ಗುಂಡ್ಲುಪೇಟೆ: ತಾಲ್ಲೂಕಿನ ನೇನೆಕಟ್ಟೆ ಗ್ರಾಮದ ಹೊರವಲಯದಲ್ಲಿ ಕಂಡು ಬರುವ ಪ್ರಾಚೀನ ದೇವಾಲಯದ ಅವಶೇಷಗಳು ಅಳಿವಿನಂಚಿನಲ್ಲಿವೆ.
ನೆನೆಕಟ್ಟೆ ಗ್ರಾಮ ಪುರಾತನ ಗ್ರಾಮ, ಶಕ್ತಿ ಪ್ರಧಾನವಾದ ಶಿಲ್ಪಗಳು, ಶಿಲಾಯುಗದ ಸಮಾಧಿ ಸೇರಿದಂತೆ ಚರಿತ್ರೆಗೆ ಸಂಬಂಧಿಸಿದ ಹಲವು ಕುರುಹುಗಳು ಇಲ್ಲಿವೆ.
ದೇವಾಲಯ ದುಃಸ್ಥಿತಿಯಲ್ಲಿವೆ. 10 ಶತಮಾನಗಳಷ್ಟು ಹಳೆಯ ದೇವಸ್ಥಾನ ಇದು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ. ಶಕ್ತಿ ಪ್ರಧಾನವಾದ ಸ್ತ್ರೀ ಶಿಲ್ಪ ಇಲ್ಲಿದೆ. ಈ ಶಿಲ್ಪವು ಎರಡು ಕೈಗಳನ್ನು ಮಾತ್ರ ಹೊಂದಿದೆ. ಕಲ್ಲು ಪೀಠದ ಮೇಲೆ ಕುಳಿತು ಒಂದು ಕಾಲು ಕೆಳಗೆ ಬಿಟ್ಟಿರುವ, ಇನ್ನೊಂದು ಮಡಚಿರುವ ಸ್ಥಿತಿಯಲ್ಲಿ ಕೆತ್ತಲಾಗಿರುವ ಶಿಲ್ಪ. ಇದು ದೇವಾಲಯಕ್ಕೆ ಸೇರಿದ ಶಿಲ್ಪವೇ ಅಥವಾ ಬೇರೆ ಕಡೆಯಿಂದ ತಂದು ಇರಿಸಲಾಗಿರುವ ಶಿಲ್ಪವೇ ಎಂಬುದು ದೃಢಪಟ್ಟಿಲ್ಲ.
ಶಿಲಾಯುಗದ ಸಮಾಧಿ ಮತ್ತು 8 ಮತ್ತು 9ನೇ ಶತಮಾನಕ್ಕೆ ಸೇರಿದ ಪಟ್ಟದ ಶಿವ ದೇವಾಲಯ, ಸಪ್ತಮಾತ್ರಿಕೆ ಶಿಲ್ಪಗಳು, ಮಹಿಷಮರ್ಧಿನಿ ಶಿಲ್ಪ, ವಿಶೇಷವಾದ ಲಜ್ಜೆಗೌರಿ ಶಿಲ್ಪಗಳಿವೆ. ಈ ಶಿಲ್ಪದ ಭಂಗಿ ವಿಶೇಷವಾಗಿದ್ದು, ಅಂಗವೈಕಲ್ಯದ ಲಕ್ಷಣ ಹೊಂದಿದೆ. ಅಲ್ಲದೆ ತಲೆಯ ಮೇಲೆ ಬೌದ್ದಶಿಲ್ಪಗಳ ಮಾದರಿ ಪ್ರಭಾವಳಿ ವಿನ್ಯಾಸ ಇದೆ. ಬುದ್ದಶಿಲ್ಪದ ಮಾದರಿಯಲ್ಲಿ ಕಿವಿಕರ್ಣಕುಂಡಲ ಇದೆ. ಮುಖ ಮಾತ್ರ ಅಸ್ಪಷ್ಟವಾಗಿದೆ.
ಈ ಗ್ರಾಮದ ಹೊರವಲಯದಲ್ಲಿ ಪುರಾತನವಾದ ಮಣ್ಣಿನ ಗೋಡೆಯೂ ಕಂಡು ಬರುತ್ತದೆ. ಅದು ಕೋಟೆಯ ಕುರುಹು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.
‘ದೇವಾಲಯ ಮತ್ತು ಶಿಲ್ಪಗಳು ಶಿಥಿಲಗೊಂಡಿವೆ. ಸಾವಿರಾರು ವರ್ಷಗಳ ಇತಿಹಾಸ ಸಾರುವ ಈ ಕುರುಹುಗಳನ್ನು ನಮ್ಮ ಯುವ ಪೀಳಿಗೆ ಮತ್ತು ಮುಂದಿನ ತಲೆಮಾರಿಗೆ ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಗ್ರಾಮಸ್ಥರು ಹೊಸ ಹೊಸ ದೇವಾಲಯ ನಿರ್ಮಾಣ ಮಾಡುವ ಬದಲಿಗೆ ಈ ರೀತಿಯ ಇತಿಹಾಸ ತಿಳಿಸುವ ದೇವಾಲಯ ಮತ್ತು ಶಿಲ್ಪಗಳ ಅದೇ ಮಾದರಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ’ ಎಂದು ಸಂಶೋಧಕ ಹಾಗೂ ಸಹಾಯಕ ಪ್ರಾಧ್ಯಾಪಕ ಮಣಿಕಂಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಅಳಿವಿನ ಅಂಚಿನಲ್ಲಿ ಶಿಲ್ಪಗಳು ದೇವಾಲಯ ಪೂರ್ಣ ಶಿಥಿಲ ರಕ್ಷಣೆಗೆ ಬೇಕಿದೆ ಮನಸ್ಸು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.