ಮಂಗಳವಾರ, ಅಕ್ಟೋಬರ್ 15, 2019
26 °C

ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆ: ಕೆ.ಎಸ್.ಈಶ್ವರಪ್ಪ ಟೀಕೆ

Published:
Updated:
Prajavani

ಶಿವಮೊಗ್ಗ: ಹಣ, ಜಾತಿಬಲದ ಮೇಲೆ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೇಲುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.

ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆಯನ್ನೇ ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಐದು ವರ್ಷಗಳು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಜನರಿಗೆ ಅನುಕೂಲವಾಗುವ ಒಂದೂ ಯೋಜನೆ ರೂಪಿಸಲಿಲ್ಲ. ಈಗ ಜನಪರ ಇರುವ ಸರ್ಕಾರ ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿ ಸಂಘಟಿತ ಪಕ್ಷ. ಗಾಂಧಿ ಕಂಡ ರಾಮರಾಜ್ಯದ ಕನಸು ಸಾಕಾರಗೊಳಿಸಲು ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಅವರ ಕೊನೆಯ ಮಾತೂ ‘ಹೇ ರಾಮ್’ ಆಗಿತ್ತು ಎಂದರು.

ಬಿಜೆಪಿಯಲ್ಲಿ ರಾಷ್ಟ್ರೀಯ ಬೆಳವಣಿಗೆ ಕುರಿತು ಸ್ಪಷ್ಟತೆ ಇದೆ. ಕಾರ್ಯಕರ್ತರು ಸಹ ಪಕ್ಷದ ನಡೆ ಅರ್ಥಮಾಡಿಕೊಳ್ಳಬೇಕು. ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ. ಸರಿಯಾದ ದಿಕ್ಕಿನಲ್ಲಿ ಆಡಳಿತ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಪಕ್ಷಕ್ಕೆ ಮತ್ತಷ್ಟು ಮಾರ್ಗದರ್ಶನ ತೋರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ ಮಾತನಾಡಿ, ನಮ್ಮದು ಅಭಿವೃದ್ಧಿಯ ಮಂತ್ರ. ಪ್ರಧಾನಿ ಮೋದಿ ನಮಗೆ ಮಾದರಿ. ಜಗತ್ತಿನ ಎಲ್ಲೆಡೆ ಭಾರತದ ಹಿರಿಮೆ ಎತ್ತಿ ಹಿಡಿದಿದ್ದಾರೆ. ಭಯೋತ್ಪಾದನೆ ನಿರ್ಮೂಲನೆಗೆ ಸಂಕಲ್ಪ ಮಾಡಿದ್ದಾರೆ. ಅವರ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.

ಬಿಜೆಪಿ ಮತ್ತಷ್ಟು ಗಟ್ಟಿಗೊಂಡಿದೆ. ಜಿಲ್ಲೆಯಲ್ಲೂ ಮತ್ತೆ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1.15 ಲಕ್ಷ ಹೊಸ ಸದಸ್ಯರ ನೋಂದಣಿ ಮಾಡಿಸಲಾಗಿದೆ. ಮೂರು ಲಕ್ಷ ಗುರಿ ತಲುಪಲಿದ್ದೇವೆ ಎಂದು ವಿವರ ನೀಡಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್, ಶಾಸಕರಾದ ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಆರ್.ಕೆ. ಸಿದ್ದರಾಮಣ್ಣ, ಮುಖಂಡರಾದ ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ವಿನೋದ್ ಪ್ರಭು, ಗಿರೀಶ್ ಪಟೇಲ್, ಲತಾ ಗಣೇಶ್, ಪವಿತ್ರಾ ರಾಮಯ್ಯ, ಮೇಯರ್ ಲತಾ ಗಣೇಶ್, ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Post Comments (+)