ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ:13 ಸಾವಿರ ರೈತರಿಗೆ ಪರಿಹಾರ

13,931 ಮಂದಿ ಫಲಾನುಭವಿಗಳಿಗೆ ತಲಾ ₹5000 ಪರಿಹಾರ, ₹6.50 ಕೋಟಿ ಜಮೆ
Last Updated 16 ಜುಲೈ 2020, 17:16 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದ ಜಿಲ್ಲೆಯ 13,001 ಬೆಳೆಗಾರರಿಗೆ ಸರ್ಕಾರ ಘೋಷಿಸಿದ್ದ ₹5,000 ಪರಿಹಾರ ತಲುಪಿದೆ. ₹6.50 ಕೋಟಿಯಷ್ಟು ಪರಿಹಾರವನ್ನು ಕೃಷಿ ಇಲಾಖೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮೆಕ್ಕೆಜೋಳದ ಬೆಳೆ ಕುಸಿದಿತ್ತು. ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿಸುವವರು ಯಾರೂ ಇರಲಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೂರನೇ ಪ್ಯಾಕೇಜ್‌ ಘೋಷಿಸುವ ಸಂದರ್ಭದಲ್ಲಿ ರಾಜ್ಯದಲ್ಲಿರುವ 10 ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ಒಂದು ಬಾರಿಗೆ ₹5,000 ಪರಿಹಾರ ನೀಡುವುದಾಗಿ ಹೇಳಿದ್ದರು.

ಅದರಂತೆ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಬೆಳೆಗಾರರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕೃಷಿ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 13,931 ರೈತರನ್ನು ಫಲಾನುಭವಿಗಳನ್ನು ಗುರುತಿಸಲಾಗಿದೆ.

ಕೃಷಿ ಇಲಾಖೆಯ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ, ಒಟ್ಟು ಫಲಾನುಭವಿಗಳಲ್ಲಿ 13,001 ಮಂದಿಯ ಬ್ಯಾಂಕ್‌ ಖಾತೆಗೆ ತಲಾ ₹5,000 ದಂತೆ ಹಣ ಜಮೆ ಮಾಡಲಾಗಿದೆ.

13,054ರಷ್ಟು ರೈತರ ವಿವರಗಳನ್ನು ಪರಿಹಾರ ಧನ ಪಾವತಿಗಾಗಿ ಕಳುಹಿಸಲಾಗಿತ್ತು. ಈ ಪೈಕಿ 13,001 ರೈತರಿಗೆ ಪಾವತಿಯಾಗಿದೆ. ಉಳಿದವರದ್ದು ತಾಂತ್ರಿಕ ಕಾರಣದಿಂದಾಗಿ ಪಾವತಿಯಾಗಿಲ್ಲ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಆಧಾರ್‌ ಜೋಡಣೆಯಾಗಿಲ್ಲ: ‘ಒಟ್ಟು ಫಲಾನುಭವಿಗಳ ಪೈಕಿ 577 ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆಯಾಗಿಲ್ಲ. 238 ರೈತರ ಖಾತೆಗೆ ಆಧಾರ್‌ ಜೋಡಣೆಯಾಗಿದ್ದರೂ, ಸಕ್ರಿಯವಾಗಿಲ್ಲ. 62 ಮಂದಿಯ ಆಧಾರ್‌ ದೃಢೀಕರಣ ಪ್ರಕ್ರಿಯೆ ತಿರಸ್ಕೃತವಾಗಿದೆ. ಈ ಕಾರಣಗಳಿಂದಾಗಿ ಪರಿಹಾರ ಧನ ಪಾವತಿಯಾಗಿಲ್ಲ. ಸಮಸ್ಯೆ ಬಗೆಹರಿದ ತಕ್ಷಣ ಅವರಿಗೂ ಹಣ ಬರಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಬೆಳೆ ಸಮೀಕ್ಷೆ ನಡೆಸಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ₹6.50 ಕೋಟಿಯಷ್ಟು ಪರಿಹಾರ ಧನ ಪಾವತಿ ಮಾಡಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೀಕ್ಷೆಗೆ ಆಕ್ಷೇಪ: ಫಲಾನುಭವಿಗಳನ್ನು ಗುರುತಿಸುವುದಕ್ಕಾಗಿ ನಡೆಸಲಾದ ಬೆಳೆ ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಹನೂರು ಭಾಗದಲ್ಲಿ ಕೆಲವು ರೈತರು ಈ ಆರೋಪ ಮಾಡಿದ್ದು, ‘ಸಮೀಕ್ಷೆಗೆ ಬಂದ ಸಿಬ್ಬಂದಿ ಆ್ಯಪ್‌ನಲ್ಲಿ ಕೃಷಿಯೇತರ ಭೂಮಿ ಎಂದು ನಮೂದಿಸುವುದರಿಂದ ಪರಿಹಾರದಿಂದ ವಂಚಿತರಾಗಿದ್ದೇವೆ’ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಹನೂರು ತಾಲ್ಲೂಕಿನಲ್ಲಿ ಹೆಚ್ಚು ಫಲಾನುಭವಿಗಳು

ಜಿಲ್ಲೆಯಲ್ಲಿ ಹನೂರು ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಮೆಕ್ಕೆ ಜೋಳ ಬೆಳೆಯುತ್ತಾರೆ. ಫಲಾನುಭವಿಗಳ ಸಂಖ್ಯೆ ಅಲ್ಲಿಯೇ ಹೆಚ್ಚಿದೆ. ಅಲ್ಲಿ 6,569 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 6,062 ಮಂದಿಗೆ ಪರಿಹಾರ ದೊರಕಿದೆ.

ಗುಂಡ್ಲುಪೇಟೆ ಎರಡನೇ ಸ್ಥಾನದಲ್ಲಿದೆ. ಪರಿಹಾರ ನೀಡಲು ಗುರುತಿಸಲಾದ 2,633 ರೈತರ ಪೈಕಿ 2,488 ಬೆಳೆಗಾರರ ಖಾತೆಗೆ ಹಣ ಜಮಾವಣೆ ಆಗಿದೆ. ನಂತರದ ಸ್ಥಾನದಲ್ಲಿ ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT