ಶುಕ್ರವಾರ, ಜುಲೈ 1, 2022
28 °C
ಡಾ.ರಾಜ್‌, ಪುನೀತ್‌ ಸ್ಮರಣೆ; ವರನಟನ ಜನ್ಮದಿನದಂದು ಬೆಂಗಳೂರು ತಲುಪಲಿದೆ ಯಾತ್ರೆ

ಗಾಜನೂರು: ಅಮರಜ್ಯೋತಿ ಯಾತ್ರೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬೆಂಗಳೂರಿನ ದೊಡ್ಮನೆ ಕುಟುಂಬದ ಅಭಿಮಾನಿ ಬಳಗವು ಡಾ.ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಹಮ್ಮಿಕೊಂಡಿರುವ ಅಮರ ಜ್ಯೋತಿ ಯಾತ್ರೆಗೆ ಡಾ.ರಾಜ್‌ ಹುಟ್ಟೂರು, ಗಡಿಭಾಗ ತಮಿಳುನಾಡಿನ ಗಾಜನೂರಿನಲ್ಲಿ ಗುರುವಾರ ಚಾಲನೆ ಸಿಕ್ಕಿದೆ. 

ಗಾಜನೂರಿನ ಮನೆಯಲ್ಲಿ ಡಾ.ರಾಜ್‌ ತಂಗಿ ನಾಗಮ್ಮ ಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯು ವರನಟನ 92ನೇ ಹುಟ್ಟುಹಬ್ಬದ ದಿನವಾದ ಇದೇ 24ರಂದು ಬೆಂಗಳೂರಿಗೆ ತಲುಪಲಿದೆ. 

ಅಲಂಕೃತ ವಾಹನದಲ್ಲಿ ಡಾ.ರಾಜ್‌, ಪುನೀತ್‌ ಪುತ್ಥಳಿ ಇಡಲಾಗಿದೆ. ಇಬ್ಬರ ಕಟೌಟ್‌, ಭಾವಚಿತ್ರಗಳೂ ಇವೆ. ಅಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಎಂ.ಮುನಿಯಪ್ಪ ನೇತೃತ್ವದಲ್ಲಿ ಈ ಯಾತ್ರೆ ಆರಂಭವಾಗಿದೆ. 

ಬೆಳಿಗ್ಗೆ 10 ಗಂಟೆಗೆ ಗಾಜನೂರಿನಿಂದ ಹೊರಟ ಯಾತ್ರೆಗೆ ದಾರಿಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಜನರು ಅದ್ದೂರಿ ಸ್ವಾಗತ ಕೋರಿದರು. ರಾಜ್ ಹಾಗೂ ಪುನೀತ್ ಚಿತ್ರದ ಹಾಡುಗಳಿಗೆ ಯುವಕರು ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. 

ಅಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಎಂ.ಮುನಿಯಪ್ಪ ಮಾತನಾಡಿ ‘ಡಾ.ರಾಜ್‌ಕುಮಾರ್ ಹುಟ್ಟುಹಬ್ಬ 24ರಂದು ನಡೆಯಲಿದೆ. ಪುನೀತ್ ನಿಧನಕ್ಕೆ ಕರುನಾಡು ದುಃಖಿತವಾಗಿದೆ. ಡಾ.ರಾಜ್‌ಕುಮಾರ್ ಜನ್ಮ ದಿನದಂದು ಅಮರ ಜ್ಯೋತಿಯನ್ನು ಅವರ ಪುಣ್ಯಭೂಮಿಗೆ ತರುವ ಮೂಲಕ ಅವರ ಆದರ್ಶ ತತ್ವಗಳನ್ನು ಜಗತ್ತಿಗೆ ಸಾರಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಮನೆ ಕುಟುಂಬದ ಜೊತೆಗೆ ಅವರ ಹುಟ್ಟೂರಿನಿಂದ ಅಮರ ಜ್ಯೋತಿ ಹೊರಟು ಚಾ‌ಮರಾಜನಗರ, ತಿ.ನರಸೀಪುರ, ಮಂಡ್ಯ ಮಾರ್ಗವಾಗಿ ಬೆಂಗಳೂರಿನ ಡಾ.ರಾಜ್, ಪುನೀತ್ ಸಮಾಧಿ ಸ್ಥಳದವರೆಗೆ ತೆರಳಲಿದೆ’ ಎಂದರು.

ಅದ್ದೂರಿ ಸ್ವಾಗತ: ಅಮರ ಜ್ಯೋತಿ ಯಾತ್ರೆಯು ಚಾಮರಾಜನಗರ ಟೋಲ್‌ಗೇಟ್ ಬಳಿಗೆ ಬರುತ್ತಿದ್ದಂತೆ ಅಪ್ಪು ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳು ರಥವನ್ನು ಸ್ವಾಗತಿಸಿದರು. ಬಳಿಕ ದೊಡ್ಡಂಗಡಿ ಬೀದಿ, ಭುವನೇಶ್ವರಿ ವೃತ್ತ, ಸಂಪಿಗೆ ರಸ್ತೆ, ಚಿಕ್ಕಂಗಡಿ ಬೀದಿ, ಸಂತೇಮಹರಳ್ಳಿ ಸರ್ಕಲ್ ಮಾರ್ಗವಾಗಿ ಯಾತ್ರೆ ತಿ.ನರಸೀಪುರಕ್ಕೆ ತೆರಳಿತು.

ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥದಲ್ಲಿದ್ದ ಡಾ.ರಾಜ್‌ ಹಾಗೂ ಪುನೀತ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಡಾ.ರಾಜ್ ಅಭಿಮಾನಿಗಳ ಸಂಘದ ಗೌರವ ಅಧ್ಯಕ್ಷ ರಾಘವೇಂದ್ರ ರಾವ್, ಡೊಡ್ಮನೆ ಕುಟುಂಬ ಅಭಿಮಾನಿ ಬಳಗದ ರಾಜು ಕೆಇಬಿ, ವೆಂಕಟೇಶ್, ಮಧುಸೂಧನ್, ಮಹೇಶ್, ರಾಘವೇಂದ್ರ ರಾವ್, ನಟರಾದ ರಾಜ್ ಮುನೀಷ್, ಸುನೀಲ್, ಸೇತುರಾಮ್, ನಿರ್ಮಾಪಕಿ ರಾಧಮ್ಮ, ಸಹ ನಿರ್ದೇಶಕಿ ನಿಹಾರಿಕ, ಮುನಿರಾಜ್, ಅರ್ಜುನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು