ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಸಿಸಿ ವಕ್ತಾರ ರಣದೀಪ್ ಬಂಧನಕ್ಕೆ ಬಿಜೆಪಿ ಆಗ್ರಹ

Last Updated 25 ಮಾರ್ಚ್ 2019, 13:44 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ವಿರುದ್ಧ ನಕಲಿ ಡೈರಿ ಸೃಷ್ಟಿಸಿ, ಗಂಭೀರ ಆರೋಪ ಮಾಡಿರುವ ಎಐಸಿಸಿ ವಕ್ತಾರ ರಣದೀಪ್ ಸುರ್ಜವಾಲ ಅವರನ್ನು ತಕ್ಷಣ ಬಂಧಿಸಬೇಕು. ಯಾರೂ ಕೂಡ ಈ ಡೈರಿ ವಿಷಯ ಪ್ರಸ್ತಾವ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರುದ್ರೇಗೌಡ ಒತ್ತಾಯಿಸಿದರು.

ಆದಾಯ ಇಲಾಖೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದೆ. ಅವರ ಮನೆಯ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ವಶಪಡಿಸಿಕೊಂಡಿದೆ. ₹ 75 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ. ಇಂತಹ ಆರೋಪ ಹೊತ್ತ ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಈ ಬಾರಿ 2.5 ಲಕ್ಷ ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಚುನಾವಣೆಗೆ ಬಿಜೆಪಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಶಕ್ತಿಕೇಂದ್ರಗಳ ಮೂಲಕ ಬೂತ್‌ಮಟ್ಟದಿಂದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಜನವರಿಯಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಶಿವಮೊಗ್ಗ ನಗರದಲ್ಲೇ 2 ಸಾವಿರ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಪಕ್ಷದ ಬಾವುಟ ಹಾರಾಡುತ್ತಿವೆ. ಕೇಂದ್ರದ ಯೋಜನೆಗಳು ಗೆಲುವಿಗೆ ಸಹಕಾರಿಯಾಗಿವೆ ಎಂದರು.

ಕೇಸು ದಾಖಲು

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಯಾವುದೇ ಆಧಾರ ಇಲ್ಲದೇ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪ ಮಾಡಿರುವ ರಣದೀಪ್ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದಲ್ಲಿ ಯಾವ ಹುರುಳೂ ಇಲ್ಲ. ಯಾವುದೋ ಜೆರಾಕ್ಸ್ ಹಾಳೆ ಆಧಾರದ ಮೇಲೆ ಆರೋಪ ಮಾಡಲಾಗಿದೆ. ಇದು ನ್ಯಾಯಾಂಗ ವ್ಯವಸ್ಥೆ ಮೇಲೂ ಕಳಂಕ ತಂದಿದೆ ಎಂದು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಡಿ.ಎಸ್.ಅರುಣ್, ಎನ್.ಜೆ.ರಾಜಶೇಖರ್, ಹಿರಣ್ಣಯ್ಯ, ಮಧುಸೂದನ್, ರತ್ನಾಕರಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT