ಶನಿವಾರ, ಜುಲೈ 31, 2021
23 °C
ಗುಂಡ್ಲುಪೇಟೆಯ ಐವರು, ಕೊಳ್ಳೇಗಾಲದ ಒಬ್ಬರಿಗೆ ಕೋವಿಡ್‌–19 ದೃಢ, ಹಿಗ್ಗಿದ ಗುಣಮುಖರ ಸಂಖ್ಯೆ

ಕೋವಿಡ್‌–19| ಚಾಮರಾಜನಗರದಲ್ಲಿ ಮಂಗಳವಾರ ಆರು ಮಂದಿ ಆಸ್ಪತ್ರೆಗೆ, ಏಳು ಜನ ಮನೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ ಆರು ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಸೋಂಕು ತಗುಲಿದ್ದ ಕೋವಿಡ್‌ ಪರೀಕ್ಷಾಲಯದ ತಂತ್ರಜ್ಞೆ ಸೇರಿದಂತೆ ಏಳು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 

ಹೊಸ ಆರು ಪ್ರಕರಣಗಳ ಸೇರ್ಪಡೆಯಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್‌–19 ಪ್ರಕರಣಗಳ ಸಂಖ್ಯೆ 120ಕ್ಕೆ ತಲುಪಿದೆ. ಸಮಾಧಾನದ ಸಂಗತಿ ಎಂದರೆ, ಮಂಗಳವಾರದ ಏಳು ಮಂದಿಯೂ ಸೇರಿದಂತೆ ಇದುವರೆಗೆ 31 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 89 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡಿಮೆ ಪರೀಕ್ಷೆ: ಕೆಲವು ದಿನಗಳಿಂದ ನಡೆಯುತ್ತಿದ್ದ ಕೋವಿಡ್‌–19 ಪರೀಕ್ಷೆಗಳ ಸಂಖ್ಯೆಗೆ ಹೋಲಿಸಿದರೆ ಮಂಗಳವಾರ ಕಡಿಮೆ ಪರೀಕ್ಷೆ ನಡೆದಿದೆ. 257 ಪರೀಕ್ಷೆಗಳು ಮಾತ್ರ ನಡೆದಿದ್ದು, 251 ವರದಿ ನೆಗೆಟಿವ್‌ ಬಂದಿದೆ. 

ಸೋಂಕು ದೃಢಪಟ್ಟವರಲ್ಲಿ ಐವರು ಗುಂಡ್ಲುಪೇಟೆಯವರು. ಇವರೆಲ್ಲರೂ ರೋಗಿ ಸಂಖ್ಯೆ 18,544ರ ಸಂಪರ್ಕಿತರು. ಇವರಲ್ಲಿ 12 ವರ್ಷದ ಬಾಲಕಿ, 14 ವರ್ಷದ ಬಾಲಕ ಇದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ನಂಜಯ್ಯನಕಟ್ಟೆಯ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗುಲಿದ್ದು, ಅವರು ಬೆಂಗಳೂರಿಗೆ ಹೋಗಿ ಬಂದಿದ್ದಾರೆ. 

ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿರುವ ಏಳು ಮಂದಿಯ ಪೈಕಿ ಕೊಳ್ಳೇಗಾಲ ಪಟ್ಟಣದ 17 ವರ್ಷದ ಬಾಲಕಿ, ಗುಂಡ್ಲುಪೇಟೆ ಪಟ್ಟಣದ 50 ವರ್ಷದ ಮಹಿಳೆ, 25 ವರ್ಷದ ಮಹಿಳೆ, 41 ವರ್ಷ ವಯಸ್ಸಿನ ಬರಗಿಯ ಮಹಿಳೆ, ಯಳಂದೂರು ತಾಲ್ಲೂಕಿನ ಗೌಡಹಳ್ಳಿಯ 55 ವರ್ಷ ಪುರುಷ ಹಾಗೂ 45 ವರ್ಷದ ಮಹಿಳೆ ಇದ್ದಾರೆ. 

ಸಂಪರ್ಕಿತರ ಸಂಖ್ಯೆ 1,01‌7ಕ್ಕೆ: ಇದುವರೆಗೂ ಸೋಂಕಿತರೊಂದಿಗೆ ಪ್ರಾಥಮಿಕ (522) ಹಾಗೂ ದ್ವಿತೀಯ ಸಂಪರ್ಕ (495) ಹೊಂದಿದ್ದ 1,017 ಜನರನ್ನು ಗುರುತಿಸಲಾಗಿದ್ದು, ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಮಂಗಳವಾರ ಹೊಸದಾಗಿ 31 ಮಂದಿ ಪ್ರಾಥಮಿಕ ಸಂಪರ್ಕಿತರು, 45 ಮಂದಿ ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ. 

ತೀವ್ರ ನಿಗಾ ಘಟಕಕ್ಕೆ ಮತ್ತಿಬ್ಬರು

ಈ ಮಧ್ಯೆ, ಮಂಗಳವಾರ, ಒಬ್ಬ ಮಹಿಳೆ ಹಾಗೂ ಮತ್ತೊಬ್ಬ ಪುರುಷ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ. ಇಬ್ಬರ ವಯಸ್ಸು 60 ವರ್ಷ ದಾಟಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದರೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ರೋಗಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಗುಂಡ್ಲುಪೇಟೆಯ 45 ವರ್ಷದ ಮಹಿಳೆ ಹಾಗೂ 70 ವರ್ಷದ ವೃದ್ಧರೊಬ್ಬರು ಈಗಾಗಲೇ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು