ಸೋಮವಾರ, ಜುಲೈ 4, 2022
24 °C
ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ: ಅಂಬೇಡ್ಕರ್‌ ಜನ್ಮ ದಿನ, ಸುವರ್ಣದೀಪ್ತಿ ಸಂಭ್ರಮ

ವಿವಿ ಬದುಕು ರೂಪಿಸುವ ಕೇಂದ್ರಗಳಾಗಲಿ: ಮೈಸೂರು ವಿಶ್ವವಿದ್ಯಾಲಯದ ಕುಲಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವಿಶ್ವವಿದ್ಯಾಲಯಗಳು ಪದವಿ ನೀಡುವುದಕ್ಕೆ ಮಾತ್ರ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ರೂಪಿಸುವ ಕೇಂದ್ರಗಳಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹೇಮಂತ್‌ಕುಮಾರ್ ಅವರು ಮಂಗಳವಾರ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಸುವರ್ಣ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಮೈಸೂರು ವಿವಿಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಸುವರ್ಣದೀಪ್ತಿ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭಿಸಿರುವ ಡಿಜಿಟಲ್ ಕ್ಯಾಂಪಸ್, ಜಾನಪದ ಮತ್ತು ಎಂ.ಬಿ.ಎ ಕೋರ್ಸ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೈಸೂರು ವಿ.ವಿ. ವ್ಯಾಪ್ತಿಯಲ್ಲಿ ಬರುವ ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸುವರ್ಣದೀಪ್ತಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸುವರ್ಣದೀಪ್ತಿ ಎಂದರೆ ಚಿನ್ನದ ಬೆಳಕು ಎಂದರ್ಥ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಪಠ್ಯೇತರ ಚಟುವಟಿಕೆಗಳ ಜೊತೆಗೆ ಸಮಾಜದ ಒಳಿತಿಗಾಗಿ ಚಿನ್ನದ ಬೆಳಕು ಚೆಲ್ಲುವಂತಾಗಬೇಕು. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ವಿಶ್ವವಿದ್ಯಾಲಯಗಳು ವೇದಿಕೆಯಾಗಬೇಕು’ ಎಂದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದ ಸಂಕೇತ. ಇಡೀ ವಿಶ್ವವೇ ಅಂಬೇಡ್ಕರ್ ಜನ್ಮದಿನವನ್ನು ವಿಶ್ವಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಸರ್ವ ಸಮುದಾಯಗಳ ಹಿತ ಬಯಸಿದ ಅಂಬೇಡ್ಕರ್ ಅವರ ಜ್ಞಾನದ ಹಾದಿಯಲ್ಲಿ ನಾವೆಲ್ಲಾ ಸಾಗಬೇಕು. ದಕ್ಷಿಣ ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಂಬೇಡ್ಕರ್ ಹೆಸರಿನಲ್ಲಿ ಸ್ಥಾಪಿತವಾದ ವಿ.ವಿ. ಸ್ನಾತಕೋತ್ತರದ ಕೇಂದ್ರ ಎಂಬ ಹೆಗ್ಗಳಿಕೆ ಈ ಕೇಂದ್ರದ್ದು. ಇಲ್ಲಿ ಶೇ 54ರಷ್ಟು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಹಾಗೂ ವಿದ್ಯಾರ್ಥಿನಿಲಯ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಉತ್ತಮ ವಾತಾವರಣ ಹೊಂದಿರುವ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು’ ಎಂದು ಹೇಮಂತ್‌ ಕುಮಾರ್‌ ಹೇಳಿದರು. 

ಸ್ನಾತಕೋತ್ತರ ಕೆಂದ್ರದಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಪೀಠದ ಸಹಯೋಗದೊಂದಿಗೆ ಆರಂಭಿಸಲಾಗಿರುವ ಮಹಿಳಾ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್ ಅವರು, ‘ವಿದ್ಯಾರ್ಥಿಗಳ ಏಳಿಗೆ ಕೇವಲ ಪಠ್ಯಪುಸ್ತಕದಲ್ಲಿಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಇದೆ. ವಿಧ್ಯಾರ್ಥಿ ಭವಿಷ್ಯ ಉತ್ತಮಗೊಳ್ಳಲು ಸುವರ್ಣದೀಪ್ತಿ ಕಾರ್ಯಕ್ರಮ ವೇದಿಕೆಯಾಗಬೇಕು. ಹಿಂದೆ ಒಂದು ಪುಸ್ತಕ ಕೊಳ್ಳಲು ಪರಜಿಲ್ಲೆಯನ್ನು ಅವಲಂಬಿಸಬೇಕಾಗಿತ್ತು. ಪ್ರಸ್ತುತ ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭಿಸಿರುವ ಡಿಜಿಟಲ್ ಲೈಬ್ರರಿ ಕ್ಯಾಂಪಸ್‌ನಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಬೌದ್ಧಿಕ ಜಗತ್ತು ಒಂದೇ ಸೂರಿನಡಿ ತೆರೆದುಕೊಳ್ಳಲಿದೆ. ಈ ಭಾಗದ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ತಮ್ಮ ಏಳಿಗೆಯೊಂದಿಗೆ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಬೇಕು. ಚಾಮರಾಜನಗರ ಸಾಂಸ್ಕ್ರತಿಕ ಹಿರಿಮೆಯನ್ನು ಎಲ್ಲೆಡೆ ಪಸರಿಸಬೇಕು’ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ  ಪ್ರೊ. ಆರ್.ಮಹೇಶ್ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ವಿಶೇಷ ಕರ್ತವ್ಯಾಧಿಕಾರಿ ಚೇತನ್‌ಕುಮಾರ್, ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾದ ಪರಮಶಿವಯ್ಯ ಇತರರು ಇದ್ದರು.

ಸ್ನಾತಕೋತ್ತರ ಕೇಂದ್ರದ ವತಿಯಿಂದ ವಾರದ ಕಾಲ ಏರ್ಪಡಿಸಲಾಗಿದ್ದ ಸುವರ್ಣದೀಪ್ತಿ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

‘ಜನರ ಹಕ್ಕುಗಳ ತಾಯಿಬೇರು’

ಮುಖ್ಯ ಭಾಷಣ ಮಾಡಿದ ವಿಚಾರವಾದಿ ನಂಜನಗೂಡಿನ ಮಲ್ಕುಂಡಿ ಮಹದೇವಸ್ವಾಮಿ ಅವರು, ‘ಡಾ. ಬಿ.ಆರ್.ಅಂಬೇಡ್ಕರ್ ಅವರು ದೇಶದ ಎಲ್ಲ ಸಮುದಾಯಗಳ, ಎಲ್ಲ ವರ್ಗದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ರಚಿಸಿದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ ಭಾರತೀಯರಾದ ನಾವು ಪದೆಪದೇ ಎಡವುತ್ತಿದ್ದೇವೆ. ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಪ್ರತಿದಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಸಮಾನತೆ, ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಸಂವಿಧಾನದಲ್ಲಿ ಇದಕ್ಕೆಲ್ಲ ಪರಿಹಾರವಿದೆ. ದೇಶದಲ್ಲಿ ಅಂಬೇಡ್ಕರ್ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಪ್ರಜ್ಞಾವಂತ ಜಾತ್ಯತೀತ ಮನಸ್ಸುಗಳನ್ನು ಜಾಗೃತಗೊಳಿಸಬೇಕು. ಜನಸಾಮಾನ್ಯರ ಹಾಗೂ ಮಹಿಳಾ ಹಕ್ಕುಗಳ ತಾಯಿಬೇರು ಅಂಬೇಡ್ಕರ್ ಎಂದರೆ ತಪ್ಪಾಗಲಾರದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು