ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ದೌರ್ಜನ್ಯ: ಪೋಷಕರ ಮನೋಭಾವ ಬದಲಾಗಲಿ

ಪೊಕ್ಸೊ ಕಾಯ್ದೆ ಅರಿವು ಕಾರ್ಯಕ್ರಮ– ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಮತ
Last Updated 2 ಫೆಬ್ರುವರಿ 2021, 12:52 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಹೋದರೆ ತಮ್ಮ ಮರ್ಯಾದೆ ಹರಾಜಾಗುತ್ತದೆ ಎಂಬ ಮನೋಭಾವ ಪೋಷಕರಲ್ಲಿದೆ. ಇದರಿಂದ ತಪ್ಪು ಮಾಡಿದವರಿಗೆ ತಪ್ಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತೆ ಆಗುತ್ತದೆ’ ಎಂದುಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಅವರು ಮಂಗಳವಾರ ತಿಳಿಸಿದರು.

ನಗರದ ಸಾಂತ್ವನ ಮಹಿಳೆಯರ ಸ್ವಾದರ್ ಗೃಹದಲ್ಲಿ ಆಯೋಜಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೊಕ್ಸೊ)ಕಾಯ್ದೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಪ್ಪು ಮಾಡಿದವರು ನ್ಯಾಯಾಲಯಕ್ಕೆ ಬಂದಾಗ ರಾಜಿ ಮಾಡಿಕೊಳ್ಳಲು ದುಂಬಾಲು ಬೀಳುತ್ತಾರೆ. ತಪ್ಪು ನಡೆದಿರುವುದು ನಿಜವೇ ಆಗಿದ್ದರೆ, ಮಕ್ಕಳ ಪೋಷಕರು ರಾಜಿ ಮಾಡಿಕೊಳ್ಳುವುದು ಸೂಕ್ತವಲ್ಲ’ ಎಂದು ಅವರು ಹೇಳಿದರು.

‘ಮಕ್ಕಳ ಮೇಲಿನ ದೌರ್ಜನ್ಯ ಕಾನೂನಿಗೆ ವಿರುದ್ಧವಾದುದು. ಹಾಗಿದ್ದರೂ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಿರಂತರವಾಗಿದೌರ್ಜನ್ಯಗಳು ನಡೆಯುತ್ತಿವೆ.ಮಕ್ಕಳಲ್ಲಿನ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಂಡು ಅವರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದರು.

‘ಹದಿಹರೆಯದ ವಯಸ್ಸು ತುಂಬಾ ಅಪಾಯಕಾರಿಯಾದದ್ದು. ಈ ವಯಸ್ಸಲ್ಲಿ ಮಕ್ಕಳು ಆತ್ಮೀಯವಾಗಿ ಮಾತನಾಡುವರನ್ನು ಹೆಚ್ಚಾಗಿ ನಂಬುತ್ತಾರೆ. ಮೈಮರೆತಾಗ ದುರಂತಗಳು ಸಂಭವಿಸುತ್ತವೆ. ಇದರಿಂದ ಮಕ್ಕಳಿಗೆ ಸಾಮಾಜಿಕವಾಗಿ ತೊಂದರೆಯಾಗುತ್ತದೆ. ಹಾಗಾಗಿ, ಹೆಣ್ಣುಮಕ್ಕಳು ತಮ್ಮ ಯೋಚನೆಗಳನ್ನು ಒಳ್ಳೆಯದರ ಕಡೆಗೆ ಇಟ್ಟುಕೊಳ್ಳಬೇಕು’ ಎಂದು ವಿಶಾಲಾಕ್ಷಿ ಅವರು ಸಲಹೆ ನೀಡಿದರು.

ಸಾಧನಾ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್ ಅವರು ಮಾತನಾಡಿ, ‘18 ವರ್ಷದೊಳಗಿರುವ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿರುವವರನ್ನು ಶಿಕ್ಷಿಸುವುದಕ್ಕಾಗಿ ಪೊಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ. ಶೇ 52ರಷ್ಟು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಮಕ್ಕಳ ಮೇಲೆ ದೈಹಿಕವಾಗಿ, ಮಾನಸಿಕವಾಗಿ ದೌರ್ಜನ್ಯಗಳು ನಡೆಯುತ್ತವೆ. ತಂದೆ, ತಾಯಿಗಳು ಮಕ್ಕಳ ಮೇಲೆ ಹೆಚ್ಚು ನಿಗಾವಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಘನಾ ಅವರು ಮಾತನಾಡಿ, ‘ಮನೆಗಳಲ್ಲೇ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವೆ. ಜಿಲ್ಲೆಯಲ್ಲಿ ಈವರೆಗೆ 225ಕ್ಕೂ ಹೆಚ್ಚು ಪೊಕ್ಸೊ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ಸಂಪರ್ಕದಂತಹ ದೌರ್ಜನ್ಯಗಳಿಗೆ ಕನಿಷ್ಠ 14 ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಸಾಂತ್ವನ ಮಹಿಳೆಯರ ಸ್ವಾದರ್ ಗೃಹದ ಸಂಯೋಜಕಿ ಶ್ವೇತಾ, ವಕೀಲ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT