ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ರಸ್ತೆ: ಜನರ ಪರದಾಟ

ಕೊಳ್ಳೇಗಾಲ; ಒಂದೇ ಮಳೆಗೆ ರಸ್ತೆ ತಗ್ಗು, ಗುಂಡಿಗಳಲ್ಲಿ ನಿಂತ ಕೆಸರು ನೀರು
Last Updated 6 ಜುಲೈ 2021, 3:32 IST
ಅಕ್ಷರ ಗಾತ್ರ

ಕೊಳ್ಳೇಗಾಲ:ನಗರದ ವಿವಿಧ ಕಡೆಗಳಲ್ಲಿ ಆಮೆಗತಿಯಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳು ಲಾಕ್‌ಡೌನ್‌ ಆರಂಭವಾದಾಗಿನಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಒಂದೇ ಮಳೆಗೆ ಆ ಪ್ರದೇಶ ಕೆಸರುಮಯವಾಗಿದೆ.

ನಗರಸಭೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಒಳಚರಂಡಿ, ಪಾದಚಾರಿ ಮಾರ್ಗ, 24x7 ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಕೆಲಸ ನಡೆಯುವ ಪ್ರದೇಶದಲ್ಲಿ ಅಗೆದಿರುವ ಮಣ್ಣು ರಸ್ತೆ ಹಾಗೂ ಬದಿಗಳಲ್ಲಿ ಹಾಗೆಯೇ ಉಳಿದಿದೆ. ಕೆಲವು ಕಡೆಗಳಲ್ಲಿ ಗುಂಡಿಗಳನ್ನೂ ಮುಚ್ಚಿಲ್ಲ.ಕೇಬಲ್ ಅಳವಡಿಕೆಗಾಗಿ ತೋಡಿದ್ದ ಗುಂಡಿ ಮಣ್ಣು ರಸ್ತೆ ತುಂಬಾ ಹರಡಿಕೊಂಡಿದೆ.

‘ಭಾನುವಾರ ನಗರದಲ್ಲಿ ಉತ್ತಮ ಮಳೆಯಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದ ಸುತ್ತಮುತ್ತ ಕೆಸರು ನಿಂತಿರುವುದರಿಂದ ಪಾದಚಾರಿಗಳು ನಡೆದು ಹೋಗುವುದಕ್ಕೂ ಕಷ್ಟವಾಗಿದೆ.ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಕೆಲವು ಬೈಕ್ ಸವಾರರು ಕೆಸರಿನಲ್ಲೇ ಬಿದ್ದಿದ್ದಾರೆ. ಪ್ರತಿ ವರ್ಷ ನಮಗೆ ಈ ಸಮಸ್ಯೆ ತಪ್ಪುವುದಿಲ್ಲ. ನಗರಸಭೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಹೊಸ ಅಣಗಳ್ಳಿ ಬಡಾವಣೆಯ ಪ್ರಸನ್ನ ಕುಮಾರ್ ಒತ್ತಾಯಿಸಿದರು.

ರಸ್ತೆ ಈಗ ಕೆಸರುಮಯ: ಕಾಮಗಾರಿ ಅರ್ಧಕ್ಕೆ ನಿಂತಿದ್ದು ಒಂದು ಸಮಸ್ಯೆಯಾದರೆ, ಈಗಾಗಲೇ, ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲಿ ಮಳೆ ನೀರು ನಿಂತು ಕೆಸರುಗದ್ದೆಯಂತಾಗಿವೆ.

ಭಾನುವಾರ ಸುರಿದ ಧಾರಾಕಾರ ಮಳೆಗೆನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆಗಳು ಮತ್ತಷ್ಟು ಹದಗೆಟ್ಟಿದ್ದು, ರಸ್ತೆಗಳ ತಗ್ಗು ಮತ್ತು ಗುಂಡಿಗಳಲ್ಲಿ ಕೆಸರು ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ.

ನಗರದ ಶಿವಕುಮಾರ ಸ್ವಾಮಿ ಬಡಾವಣೆ, ಬಸ್ತೀಪುರ ರಸ್ತೆ, ಆರ್‌ಎಂಸಿ ರಸ್ತೆ, ದೇವಾಂಗ ಪೇಟೆ ರಸ್ತೆ, ತಾಲ್ಲೂಕು ಕಚೇರಿ ರಸ್ತೆ, ಹೊಸ ಅಣಗಳ್ಳಿ ರಸ್ತೆ, ವೆಂಕಟೇಶ್ವರ ಕಲ್ಯಾಣ ಮಂಟಪ ರಸ್ತೆ, ಪೀಸ್ ಪಾರ್ಕ ರಸ್ತೆ, ತಾಲ್ಲೂಕಿನ ಮುಳ್ಳೂರು ಗ್ರಾಮದ ರಸ್ತೆ, ಮಧುವನಹಳ್ಳಿ ಗ್ರಾಮದ ಮುಖ್ಯ ರಸ್ತೆ, ಗುಂಡಾಲ್ ಜಲಾಶಯದ ರಸ್ತೆ, ಜಿನಕನಹಳ್ಳಿ ರಸ್ತೆ, ಗುಂಡೇಗಾಲ ರಸ್ತೆ, ಪಾಳ್ಯ ರಸ್ತೆ, ಉಗನೀಯ ರಸ್ತೆ, ಚಿಕ್ಕಲ್ಲೂರು ರಸ್ತೆ ಸೇರಿದಂತೆ ಅನೇಕ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.

‘ಪ್ರತಿ ವರ್ಷ ಜುಲೈ ಮತ್ತು ಆಗಸ್ಟ್ ತಿಂಗಳು ಬಂದರೆ ಮಳೆ ಬೀಳುವುದರ ಜೊತೆಗೆ ಮಣ್ಣಿನ ರಸ್ತೆಗಳೆಲ್ಲ ಕೆಸರುಮಯವಾಗುತ್ತದೆ. ಈ ಬಾರಿ ರಸ್ತೆಗಳ ದುರಸ್ತಿ ಸರಿಯಾಗಿ ನಡೆದಿಲ್ಲ. ಕೋವಿಡ್‌ ನಿಯಂತ್ರಣದಲ್ಲೇ ತೊಡಗಿದ್ದ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹದಗೆಟ್ಟ ರಸ್ತೆಗಳ ದುರಸ್ತಿಗೆ ತಕ್ಷಣ
ಕ್ರಮ ಕೈಗೊಳ್ಳದಿದ್ದರೆ, ಗುಂಡಿಗಳು ಮತ್ತಷ್ಟು ದೊಡ್ಡದಾಗಿ ಅಪಾಯ ಕಟ್ಟಿಟ್ಟಬುತ್ತಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

‘ಕಾಮಗಾರಿ ಶೀಘ್ರ ಪುನರಾರಂಭ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ವಿಜಯ್‌ ಅವರು, ‘ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರು ಗೈರಾಗಿದ್ದರು. ಕಾಮಗಾರಿಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳು ಸರಿಯಾಗಿ ಸಿಗುತ್ತಿರಲಿಲ್ಲ. ಹಾಗಾಗಿ, ಕೆಲಸ ಕುಂಠಿತಗೊಂಡಿವೆ. ಈಗ ಲಾಕ್‌ಡೌನ್‌ ನಿಯಮ ಸಡಿಲಿಕೆಯಾಗಿದ್ದು, ಕೂಡಲೇ ಗುತ್ತಿಗೆದಾರರನ್ನು ಕರೆಸಿ ಕಾಮಗಾರಿ ಪುನರಾರಂಭ ಮಾಡಿಸಲಾಗುವುದು’ ಎಂದು ಹೇಳಿದರು.

‘ಲಾಕ್‌ಡೌನ್‌ ಕಾರಣದಿಂದ ರಸ್ತೆ ದುರಸ್ತಿ ಸೇರಿದಂತೆ ಹಲವು ಕೆಲಸಗಳು ನಿಂತಿವೆ. ಮಳೆ ಕಡಿಮೆಯಾದಾಗ ರಸ್ತೆಯ ತಗ್ಗು ಮತ್ತು ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT