ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಬಿಸಿಯೂಟ ಸೇವಿಸಿ 14 ಮಕ್ಕಳು ಅಸ್ವಸ್ಥ

ಚಿರಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ; ಆಸ್ಪತ್ರೆಗೆ ದಾಖಲು
Published 15 ಮಾರ್ಚ್ 2024, 15:43 IST
Last Updated 15 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಚಿರಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊಳಕೆ ಕಟ್ಟಿದ ಸಾಂಬರ್‌ ಸೇವಿಸಿ 14 ಮಕ್ಕಳು ಶುಕ್ರವಾರ ಅಸ್ವಸ್ಥರಾಗಿದ್ದಾರೆ.

ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 35 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಹುರುಳಿ ಮೊಳಕೆ ಕಾಳಿನ ಸಾಂಬರ್ ತಯಾರಿಸಿದ್ದು, ಅದನ್ನು ತಿಂದ ಮಕ್ಕಳ ಪೈಕಿ 14 ಮಂದಿಗೆ ವಾಂತಿ ಕಾಣಿಸಿಕೊಂಡಿದೆ. ಅವರನ್ನು ಬೊಮ್ಮನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾರೆ. ಉಳಿದ 17 ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ ಮನೆಗೆ ಕಳುಹಿಸಲಾಗಿದೆ. ನಂತರ ಪೋಷಕರ ಒತ್ತಾಯದ ಮೇರೆಗೆ ಅಸ್ವಸ್ಥಗೊಂಡಿದ್ದ 14 ಹಾಗೂ ಮನೆಗೆ ತೆರಳಿದ್ದ 17 ವಿದ್ಯಾರ್ಥಿಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ನಾಲ್ವರು ವಿದ್ಯಾರ್ಥಿಗಳ ಪೋಷಕರು, ತಮ್ಮ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಗೆ ಕಳುಹಿಸದೆ ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ.

‘ಬೊಮ್ಮನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಕ್ಕಳು ಆರೋಗ್ಯವಾಗಿದ್ದರು. ಆದರೂ ಪೋಷಕರ ಒತ್ತಾಯದ ಮೇರೆಗೆ ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ದು ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಯಿತು’ ಎಂದು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ತಿಳಿಸಿದರು.

ವಾಸನೆ ಬರುತ್ತಿದ್ದ ಸಾಂಬರ್: ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಮೊಳಕೆ ಕಾಳನ್ನು ನಾಲ್ಕೈದು ದಿನಗಳ ಹಿಂದೆಯೇ ಕಟ್ಟಿ ಇಡಲಾಗಿತ್ತು. ಇದರಿಂದ ಮೊಳಕೆ ಕಾಳು ವಾಸನೆ ಬರುತ್ತಿತ್ತು. ಅದನ್ನೇ ಹಾಕಿ ಸಾಂಬರ್ ಮಾಡಿದ ನಂತರವೂ ಹೆಚ್ಚಿನ ವಾಸನೆ ಬರುತ್ತಿತ್ತು. ಹೀಗಿದ್ದರೂ ಅಡುಗೆಯವರು ಸಾಂಬರ್ ಮಾಡಿ ಬಡಿಸಿದ ಕಾರಣ ಮಕ್ಕಳು ಅದನ್ನು ತಿಂದಿದ್ದಾರೆ. ಈ ಬಗ್ಗೆ ಮಕ್ಕಳೇ ನಮಗೆ ಹೇಳಿದರು’ ಎಂದು ಪೋಷಕರಾದ ಸುರೇಶ್ ದೂರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ: ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

‘ಮಕ್ಕಳು ಸೇವಿಸಿರುವ ಊಟದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಮಕ್ಕಳ ಆರೋಗ್ಯ ವಿಚಾರಣೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು’ ಎಂದು ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT