ಬುಧವಾರ, ನವೆಂಬರ್ 20, 2019
21 °C
ಸಂವಿಧಾನದ ಆಶಯಗಳೇ ಗೊತ್ತಿಲ್ಲದ ಬಿಜೆಪಿ

ರಾಜೀನಾಮೆ ನೀಡಿದ್ದು ನಾನಾ, 17 ಶಾಸಕರಾ? ಅವರೇನು ಹಾಲು ಕುಡಿವ ಮಕ್ಕಳಾ?: ಸಿದ್ದು

Published:
Updated:

ಶಿವಮೊಗ್ಗ: ಸಂವಿಧಾನದ ಆಶಯಗಳೇ ಗೊತ್ತಿಲ್ಲದ ಬಿಜೆಪಿ ಮುಖಂಡರು ಸಂವಿಧಾನ ರಕ್ಷಿಸಲು ಸಾಧ್ಯವೇ? ಚುನಾಯಿತ ಸರ್ಕಾರ ಬೀಳಿಸುವ ಮೂಲಕ ಅಧಿಕಾರ ಹಿಡಿದ ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುವುದೇ ಕೆಲಸ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಮಂಗಳವಾರ ಆಯೋಜಿಸಿದ್ದ ಚೈತನ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಿಗ್ಗೆ ಒಂದು ಪಕ್ಷ, ಸಂಜೆ ಮತ್ತೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವ ಶಾಸಕರಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು. ಮಿಸ್ಟರ್‌ ಯಡ್ಡಿಯೂರಪ್ಪ, ಮಿಸ್ಟರ್‌ ಈಶ್ವರಪ್ಪ ನೀವು ಸಂವಿಧಾನ ಓದಿಕೊಂಡಿದ್ದೀರಾ?’ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ನಿಮ್ಮ ಬಣ್ಣ ಈಗ ಬಯಲಾಗುತ್ತಿದೆ. ಯಡಿಯೂರಪ್ಪ ಅವರ ಆಡಿಯೊ ಸಾಕ್ಷ್ಯ ಸುಪ್ರೀಂ ಕೋರ್ಟ್ ಪರಿಗಣಿಸುತ್ತದೆ. ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಕ್ರಮ ಕೋರ್ಟ್‌ ಎತ್ತಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಬಿಜಿಪಿಯವರೇ ಆಡಿಯೊ ಟೇಪ್ ವೈರಲ್ ಮಾಡಿದ್ದಾರೆ. 17 ಶಾಸಕರು ರಾಜೀನಾಮೆ ನೀಡಿದ ಹಿಂದಿನ ಮರ್ಮ ಬಯಲಾಗಿದೆ. ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎನ್ನುವ ಇವರಿಗೆ ಬುದ್ದಿ ಇದೆಯಾ? ರಾಜೀನಾಮೆ ನೀಡಿದ್ದು ನಾನಾ, 17 ಶಾಸಕರಾ? ಅವರೆನು ಹಾಲು ಕುಡಿಯುವ ಮಕ್ಕಳಾ? ಸಣ್ಣವರಾ ಎಂದು ತಿರುಗೇಟು ನೀಡಿದರು.

ಕೇಂದ್ರದಿಂದ ಸೂಕ್ತ ನೆರೆ ಪರಿಹಾರ ತರಲೂ ಆಗದ ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ‌. ಈಚೆಗೆ ಅವರು ಮುಳ್ಳಿನ ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳಿದ್ದರು. ಪಾಪ ವಯಸ್ಸಾಗಿದೆ. ಬಿದ್ದು ಹೆಚ್ಚು ಕಡಿಮೆ ಮಾಡಿಕೊಂಡರೆ ಕಷ್ಟ ಎಂದು ರಾಜೀನಾಮೆ ಕೊಡಲು ಹೇಳಿದೆ. ಅದಕ್ಕೆ ನನ್ನನ್ನು ದುರಾಹಾಂಕಾರಿ ಎನ್ನುತ್ತಾರೆ. ಈಶ್ವರಪ್ಪ ಅವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕವೇ ಇಲ್ಲ ಎಂದು ವ್ಯಂಗ್ಯವಾಡಿದರು.

‘ನೋ ಟಾಸ್ಕ್ ನೋ ಫೋರ್ಸ್‌’
ಮಲೆನಾಡಿನ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಳಪೆ ಗುಣಮಟ್ಟದ ಆಮದು ಅಡಿಕೆ ನಿಯಂತ್ರಿಸಬೇಕಿತ್ತು. ಅದು ಬಿಟ್ಟು ಅಡಿಕೆ ಬೆಳೆಗೆ ಟಾಸ್ಕ್‌ಫೊರ್ಸ್ ರಚಿಸಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಅಧ್ಯಕ್ಷರು. ಅವರಿಗೆ ಟಾಸ್ಕ್‌ ಏನು ಎಂಬುದೇ ತಿಳಿದಿಲ್ಲ. ಇನ್ನೇನು ಫೋರ್ಸ್‌ ಮಾಡುತ್ತಾರೆ. ಇದು ‘ನೋ ಟಾಸ್ಕ್ ನೋ ಫೋರ್ಸ್‌’ ಎಂದು ಕುಟುಕಿದರು.

ಪ್ರತಿಕ್ರಿಯಿಸಿ (+)