ಮಂಗಳವಾರ, ಅಕ್ಟೋಬರ್ 20, 2020
21 °C
ಕಳ್ಳಬೇಟೆ ತಡೆ ಶಿಬಿರಗಳ ತಲಾ ಒಬ್ಬ ಸಿಬ್ಬಂದಿ ಮನೆಗೆ

ಹನೂರು: ಕಾವೇರಿ ವನ್ಯಧಾಮದಲ್ಲಿ ಹಣಕಾಸಿನ ಮುಗ್ಗಟ್ಟು; 48 ವಾಚರ್‌ಗಳ ವಜಾ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ 48 ಕಳ್ಳಬೇಟೆ ತಡೆ ಶಿಬಿರಗಳಲ್ಲಿ (ಎಪಿಸಿ) ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ವಾಚರ್‌ಗಳಲ್ಲಿ ತಲಾ ಒಬ್ಬರನ್ನು ಕೆಲಸದಿಂದ ತೆಗೆಯಲಾಗಿದೆ. 

ಅನುದಾನದ ಕೊರತೆಯಿಂದ ಅನಿವಾರ್ಯವಾಗಿ ಕೆಲಸದಿಂದ ತೆಗೆಯಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ವನ್ಯಧಾಮದ ವ್ಯಾಪ್ತಿಯಲ್ಲಿ ಕನಕಪುರ ಹಾಗೂ ಹನೂರು ಉಪ ವಿಭಾಗಗಳಿವೆ. ಕನಕಪುರ ಉಪ ವಿಭಾಗಕ್ಕೆ ಮುಗ್ಗೂರು, ಹಲಗೂರು ಸಂಗಮ ವನ್ಯಜೀವಿ ವಲಯಗಳು ಬರುತ್ತವೆ ಹಾಗೂ ಹನೂರು ಉಪ ವಿಭಾಗದಲ್ಲಿ ಕೊತ್ತನೂರು, ಹನೂರು, ಕೌದಳ್ಳಿ ಹಾಗೂ ಗೋಪಿನಾಥಂ ವನ್ಯಜೀವಿ ವಲಯಗಳಿವೆ. ಈ ಏಳು ವನ್ಯಜೀವಿ ವಲಯಗಳಲ್ಲಿ 48 ಕಳ್ಳತಡೆ ಬೇಟೆ ಶಿಬಿರಗಳಿವೆ.

ಶಿಬಿರಗಳಲ್ಲಿ ಒಬ್ಬರು ಕಾಯಂ ವಾಚರ್‌ನೊಂದಿಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಮೂವರು ಅಥವಾ ನಾಲ್ವರು ನಾಲ್ವರು ವಾಚರ್‌ಗಳು ಕರ್ತವ್ಯ ನಿರ್ವಹಿಸುತ್ತಾರೆ. ವನ್ಯಧಾಮದ ಪ್ರತಿ ಶಿಬಿರದಲ್ಲೂ ಈಗ ಒಬ್ಬೊಬ್ಬ ವಾಚರ್‌ಗಳನ್ನು ವಜಾ ಮಾಡಿರುವುದರಿಂದ, 48 ಮಂದಿ ಕೆಲಸವಿಲ್ಲದೇ ಮನೆಯಲ್ಲೇ ಇರುವಂತಾಗಿದೆ.

ಸಿಬ್ಬಂದಿಯನ್ನು ತೆಗೆದು ಹಾಕಿರುವುದರಿಂದ ಅರಣ್ಯ ಅ‍ಪರಾಧಗಳು ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನಿಯಮ ಉಲ್ಲಂಘನೆ: ಕೋವಿಡ್‌ ಹಾವಳಿಯಿಂದಾಗಿ ಲಾಕ್ ಡೌನ್ ಮಾಡಿದ್ದ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸದಂತೆ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿತ್ತು.

ಆದರೆ, ವನ್ಯಧಾಮದ ಅಧಿಕಾರಿಗಳು ಇದನ್ನು ಪಾಲನೆ ಮಾಡಿಲ್ಲ ಎಂದು ಕೆಲಸ ಕಳೆದುಕೊಂಡವರ ಆರೋಪ. ‘ಬೇರೆ ಯಾವ ವನ್ಯಧಾಮದಲ್ಲಿ ಇಂತಹ ನಿರ್ಧಾರ ಕೈಗೊಂಡಿಲ್ಲ. ಅಲ್ಲಿ ಇಲ್ಲದ ಹಣಕಾಸಿನ ಮುಗ್ಗಟ್ಟು, ಇಲ್ಲಿ ಮಾತ್ರ ಇದೆಯೇ’ ಎಂದು ಅವರು ಪ್ರಶ್ನಿಸುತ್ತಾರೆ. 

‘ಇದೇ ಕೆಲಸವನ್ನು ನಂಬಿ ಕುಟುಂಬ ಸಾಕುತ್ತಿದ್ದೆವು. ಕೆಲಸದಿಂದ ತೆಗೆದು ಹಾಕಿರುವುದರಿಂದ ಮುಂದೆ ಏನು ಮಾಡುವುದು ಎಂಬುದೇ ಚಿಂತೆಯಾಗಿದೆ’ ಎಂದು ವಜಾಗೊಂಡ ಸಿಬ್ಬಂದಿ ಹೇಳುತ್ತಾರೆ.

‘ಒಂದು ವಾರ ಕಾರ್ಯ ನಿರ್ವಹಿಸಿ ರಜೆಗೆ ಮನೆಗೆ ಹೋಗಿದ್ದೆ. ಅಧಿಕಾರಿಗಳು ಕರೆ ಮಾಡಿ, ‘ನಿನ್ನನ್ನು ಕೆಲಸದಿಂದ ವಜಾಗೊಳಿಸಿದ್ದೇವೆ. ನಾಳೆಯಿಂದ ಕ್ಯಾಂಪಿಗೆ ಬರಬೇಡ’ ಎಂದು ಹೇಳಿದರು. ಮಾರನೇ ದಿನ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಕೇಳಿದಾಗ, ‘ಪ್ರತಿ ಕ್ಯಾಂಪಿನಲ್ಲೂ ಒಬ್ಬ ವಾಚರ್ ಅನ್ನು ತೆಗೆಯುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ತೆಗೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು. ಈಗ ಏನು ಮಾಡಬೇಕೆಂಬುದೇ ತೋಚದಂತಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ತಿಂಗಳಿಗೆ ನಾಲ್ಕು ದಿನ ರಜಾದಿನಗಳನ್ನು ಬಿಟ್ಟು 26 ದಿನಗಳಿಗೆ ವೇತನ ನೀಡುವಂತೆ ಕಾರ್ಮಿಕ ‌ಇಲಾಖೆ ಸೂಚಿಸಿದೆ. ಈ ಆದೇಶವನ್ನು ಮಾತ್ರ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವ ನಮ್ಮ ಅಧಿಕಾರಿಗಳು ಲಾಕ್‌ಡೌನ್ ಸಮಯದಲ್ಲಿ ಅನುದಾನ ಕೊರತೆ ಎಂಬ ಕಾರಣಕ್ಕೆ ಯಾರನ್ನೂ ಕೆಲಸದಿಂದ ತೆಗೆದು ಹಾಕುವಂತಿಲ್ಲ ಎಂಬ ಆದೇಶವನ್ನು ಯಾಕೆ ಪಾಲಿಸುತ್ತಿಲ್ಲ’ ಎಂಬುದು ಅವರ ಪ್ರಶ್ನೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ್ ಅವರು, ‘ಈ ಬಾರಿ ಹಣಕಾಸಿನ ತೊಂದರೆಯಾಗಿರುವುದರಿಂದ ಪ್ರತಿ ಶಿಬಿರದಲ್ಲಿ ಒಬ್ಬ ಸಿಬ್ಬಂದಿಯನ್ನು ಆಗಸ್ಟ್ ತಿಂಗಳಿನಿಂದ ವಜಾ ಮಾಡಲಾಗಿದೆ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು