, ಕಳ್ಳತನ ಪ್ರಕರಣಗಳು ಕಡಿಮೆಯಾಗಲಿಲ್ಲ.

11. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಶಾಸಕರು ಪಕ್ಷಬೇಧ ಮರೆತು ಪೊಲೀಸ್‌ ಇಲಾಖೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

14. ಹಿಜಾಬ್‌–ಕೇಸರಿ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ ನಂತರ ಸರ್ಕಾರಿ ಉರ್ದು ಪ್ರೌಢಶಾಲೆಗಳಿಗೆ ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ಹಾಜರಾದರು.

20. ಆನೆಕಾಲು ರೋಗ ನಿರ್ಮೂಲನೆಗೆ ಮಾತ್ರೆ ಸೇವನೆ ಅಭಿಯಾನ ನಡೆಯಿತು.

22. ಬೀದರ್ ಜಿಲ್ಲಾ ಪ್ರಥಮ ಮಹಿಳಾ ಜಾನಪದ ಸಮ್ಮೇಳನ.

ಮಾರ್ಚ್

17. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಯಾದಗಿರಿ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಮೇಶ್‌ ಕಣಕಟ್ಟೆ ಅವರ ಚಿಟಗುಪ್ಪ ತಾಲ್ಲೂಕಿನ ಉಡಬಾಳದ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ.

30. ಬೀದರ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು

ಏಪ್ರಿಲ್

07 ಭಾವೈಕ್ಯದ ಬಾಂಧವ್ಯ ಬೆಸೆದ ಅಷ್ಟೂರು ಜಾತ್ರೆ

08 ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಮಾಂಜ್ರಾ ನದಿ ದಂಡೆಯ ಮೇಲಿರುವ ಪಾಳು ಬಿದ್ದ ಪಂಪ್‌ಹೌಸ್‌ನ ವಿಡಿಯೊ ಚಿತ್ರಿಕರಣ ಮಾಡುತ್ತಿದ್ದ ಪತ್ರಕರ್ತನ ಮೇಲೆ ಚಿರತೆ ದಾಳಿ.

09 ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಕಾಸ ಅಕಾಡೆಮಿ ವತಿಯಿಂದ ಬಸವಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಯಾತ್ರಾ ಪರ್ವ, ಬಸವಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸುವ ವಿವಿಧ ಯೋಜನೆಗಳ ಅನಾವರಣ ಕಾರ್ಯಕ್ರಮ.

16. ಜೆಡಿಎಸ್‌ನ ಜನತಾ ಜಲ ಧಾರೆ ರಥ ಯಾತ್ರೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಕಮಲನಗರ ತಾಲ್ಲೂಕಿನ ಸಂಗಮ ಗ್ರಾಮದಲ್ಲಿ ಚಾಲನೆ ನೀಡಿದರು.

28. ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಕನಿಕ ಯಾದವ್ ಅವರಿಗೆ 2019-20ನೇ ಸಾಲಿನ ಬಿ.ವಿ.ಎಸ್ಸಿ ಆ್ಯಂಡ್ ಎ.ಎಚ್. ಸ್ನಾತಕ ಪದವಿಯಲ್ಲಿ 13 ಚಿನ್ನದ ಪದಕ.

ಮೇ

13. ಬೀದರ್‌ನ ನರಸಿಂಹ ದೇವರ ಅವತರಣ ಉತ್ಸವಕ್ಕೆ ಹರಿದು ಬಂದ ಭಕ್ತರ ದಂಡು.

27. ಔರಾದ್ ತಾಲ್ಲೂಕಿನ ವಡಗಾಂವ(ಡಿ) ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಅಭಿವೃದ್ಧಿಗೆ ₹ 1 ಕೋಟಿ ಘೋಷಣೆ ಮಾಡಿದರು.

29. ಉತ್ತರಪ್ರದೇಶದ ಲಖಿಂಪುರ ಖೇರಿ ಹಾಗೂ ಮೋತಿಪುರ ನಡುವಿನ ನೌನಿಹಾಲ್‌ನ ಖೇರಿ-ನನ್‌ಪಾರಾ ಹೆದ್ದಾರಿಯಲ್ಲಿ ಟೆಂಪೊ ಟ್ರಾವೆಲರ್ ಹಾಗೂ ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ

ಬೀದರ್‌ನ ಎಂಟು ಜನರ ಸಾವು.

ಜೂನ್

04. ಬೀದರ್‌ನಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯ ಉದ್ಘಾಟನೆ

15. ಬೀದರ್‌–ಬೆಂಗಳೂರು ಸ್ಟಾರ್‌ಏರ್‌ ಸೇವೆಗೆ ಸಚಿವರಿಂದ ಚಾಲನೆ

18. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ 21ನೇ ಸ್ಥಾನದಲ್ಲಿ ಗುರುತಿಸಿಕೊಂಡ ಬೀದರ್‌.

ಜುಲೈ

05. ಬೀದರ್‌ನ ವಾಯುಪಡೆ ತರಬೇತಿ ಕೇಂದ್ರದ ಅಪ್ಪ- ಮಗಳು ಹಾಕ್ ಫೈಟರ್ ಯುದ್ಧ ವಿಮಾನ ಹಾರಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದರು.

11. ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಒಂದೇ ದಿನದಲ್ಲಿ 46 ಮನೆಗಳ ಭಾಗಶಃ ಕುಸಿತ.

18. ಬೀದರ್‌ನಲ್ಲಿ ರಾಷ್ಟ್ರೀಯ ಜನಪದ ಉತ್ಸವ

21. ಕರಿ ನವಿಲು ಜೀವನ ಕ್ರಮ ಅರಿಯಲು ಹಾಗೂ ಸಂಖ್ಯೆ ಪತ್ತೆ ಮಾಡಲು ಅರಣ್ಯ ಇಲಾಖೆಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ನೆರವಿನೊಂದಿಗೆ ಜಿಲ್ಲೆಯಲ್ಲಿ ಎರಡನೇ ಹಂತದ ಸಮೀಕ್ಷೆ ಆರಂಭಿಸಿತು.

27. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಸಾಂಸ್ಕೃತಿಕ ಮತ್ತು ಜನಪದ ಉತ್ಸವ.

ಆಗಸ್ಟ್

09. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಮಾಂಜ್ರಾಗೆ ಪ್ರವಾಹ, ನದಿ ಪಾತ್ರದ ಗ್ರಾಮಗಳ ಹೊಲಗಳು ಜಲಾವೃತ

11. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ.

15. ಬೀದರ್‌ ಕೋಟೆ ಆವರಣದಲ್ಲಿ 75 ವರ್ಷಗಳ ಬಳಿಕ ಮೊದಲ ಬಾರಿಗೆ ಹಾರಾಡಿದ ರಾಷ್ಟ್ರ ಧ್ವಜ.

ಸೆಪ್ಟೆಂಬರ್

02 ಬೀದರ್ ವಾಯು ಪಡೆ ತರಬೇತಿ ಕೇಂದ್ರದ ವತಿಯಿಂದ ವೈಮಾನಿಕ ಪ್ರದರ್ಶನ

06 ಬೀದರ್‌ನಲ್ಲಿ ಯುವಕ, ಯುವತಿಯರಿಗೆ ಜಿಲ್ಲಾಮಟ್ಟದ ಗ್ರಾಮ ಸ್ವಾವಲಂಬಿ ಸಮಾವೇಶ.

17. ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಅನುಪಸ್ಥಿತಿಯಲ್ಲಿ

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯಿಂದ ರಾಷ್ಟ್ರ ಧ್ವಜಾರೋಹಣ.

19. ಬೀದರ್‌ನ ಆದರ್ಶ ಕಾಲೊನಿ ಹಾಗೂ ಜ್ಯೋತಿ ಕಾಲೊನಿಯಲ್ಲಿ ಸರಣಿ ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿದ ಪೊಲೀಸರು ಆತನಿಂದ ₹ 10 ಲಕ್ಷ ಮೌಲ್ಯದ 20 ತೊಲ ಚಿನ್ನಾಭರಣ ವಶ ಪಡಿಸಿಕೊಂಡರು.

22. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಜಿಲ್ಲೆಯ ಏಕೈಕ ಕ್ರೀಡಾ ವಸತಿ ಶಾಲೆ ಸೌಲಭ್ಯಗಳ ಕೊರತೆಯಿಂದ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದ್ದು, ವಸತಿ ಹಾಗೂ ಊಟದ ವ್ಯವಸ್ಥೆಯೂ ಇಲ್ಲದ ಕಾರಣ ಹಾಸ್ಟೆಲ್‌ ವಿದ್ಯಾರ್ಥಿಗಳ ಸಂಖ್ಯೆ 12ಕ್ಕೆ ಕುಸಿಯಿತು.

26. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022-23ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಜನಪರ ಉತ್ಸವದಲ್ಲಿ ದೇಸಿ ಕಲೆಗಳ ಅನಾವರಣ.

26. ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿ ಜಿಲ್ಲೆಗಳ ಅಬಕಾರಿ ಅಧಿಕಾರಿಗಳ ಸಮನ್ವಯ ಸಭೆ.

ಅಕ್ಟೋಬರ್

07. ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯವಾದ ಬೀದರ್‌ನ ಮಹಮೂದ್‌ ಗವಾನ್‌ ಸ್ಮಾರಕದ ಬಳಿ ನಡೆದ ಘಟನೆಗೆ ಪೊಲೀಸ್‌ ವೈಫಲ್ಯವೇ ಕಾರಣ ಎನ್ನುವ ವ್ಯಾಪಕ ಟೀಕೆಗಳು ಸಾರ್ವಜನಿಕರಿಂದ ವ್ಯಕ್ತವಾದವು. ಭಾರತೀಯ ಪುರಾತತ್ವ ಇಲಾಖೆ ಐದು ದಿನ ಮುಂಚಿತವಾಗಿಯೇ ಮಾಹಿತಿ ನೀಡಿದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು

ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿತು.

15. ಗ್ರಾಮ ಪಂಚಾಯಿತಿಯ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಸೂಚನೆ

18. ಔರಾದ್ ತಾಲ್ಲೂಕಿನ ಬಲ್ಲೂರ್ (ಜೆ) ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಿಪಿಟ್ ಕೇಂದ್ರಕ್ಕೆ ಶಂಕುಸ್ಥಾಪನೆ.
18. ಔರಾದ್‌, ಹುಮನಾಬಾದ್ ತೇರು ಮೈದಾನದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ

ನವೆಂಬರ್

02. ಎರಡು ವರ್ಷ ಎಡೆಬಿಡದೆ ಕಾಡಿದ ಕೋವಿಡ್‌ ಸೋಂಕು ತೊಲಗಿದ ನಂತರ ಜಿಲ್ಲೆಯ ಜನ ನಿರಾಳ ಭಾವ ತಾಳಿ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

06. ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಸರ್ಕಾರಿ ಶಾಲೆ ಎದುರು ಉಡಮನಳ್ಳಿ ಗ್ರಾಮದವರು ಪ್ರಯಾಣಿಸುತ್ತಿದ್ದ ಆಟೊ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಆಟೊದಲ್ಲಿದ್ದ ಏಳು ಪ್ರಯಾಣಿಕರು ಮೃತಪಟ್ಟರು.

15. ಸ್ಪರ್ಶ ಸಮುದಾಯದ ಮೇಲ್ವರ್ಗದವರಿಗೆ ಸುಳ್ಳು ಜಾತಿ ಪ್ರಮಾಣಪತ್ರ ಕೊಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಸಮಿತಿ ಬೃಹತ್‌ ಪ್ರತಿಭಟನೆ ನಡೆಸಿತು.

21. ನರಸಿಂಹ ಝರಣಿ ದರ್ಶನ ಅವಧಿ ವಿಸ್ತರಿಸಲಾಯಿತು. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಡಿಸೆಂಬರ್

09 ಔರಾದ್ ಹೊರ ವಲಯದಲ್ಲಿ 16 ಎಕರೆ ಪ್ರದೇಶದಲ್ಲಿ ಟ್ರೀಪಾರ್ಕ್‍ಗೆ ಶಂಕುಸ್ಥಾಪನೆ. ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹಾಗೂ ಅರಣ್ಯ ಅಧಿಕಾರಿಗಳು ಭಾಗಿ.

12. ಸೇನಾ ಭರ್ತಿ ರ್‍ಯಾಲಿಗೆ ಬಂದ ಬೆಳಗಾವಿ ಅಭ್ಯರ್ಥಿಗಳು ಸೌಕರ್ಯಗಳ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಬೇಕಾಯಿತು.

26. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಬೀದರ್‌ಗೆ ಭೇಟಿ ನೀಡಿ ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 17 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT