ಮಂಗಳವಾರ, ಜನವರಿ 28, 2020
24 °C
ನೆರೆ ಮನೆಯವನಿಂದ ನಿರಂತರ ಅತ್ಯಾಚಾರ, ಪೋಷಕರಿಗೆ ತಡವಾಗಿ ತಿಳಿಯಿತು ವಿಷಯ

ಗಂಡು ಮಗುವಿಗೆ ಜನ್ಮ ನೀಡಿದ 14ರ ಬಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: 14 ವರ್ಷದ ಬಾಲಕಿಯೊಬ್ಬಳು ನಗರದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 

‘ಎರಡು ದಿನಗಳ ಹಿಂದೆಯೇ ಹೆರಿಗೆ ಆಗಿದೆ. ಸಹಜ ಹೆರಿಗೆಯಾಗಿದ್ದು, ಮಗು 2.7 ಕೆಜಿ ತೂಕವಿದೆ. ಬಾಣಂತಿ ಇನ್ನೂ ಬಾಲಕಿ ಆಗಿರುವುದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ’ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೃಷ್ಣಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆ: ಬಾಲಕಿಯು ಗುಂಡ್ಲುಪೇಟೆ ತಾಲ್ಲೂಕಿನವಳಾಗಿದ್ದು, ನೆರೆ ಮನೆಯನೊಬ್ಬ ಈಕೆಯ ಮೇಲೆ ಏಳೆಂಟು ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. 

‘ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವ್ಯಕ್ತಿಯು ಬಾಲಕಿಯ ಮನೆಗೆ ಬಂದು ಸಲುಗೆಯಿಂದ ನಡೆದುಕೊಂಡು, ದೈಹಿಕ ಸಂಪರ್ಕ ಬೆಳೆಸಿದ್ದ. ಬಾಲಕಿಯೂ ವಿಷಯವನ್ನು ಪೋಷಕರಿಗೆ ತಿಳಿಸಿರಲಿಲ್ಲ. ಆಕೆ ಶಾಲೆಗೂ ಹೋಗುತ್ತಿದ್ದಳು. ತಿಂಗಳ ಹಿಂದೆ ಪೋಷಕರು ತೀವ್ರ ವಿಚಾರಣೆಗೆ ಒಳಪ‍ಡಿಸಿದಾಗ ಆಕೆ ವಿ‌ಷಯ ತಿಳಿಸಿದ್ದಳು. ನಂತರ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಪ್ರಕರಣ ದಾಖಲಾದ ನಂತರ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಅವು ಹೇಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು