ಬುಧವಾರ, ನವೆಂಬರ್ 25, 2020
19 °C
ಜೆಡಿಎಸ್‌ ಅಭ್ಯರ್ಥಿಗಳಿಗೆ ಸೋಲು, ಬಿಜೆಪಿಯ ಚಂದ್ರಮ್ಮ ಅಧ್ಯಕ್ಷೆ, ಕಾಂಗ್ರೆಸ್‌ನ ಹರೀಶ್‌ ಉಪಾಧ್ಯಕ್ಷ

ಹನೂರು ಪಟ್ಟಣ ಪಂಚಾಯಿತಿ: ಸೈದ್ಧಾಂತಿಕ ವಿರೋಧಿಗಳ ಮೈತ್ರಿ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ರಾಜಕೀಯವಾಗಿ ಬದ್ಧ ವೈರಿ ಪಕ್ಷಗಳಾದ, ಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಇಲ್ಲಿನ ಪಟ್ಟಣ ಪಂಚಾಯಿತಿಯ ಅಧಿಕಾರ ಹಿಡಿದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿವೆ. 

ಶನಿವಾರ ನಡೆದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಚಂದ್ರಮ್ಮ (13ನೇ ವಾರ್ಡ್‌ ಸದಸ್ಯೆ) ಅಧ್ಯಕ್ಷೆಯಾಗಿ ಹಾಗೂ ಕಾಂಗ್ರೆಸ್‌ನ ಹರೀಶ್‌ ಕುಮಾರ್‌ (3ನೇ ವಾರ್ಡ್‌) ಉಪಾಧ್ಯಕ್ಷರಾಗಿ ಆಯ್ಕೆಯಾದರು. 

ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್‌ನ ಉಪಾಧ್ಯಕ್ಷ ಅಭ್ಯರ್ಥಿ ಹರೀಶ್‌ ಕುಮಾರ್‌ ಅವರ ಪರವಾಗಿ ಮತ ಹಾಕಿದರೆ, ಸ್ಥಳೀಯ ಕಾಂಗ್ರೆಸ್‌ ಶಾಸಕ ಆರ್‌.ನರೇಂದ್ರ ಅವರು ಬಿಜೆಪಿಯ ಅಧ್ಯಕ್ಷೀಯ ಅಭ್ಯರ್ಥಿ ಚಂದ್ರಮ್ಮ ಅವರ ಪರವಾಗಿ ಮತದಾನ ಮಾಡಿದರು. 

ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರಿಂದ ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಜೆಡಿಎಸ್‌ಗೆ ಅಧಿಕಾರದ ಸವಿ ಸಿಗಲಿಲ್ಲ. 

13 ಸದಸ್ಯರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬಿ’ ಸ್ಥಾನಕ್ಕೆ ಮೀಸಲಾಗಿದೆ. ಜೆಡಿಎಸ್‌ ಆರು, ಕಾಂಗ್ರೆಸ್‌ ನಾಲ್ಕು ಹಾಗೂ ಬಿಜೆಪಿ ಮೂರು ಸ್ಥಾನಗಳನ್ನು ಹೊಂದಿದೆ. ಬಿಜೆಪಿಯ ಸದಸ್ಯೊಬ್ಬರು (2ನೇ ವಾರ್ಡ್‌) ನಿಧನರಾಗಿರುವುದರಿಂದ ಸದ್ಯ 12 ಸದಸ್ಯರು ಇದ್ದಾರೆ. 

ಜೆಡಿಎಸ್‌ನಿಂದ‌ ಅಧ್ಯಕ್ಷ ಸ್ಥಾನಕ್ಕೆ ಮಮ್ತಾಜ್‌ ಭಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ ಕುಮಾರ್‌ ಅವರು ಸ್ಪ‍ರ್ಧಿಸಿದ್ದರು. ಶಾಸಕರು ಹಾಗೂ ಸಂಸದರಿಗೂ ಮತದಾನಕ್ಕೆ ಅವಕಾಶ ಇದ್ದುದರಿಂದ ಅಧಿಕಾರಕ್ಕೆ ಏರಲು ಎಂಟು ಸದಸ್ಯರ ಬೆಂಬಲ ಬೇಕಿತ್ತು. 

ಕಾಂಗ್ರೆಸ್‌, ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಆರು ಸದಸ್ಯರು ಹಾಗೂ ಸಂಸದ, ಶಾಸಕರ ಎರಡು ಮತಗಳು ಸೇರಿದಂತೆ ತಲಾ ಎಂಟು ಮತಗಳನ್ನು ಗಳಿಸಿದರು. ಜೆಡಿಎಸ್‌ ಅಭ್ಯರ್ಥಿಗಳು ತಲಾ ಆರು ಮತಗಳನ್ನು ಗಳಿಸಿ ಸೋಲೊಪ್ಪಿಕೊಂಡರು. 

ಹನೂರು ಕ್ಷೇತ್ರದ ರಾಜಕಾರಣದ ಇತಿಹಾಸದಲ್ಲೇ ಕಾಂಗ್ರೆಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲು. ಜೆಡಿಎಸ್‌ ಅನ್ನು ಅಧಿಕಾರದಿಂದ ದೂರ ಇಡಲು ‘ಕೈ’, ‘ಕಮಲ’ ಪಾಳಯ ಕೈ ಜೋಡಿಸುತ್ತವೆ ಎಂಬ ಸುದ್ದಿ ವಾರದಿಂದ ಹಬ್ಬಿತ್ತು. ಹಾಗಿದ್ದರೂ, ಎರಡೂ ಪಕ್ಷಗಳು ಸೈದ್ಧಾಂತಿಕ ವಿರೋಧಿಗಳಾಗಿರುವುದರಿಂದ ಮೈತ್ರಿ ಸಾಧ್ಯತೆ ಕಡಿಮೆ ಎಂದೂ ಹೇಳಲಾಗಿತ್ತು. ಆದರೆ, ಈಗ ಪರಸ್ಪರ ಕೈಜೋಡಿಸಿ ಪಟ್ಟಣ ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿವೆ. 

ಅಭ್ಯರ್ಥಿಗಳು ಜಯ ಗಳಿಸುತ್ತಿದ್ದಂತೆಯೇ ಎರಡೂ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

ಜನರ ಹಿತ ಮುಖ್ಯ: ಫಲಿತಾಂಶ ಪ್ರಕಟಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು, ‘ಹನೂರು ತಾಲ್ಲೂಕು ರಚನೆಯಾಗಿರುವುದರಿಂದ ಮತ್ತು ಪಟ್ಟಣ ಸಮಗ್ರ ರೀತಿಯಲ್ಲಿ ಅಭಿವೃದ್ಧಿಯಾಗಬೇಕಿರುವುದರಿಂದ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸೈದ್ಧಾಂತಿಕ ಭಿನ್ನಾಬಿಪ್ರಾಯಗಳಿದ್ದರೂ ನಮಗೆ ಇಲ್ಲಿ ಜನರ ಹಿತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಹಾಗೂ ಜನರ ಒಳಿತಿಗಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ’ ಎಂದರು.

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಶಾಸಕ ಆರ್.ನರೇಂದ್ರ ಅವರು, ‘ಮೈತ್ರಿಗಾಗಿ ನಾವು ಬೆನ್ನು ಬಿದ್ದಿರಲಿಲ್ಲ. ಅವರೇ ಅಧಿಕಾರಕ್ಕಾಗಿ ನಮ್ಮ ಮೈತ್ರಿ ಬಯಸಿದ್ದರು. ಅದಕ್ಕಾಗಿ ಜೊತೆಯಾಗಿದ್ದೇವೆ. ಮುಂದೆ ಒಟ್ಟಾಗಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಎಲ್ಲ ಸದಸ್ಯರಿಗೂ ಸೂಚಿಸಿದ್ದೇವೆ’ ಎಂದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಜೆಡಿಎಸ್

‘ಆರು ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಅನ್ನು ಅಧಿಕಾರದಿಂದ ಹೊರಗಿಡುವುದಕ್ಕಾಗಿ ಬಿಜೆಪಿ‌ ಮತ್ತು ಕಾಂಗ್ರೆಸ್‌ ಪಕ್ಷಗಳು ಜನಾದೇಶ ದಿಕ್ಕರಿಸಿ ಅಪವಿತ್ರ ಮೈತ್ರಿ ಮಾಡಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿವೆ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಅವರು ವಾಗ್ದಾಳಿ ನಡೆಸಿದರು. 

‘ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಎರಡೂ ಪಕ್ಷಗಳಿಂದ ಆರು ಸದಸ್ಯರು ಮಾತ್ರ ಇದ್ದು, ಸಂಸದರು ಮತ್ತು ಶಾಸಕರು ತಲಾ ಒಂದೊಂದು ಮತಗಳನ್ನು ಚಲಾಯಿಸುವ ಮೂಲಕ ಅವರದ್ದೇ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ಅಲ್ಪಸಂಖ್ಯಾತರ ಪಕ್ಷ ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್‌ನ ಸದಸ್ಯರು ಹಾಗೂ ಶಾಸಕ ಆರ್.ನರೇಂದ್ರ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಲ್ಪಸಂಖ್ಯಾತ ಮಹಿಳೆಗೆ ಮತ ಹಾಕದೇ ಇರುವುದು ಅಲ್ಪಸಂಖ್ಯಾತರಿಗೆ ಮಾಡಿದ ದ್ರೋಹ’ ಎಂದು ಆರೋಪಿಸಿದರು. 

ಹೊಂದಾಣಿಕೆ ರಾಜಕಾರಣ ಜಗಜ್ಜಾಹೀರು: ‘ಎಚ್.ನಾಗಪ್ಪ ಹಾಗೂ ಜಿ.ರಾಜೂಗೌಡರು ಬದ್ಧ ವೈರಿಗಳಾಗಿ ಕ್ಷೇತ್ರದಲ್ಲಿ ರಾಜಕಾರಣ ಮಾಡಿಕೊಂಡು ಬಂದವರು. ಅವರ ತರುವಾಯ ಬಂದ ಪರಿಮಳ ನಾಗಪ್ಪ, ಶಾಸಕ ಆರ್.ನರೇಂದ್ರ ಅವರು ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡು ಬಂದು ಇದುವರೆಗೆ ತೆರೆಮರೆಯಲ್ಲಿ ಕ್ಷೇತ್ರದ ಜನತೆಯನ್ನು ಯಾಮಾರಿಸುತ್ತಿದ್ದರು. ಆದರೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಹೊಂದಾಣಿಕೆ ರಾಜಕಾರಣವನ್ನು ಜಗಜ್ಜಾಹೀರು ಮಾಡಿದ್ದಾರೆ. ಕ್ಷೇತ್ರದಿಂದ ಜೆಡಿಎಸ್ ಮತ್ತು ನನ್ನನ್ನು ಓಡಿಸಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಆದರೆ ನಾನು ಕ್ಷೇತ್ರದ ಜನತೆಯ ಸೇವೆ ಮಾಡುತ್ತಲೇ ಇರುತ್ತೇನೆ’ ಎಂದು ಅವರು ಹೇಳಿದರು. 

‘ಬಿಜೆಪಿ ಹಾಗೂ ಕಾಂಗ್ರೆಸ್‌ ವಾಮ ಮಾರ್ಗದ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗೆದ್ದಿರಬಹುದು. ಇದು ತಾತ್ಕಾಲಿಕ. ಮುಂದೆ ಬರುವ 2ನೇ ವಾರ್ಡ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಮೂಲಕ ಜನತೆಯ ವಿಶ್ವಾಸ ಗಳಿಸುತ್ತೇವೆ. ಅಕ್ಕ ತಮ್ಮನ ಒಳ ಒಪ್ಪಂದವನ್ನು ಕ್ಷೇತ್ರದ ಜನತೆ ನೋಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು