ಭಾನುವಾರ, ಜನವರಿ 19, 2020
23 °C

ಬ್ಲ್ಯಾಕ್‌ಮೇಲ್‌; 3 ಪತ್ರಕರ್ತರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದ ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್‌ ಮಾಡಿ, ಹಣ ವಸೂಲಿ ಮಾಡಿದ ಆರೋಪದ ಮೇಲೆ ಮೂರು ಜನ ಪತ್ರಕರ್ತರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇಂಡಿ ತಾಲ್ಲೂಕು ಹೊರ್ತಿ ಗ್ರಾಮದ ಪ್ರಕಾಶ ಕೋಳಿ (ಗುಲಿಸ್ಥಾನ ಟಿವಿ), ನಗರದ ಬಾಗಾಯತ್‌ ಗಲ್ಲಿಯ ಝಾಕೀರ್‌ಹುಸೇನ್‌ ಅಮೀನಗಡ (ಗುಲಿಸ್ಥಾನ ಟಿವಿ ಕ್ಯಾಮೆರಾಮನ್‌), ಸಿಂದಗಿ ತಾಲ್ಲೂಕು ದೇವಣಗಾಂವ ಗ್ರಾಮದ ದಶರಥ ಸೊನ್ನ (ಝೆಡ್‌ ಟಿವಿ) ಬಂಧಿತರು. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ‘ಮನೆಯೊಂದಕ್ಕೆ ನುಗ್ಗಿದ ಈ ನಾಲ್ಕು ಜನರು, ತಾವು ಪೊಲೀಸರು ಎಂದು ಹೇಳಿಕೊಂಡಿದ್ದಾರೆ. ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಬೆದರಿಸಿ, ವಿಡಿಯೊ ಮಾಡಿಕೊಂಡಿದ್ದಾರೆ. ಆ ಬಳಿಕ ₹1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಕಂಗಾಲಾದ ಮಹಿಳೆ, ಪರಿಚಯಸ್ಥರಿಂದ ಆರೋಪಿಯ ಬ್ಯಾಂಕ್ ಖಾತೆಗೆ ₹60 ಸಾವಿರ ನಗದು ವರ್ಗಾವಣೆ ಮಾಡಿಸಿದ್ದಾರೆ’ ಎಂದರು.

‘ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಪದೇ ಪದೇ ಕರೆ ಮಾಡಿ, ಉಳಿಕೆ ₹40 ಸಾವಿರ ಕೊಡುವಂತೆ ಪೀಡಿಸುತ್ತಿದ್ದರು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದರು. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು