ಬುಧವಾರ, ನವೆಂಬರ್ 25, 2020
25 °C
ಮಹದೇಶ್ವರ ಬೆಟ್ಟ: ದೀಪಾವಳಿ ಪ್ರಯುಕ್ತ ನಡೆದಿದ್ದ ಉತ್ಸವ, ಕತ್ತಿ ಪವಾಡ

ಹಾಲರವಿ ಉತ್ಸವ ಸಂಪ್ರದಾಯ ಬದ್ಧವಾಗಿ ನಡೆದಿಲ್ಲ–ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ‘ಬೆಟ್ಟದಲ್ಲಿ ಜರುಗಿದ ದೀಪಾವಳಿ ಜಾತ್ರೆಯಲ್ಲಿ ನಡೆದ ಹಾಲರವಿ ಉತ್ಸವವು ಸಾಂಪ್ರದಾಯಿಕವಾಗಿ ನೆರವೇರಿಲ್ಲ. ಹಾಲರವಿ ತಂದ ಹೆಣ್ಣು ಮಕ್ಕಳಿಗೆ ಮಾದಪ್ಪನ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಬೇಡಗಂಪಣದ ಸಮುದಾಯದ ಜೆ.ಪುಟ್ಟಮಾದಯ್ಯ ಅವರು ಆರೋಪಿಸಿದ್ದಾರೆ. 

ಜೆ ಪುಟ್ಟಮಾದಯ್ಯ ಮನೆತನದವರು ಪೂರ್ವಜರ ಕಾಲದಿಂದಲೂ ಬೆಟ್ಟದಲ್ಲಿ ಕತ್ತಿ ಪವಾಡ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ.

ಈ ಬಾರಿ ಹಾಲರವಿ ಹಾಗೂ ಕತ್ತಿಪವಾಡದ ಹೊಣೆಯನ್ನು ಹೊತ್ತು ಮುಂದಾಳತ್ವ ವಹಿಸಿದ್ದವರು ಉತ್ಸವವನ್ನು ಹಾಗೂ ಕತ್ತಿ ಪವಾಡ ಪೂಜೆಗಳನ್ನು ಬೇಡಗಂಪಣ ಸಾಂಪ್ರದಾಯದಂತೆ ನಡೆಸಲಿಲ್ಲ ಎಂದು ಅವರು ದೂರಿದ್ದಾರೆ. 

‘ಕತ್ತಿ ಪವಾಡದ ಸಂದರ್ಭದಲ್ಲಿ ಸಾಲೂರು ಮಠದ ಪೀಠಾಧಿಪತಿಗಳು ಕತ್ತಿ ಪವಾಡ ಜರುಗುವವ ಕತ್ತಿಯನ್ನು ಪೂಜಿಸಿ, ಪವಾಡ ಮಾಡುವ ಅರ್ಚಕನಿಗೆ ಅವರ ಕೈಯಿಂದ ಮಾಲಾರ್ಪಣೆಯನ್ನು ಮಾಡುವುದು ಕ್ರಮ. ಅದು ಈ ವರ್ಷ ಜರುಗಲಿಲ್ಲ. ನಮ್ಮ ಸಮುದಾಯದ ಹೆಣ್ಣು ಮಕ್ಕಳು ಹಾಲಹಳ್ಳಕ್ಕೆ ಹೋಗಿ 101 ಕಳಶಗಳನ್ನು ಪೂಜಿಸಿ ತಂಬಡಿಗೇರಿ ಮಾರ್ಗವಾಗಿ ಮೆರವಣಿಗೆ ಬಂದು, ಆ ಜಲವನ್ನು ಮಾದೇಶ್ವರ ಸ್ವಾಮಿಗೆ ಅಭಿಷೇಕ ಮಾಡಿ ತೀರ್ಥವನ್ನು ಮಕ್ಕಳಿಗೆ ನೀಡಲಾಗುತಿತ್ತು. ಈ ವರ್ಷ ತೀರ್ಥ ಪ್ರಸಾದ ನೀಡಿಲ್ಲ’ ಎಂದು ಅವರು ಆರೋಪಿಸಿದ್ದಾರೆ. 

‘ರಥೋತ್ಸವದ ಬದಲಿಗೆ ಆನೆ ವಾಹನ ಉತ್ಸವ ನಡೆಸಲಾಗಿತ್ತು. ಈ ಉತ್ಸವದ ವೇಳೆ ಹೆಣ್ಣು ಮಕ್ಕಳು ಬೆಲ್ಲದ ಆರತಿಯನ್ನು ಮಾಡಬೇಕಿತ್ತು. ಅದು ಕೂಡ ನಡೆದಿಲ್ಲ’ ಎಂದು ಪುಟ್ಟಮಾದಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಆರೋಪ ನಿರಾಕರಣೆ: ಬೇಡಗಂಪಣ ಸಮುದಾಯದ ಅಧ್ಯಕ್ಷ ಪುಟ್ಟಣ್ಣ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಮಕ್ಕಳಿಗೆ ತೀರ್ಥಪ್ರಸಾದ ಸಿಕ್ಕಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. 

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ವರ್ಷಕ್ಕೊಮ್ಮೆ ಜರುಗುವ ಹಾಲರವಿ ಉತ್ಸವದಲ್ಲಿ ತೀರ್ಥ ಪ್ರಸಾದ ದೊರೆಯದಿರುವುದು ನಮಗೂ ಬೇಸರ ತರಿಸಿದೆ. ಈ ಬಾರಿ ಕೋವಿಡ್ ಕಾರಣದಿಂದ ಪೂಜಾ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲಾಗಿದೆ. ಕತ್ತಿ ಪವಾಡದ ಸ್ಥಳದಲ್ಲಿ ಎಲ್ಲ ಸಂಪ್ರದಾಯಗಳನ್ನು ಪಾಲಿಸಲಾಗಿದೆ. ಯಾವುದೇ ತೊಂದರೆಯಾಗದೆ ಕತ್ತಿ ಪವಾಡ ಸೇವೆ ಸರಾಗವಾಗಿ ಜರುಗಿದೆ’ ಎಂದು ಸ್ಪಷ್ಟಪಡಿಸಿದರು. 

‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು