ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಸಂತೆ ಬಲು ಜೋರು

ಹೊರ್ತಿ ರೇವಣಸಿದ್ಧೇಶ್ವರ ಜಾತ್ರೆ; ಭಕ್ತರ ಸಡಗರ
Last Updated 10 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಹೊರ್ತಿ: ಗ್ರಾಮದ ಆರಾಧ್ಯ ದೇವರಾದ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಜಾನುವಾರುಗಳ ಜಾತ್ರೆ ಬಲು ಜೋರಾಗಿ ನಡೆದಿದ್ದು, ಬೆಲೆಗಳ ತಕ್ಕಂತೆ ಜಾನುವಾರುಗಳು ಮಾರಾಟವಾದವು.

ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ರಾಸುಗಳು ಕೂಡಿದ್ದರಿಂದ ಜಾತ್ರೆ ಜೋರಾಗಿತ್ತು.

‘ಪ್ರತಿ ಸಲಕ್ಕಿಂತ ಈ ಸಲ ದೊಡ್ಡ ಪ್ರಮಾಣದಲ್ಲಿ ಎತ್ತು, ಹೋರಿ, ಹಸುಗಳು ಮಾರಾಟಕ್ಕೆ ಸೇರಿದ್ದವು. ಆದರೆ, ಈ ಸಲ ವರ್ಷಕ್ಕಿಂತ ಕಾರ್ನಟಕ- ಮಹಾರಾಷ್ಟ್ರ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿದ್ದರಿಂದ ಜಾತ್ರೆಯ ಸಡಗರ ಹೆಚ್ಚಿದೆ’ ಎಂದು ಗ್ರಾಮದ ರೈತ ಶ್ರೀಶೈಲ ಶಿವೂರ ಮತ್ತು ರೋಡಗಿ ಗ್ರಾಮದ ಸಿದ್ದರಾಮಪ್ಪ ಕಲ್ಲೂರಕರ ತಿಳಿಸಿದರು.

‘ಈ ಜಾತ್ರೆಯಲ್ಲಿ ಹೆಚ್ಚಾಗಿ ಖಿಲಾರಿ ರಾಸುಗಳು ಸೇರಿದ್ದು, ಅದರಂತೆ ಕಡಿಮೆ ಸಂಖ್ಯೆಯಲ್ಲಿ ಜವಾರಿ ರಾಸುಗಳು ಮತ್ತು ಇದೇ ತಳಿಯ ಹೋರಿಗಳು ವಿಶೇಷವಾಗಿ ಯುವ ರೈತರ ಗಮನ ಸೆಳೆಯುತ್ತಿವೆ. ಜರ್ಸಿ, ಖಿಲಾರಿ, ಜವಾರಿ ಆಕಳುಗಳು ಹೈನುಗಾರಿಕೆಯ ಗ್ರಾಹಕರನ್ನು ಸೆಳೆಯುತ್ತಿವೆ. ಹೋರಿಗಳು ಜೋಡಿಯೊಂದಕ್ಕೆ ₹1.50 ಲಕ್ಷದಿಂದ ₹1.80 ಲಕ್ಷದವರೆಗೆ ಬೆಲೆ ಹೊಂದಿವೆ’ ಎಂದು ಚಣೇಗಾಂವದ ಯುವ ರೈತ ಧನಸಿಂಗ್ ನಾಯಕ ಮತ್ತು ಇಂಚಗೇರಿ ತಾಂಡಾ-1ರ ರೈತ ರೇವು ರಾಠೋಡ, ಸುರೇಶ ವಡ್ಡರ ಹೇಳಿದರು.

‘ಖಿಲಾರಿ ಎತ್ತುಗಳು ಸೇರುತ್ತಿರುವ ಕಾರಣ ನಾವು ₹55 ಸಾವಿರಕ್ಕೆ ಒಂದು ಜತೆ ಖಿಲಾರಿ ಎತ್ತುಗಳನ್ನು ಖರೀದಿಸಿದ್ದೇವೆ. ಈ ಎತ್ತುಗಳು ಜೋರಾಗಿ ನಡೆಯುತ್ತವೆ. ಹೂಡಲು, ಬಿತ್ತಲು, ಎಡೆ ಕುಂಟೆ, ದೂರದ ಹೊಲಗಳಿಗೆ ತೆರಳಲು ಎತ್ತಿನ ಗಾಡಿಗೆ ಬಹಳಷ್ಟು ಅನೂಕೂಲಕರವಾಗಿವೆ’ ಎಂದು ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕಿನ ಕ್ಯಾರಕಲಕೊಪ್ಪ ಗ್ರಾಮದ ರೈತ ಸಂಜೀವಗೌಡ ಹೊಸಗೌಡರ ತಿಳಿಸಿದರು.

‘ಜಾತ್ರೆಯಲ್ಲಿ ರೈತರು ತಮ್ಮ ರಾಸುಗಳನ್ನು ಮಧ್ಯಮ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಈ ಬಾರಿ ನಮ್ಮ ವ್ಯಾಪಾರ ಕೂಡಾ ಉತ್ತಮ ರೀತಿಯಲ್ಲಿ ಆಗಿದೆ’ ಎಂದು ಸೊಲ್ಲಾಪುರ ಜಿಲ್ಲೆ, ಅಕ್ಕಲಕೋಟದ ದನಗಳ ವ್ಯಾಪಾರಿ ಮುಸಾಫ್ ಪಠಾಣ, ಯಾಕೂಬ್ ಶೇಕ್ ಮತ್ತು ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT