ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಬ್ಯಾಗ್‌ ವಾಪಸ್‌ ನೀಡಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ

Last Updated 4 ಫೆಬ್ರುವರಿ 2021, 16:23 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಿಳಾ ಪ್ರಯಾಣಿಕರೊಬ್ಬರು ಗುರುವಾರ ಆಟೊದಲ್ಲಿ ಬಿಟ್ಟು ಹೋಗಿದ್ದ, ಆಭರಣ, ಮೊಬೈಲ್‌ಗಳಿದ್ದ ಬ್ಯಾಗ್‌ ಅನ್ನು ಪೊಲೀಸರ ಗಮನಕ್ಕೆ ತಂದು ವಾರಸುದಾರರಿಗೆ ನೀಡುವ ಮೂಲಕ ನಗರದ ಆಟೊ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಹುರುಳಿನಂಜನಪುರದ ಅಭಿಲಾಷ್‌ ಅವರು ಪ್ರಾಮಾಣಿಕತೆ ಮೆರೆದ ಆಟೊ ಚಾಲಕ. ಒಂದು ಗಂಟೆಯ ಒಳಗಾಗಿ ಬ್ಯಾಗ್‌ ಅನ್ನು ಪ್ರಯಾಣಿಕರಿಗೆ ಹಿಂದಿರುಗಿಸಿದ ಅಭಿಲಾಷ್‌ ಅವರನ್ನು ಪೊಲೀಸರು ಶ್ಲಾಘಿಸಿದ್ದಾರೆ.

ಮೈಸೂರಿನ ನಿವಾಸಿ ಸಾವಿತ್ರಿ ಅವರು ನಗರದಲ್ಲಿ ಸಂಬಂಧಿಕರ ಮನೆಯ ಸಮಾರಂಭಕ್ಕೆ ಬಂದಿದ್ದರು. ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಡಿವೈಎಸ್‌ಪಿ ಕಚೇರಿಯಿಂದ ಆಟೊದಲ್ಲಿ ಕೋರ್ಟ್‌ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಇಳಿಯುವಾಗ ತಮ್ಮ ಬ್ಯಾಗ್‌ ಅನ್ನು ಆಟೊದಲ್ಲೇ ಮರೆತು ಬಿಟ್ಟಿದ್ದರು. ಅದರಲ್ಲಿ ಒಂದು ಜೊತೆ ಚಿನ್ನದ ಓಲೆ, ಎರಡು ಮೊಬೈಲ್‌ಗಳು ಹಾಗೂ ₹2,500 ನಗದು ಇತ್ತು.

‘ಸಾವಿತ್ರಿ ಅವರು ದೂರು ನೀಡಲು ಬಂದಿದ್ದರು. ತಕ್ಷಣ ಡಿವೈಎಸ್‌ಪಿ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆವು. ಆದರೆ, ಆಟೊದ ಬಗ್ಗೆ ಮಾಹಿತಿ ಸಿಗಲಿಲ್ಲ. ಇದೇ ಸಮಯಕ್ಕೆ ಆಟೊ ಚಾಲಕ ಠಾಣೆಗೆ ಕರೆ ಮಾಡಿ, ಪ್ರಯಾಣಿಕರೊಬ್ಬರು ಆಟೊದಲ್ಲಿ ಚೀಲ ಬಿಟ್ಟು ಹೋಗಿರುವ ಮಾಹಿತಿಯನ್ನು ನೀಡಿದರು’ ಎಂದು ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಎ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೂಡಲೇ ಅವರನ್ನು ಠಾಣೆಗೆ ಬರುವುದಕ್ಕೆ ಹೇಳಿ, ಸಾವಿತ್ರಿ ಅವರಿಗೆ ಬ್ಯಾಗ್‌‌ ಹಸ್ತಾಂತರಿಸಿದೆವು. ಚಾಲಕನ ಪ್ರಾಮಾಣಿಕ ವರ್ತನೆ ಇತರರಿಗೂ ಮಾದರಿಯಾಗಿದೆ’ ಎಂದು ಅವರು ಹೇಳಿದರು.

ಪಟ್ಟಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಎಂ.ಸಿದ್ದರಾಜನಾಯಕ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಶಂಕರ್, ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT