ಗುರುವಾರ , ಅಕ್ಟೋಬರ್ 22, 2020
27 °C

ಚಾಮರಾಜನಗರಕ್ಕೆ 500 ಟನ್‌ ಯೂರಿಯಾ: ಸಚಿವ ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಚಾಮರಾಜನಗರ ಜಿಲ್ಲೆಯಲ್ಲಿರುವ ಯೂರಿಯಾ ಕೊರತೆ ನಿವಾರಣೆಗಾಗಿ ಇನ್ನೆರಡು ದಿನಗಳಲ್ಲಿ 500 ಟನ್‌ಗಳಷ್ಟು ಪೂರೈಕೆ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು. 

ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿ ಮಧ್ಯೆ, ಪಟ್ಟಣದ ರೈತ ಸಂಪರ್ಕಕ್ಕೆ ಭೇಟಿ ನೀಡಿ ರೈತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಅವರು ಸಮಾಲೋಚಿಸಿದರು.

ಈ ಸಂದರ್ಭದಲ್ಲಿ ರೈತರು ಹನೂರು ಭಾಗದಲ್ಲಿ ಯೂರಿಯಾ ಕೊರತೆ ಇದ್ದು, ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿದ ಸಚಿವರು, ತಕ್ಷಣ ಪೂರೈಸುವಂತೆ ಸೂಚಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ ಅವರು, ‘ಯೂರಿಯಾ ಸಮಸ್ಯೆಯ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈಗಾಗಲೇ 200 ಟನ್‌ಗೆ ಬೇಡಿಕೆ ಸಲ್ಲಿಸಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ 300 ಟನ್ ಸೇರಿದಂತೆ ಇನ್ನು ಎರಡು ಮೂರು ದಿನಗಳಲ್ಲಿ 500 ಟನ್ ಯೂರಿಯಾ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು. 

‘ರಾಜ್ಯದಲ್ಲಿ ಈಗಾಗಲೇ 2.30 ಲಕ್ಷ ಟನ್‌ ಯೂರಿಯಾವನ್ನು ಹೆಚ್ಚುವರಿಯಾಗಿ ರೈತರಿಗೆ ನೀಡಲಾಗಿದೆ. ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, 148 ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ ಅವರ ಪರವಾನಗಿಗಳನ್ನು ರದ್ದುಪಡಿಸಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದರು. 

ಪಕ್ಷಕ್ಕೆ ಜಯ: ‘ಉಪ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜರಾಜೇಶ್ವರಿ ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಶಾಸಕ ಆರ್.ನರೇಂದ್ರ, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ, ಸಹಾಯಕ ಕೃಷಿ ನಿರ್ದೇಶಕಿ ಸುಂದ್ರಮ್ಮ, ಕೃಷಿ ಇಲಾಖೆ ಅಧಿಕಾರಿಗಳಾದ ರಘುವೀರ್, ದೊರೆಸ್ವಾಮಿ, ಧರ್ಮೇಂದ್ರ ಇನ್ನಿತರರು ಹಾಜರಿದ್ದರು.

ಬೆಳೆ ವಿಮೆಗೆ ₹205 ಕೋಟಿ ಬಿಡುಗಡೆ

ಐದು ವರ್ಷಗಳಿಂದ ಬಾಕಿಯಿರುವ ಬೆಳೆವಿಮೆಯ ಹಣವನ್ನು ರೈತರಿಗೆ ಪಾವತಿಸಲು ಈಗಾಗಲೇ ₹205 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನೂ ₹90 ಕೋಟಿ ಬಾಕಿ ಇದ್ದು, ಶೀಘ್ರ ಬಿಡುಗಡೆಗೆ ಕ್ರಮವಹಿಸಲಾಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಇಲ್ಲದ ರೈತರಿಗೆ ಚೆಕ್ ಮೂಲಕ ಬೆಳೆವಿಮೆ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿ.ಸಿ.ಪಾಟೀಲ ಅವರು ತಿಳಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ಕಾನೂನುಗಳನ್ನು ಸಮರ್ಥಿಸಿಕೊಂಡ ಅವರು, ‘ಒಂದೇ ಬೆಳೆ – ಒಂದೇ ಮಾರುಕಟ್ಟೆ ಯೋಜನೆಯು ರೈತರಿಗೆ ಸಹಕಾರಿಯಾಗಲಿದ್ದು, ಈ ಹಿಂದೆ ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಬೇಕಿತ್ತು. ಒಂದೊಮ್ಮೆ ಅಂತರರಾಜ್ಯ ಮಾರುಕಟ್ಟೆಗೆ ಕೊಂಡೊಯ್ಯಬೇಕಿದ್ದಲ್ಲಿ ಸೆಸ್ ಪಾವತಿ ಮಾಡಬೇಕಿತ್ತು. ಈ ನೂತನ ಯೋಜನೆಯಿಂದ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.