ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರ ಬೆಟ್ಟ | ನಾಗಮಲೆಗೆ ಚಾರಣ ತಾತ್ಕಾಲಿಕ ನಿಷೇಧ

ಮಹದೇಶ್ವರ ಬೆಟ್ಟ: ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಯಾಗುವವರೆಗೆ ಅರಣ್ಯ ಇಲಾಖೆ ಕ್ರಮ
Published 17 ಫೆಬ್ರುವರಿ 2024, 7:39 IST
Last Updated 17 ಫೆಬ್ರುವರಿ 2024, 7:39 IST
ಅಕ್ಷರ ಗಾತ್ರ

ಹನೂರು/ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವುದನ್ನು ಅರಣ್ಯ ಇಲಾಖೆ ಶನಿವಾರದಿಂದ ತಾತ್ಕಾಲಿಕವಾಗಿ ನಿಷೇಧಿಸಿದೆ. 

ಚಾರಣ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಬಳಕೆ ತಡೆ, ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಚಾರಣ ಹೋಗುವವರ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಜಾರಿಗೆ ತರುತ್ತಿದೆ.

ಆನ್‌ಲೈನ್ ಬುಕ್ಕಿಂಗ್‌ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ ಪರ್ವತಕ್ಕೆ ಚಾರಣ ಹೋಗಲು ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಬಂದಿದ್ದ ಕಾರಣದಿಂದ ಅರಣ್ಯ ಇಲಾಖೆ ಹೊಸ ವ್ಯವಸ್ಥೆ ಜಾರಿಗೊಳಿಸುತ್ತಿದೆ. 

ಪ್ರಸಿದ್ದ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಿಂದ ನಾಗಮಲೆಯವರೆಗೂ ಪೂರ್ಣವಾಗಿ ಸಾರಿಗೆ ವ್ಯವಸ್ಥೆ ಇಲ್ಲ. ಅರ್ಧ ದಾರಿಯವರೆಗೆ ಜೀಪಿನಲ್ಲಿತೆರಳಿ ನಂತರ ನಡೆದುಕೊಂಡೇ ಹೋಗಬೇಕು. ಈವರೆಗೂ ರಾತ್ರ ಹೊತ್ತು ನಾಗಮಲೆಗೆ ಭೇಟಿ ನೀಡುವುದಕ್ಕೆ ಅರಣ್ಯ ಇಲಾಖೆ ಅವಕಾಶ ಕೊಡುತ್ತಿರಲಿಲ್ಲ. ಈ ದಾರಿಯಲ್ಲಿ ಭಕ್ತರು ಪ್ರವಾಸಿಗರ ಮೇಲೆ ಆನೆ ಸೇರಿದಂತೆ ಇತರೆ ಪ್ರಾಣಿಗಳು ದಾಳಿ ಮಾಡಿದ ಪ್ರಕರಣಗಳು ಸಾಕಷ್ಟು ನಡೆದಿವೆ. 

ತಾತ್ಕಾಲಿಕವಾಗಿ ನಾಗಮಲೆಗೆ ತೆರಳುವುದನ್ನು ನಿರ್ಬಂಧಿಸುವಂತೆ ಮಲೆ ಮಹದೇಶ್ವರ ವನ್ಯಧಾಮದ ಎಸಿಎಫ್‌ ಪಾಲಾರ್‌ ವಲಯ ಅರಣ್ಯಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದಾರೆ. ಇದೇ 10ರಂದೇ ಪತ್ರ ಬರೆದಿದ್ದು, ಶನಿವಾರದಿಂದ ಅದು ಅನುಷ್ಠಾನಗೊಂಡಿದೆ. 

ದಾರಿ ಹೇಗಿದೆ?: ಹಳೆಯೂರು ಕಳ್ಳ ಬೇಟೆ ತಡೆ ಶಿಬಿರದಿಂದ ಇಂಡಿಗನತ್ತ ಗ್ರಾಮದವರೆಗೆ ಅರಣ್ಯ ಪ್ರದೇಶದ ಮೂಲಕ ಚಾರಣಿಗರು ಖಾಸಗಿ ವಾಹನದಲ್ಲಿ ಪ್ರಯಾಣಿಸಿ, ಅಲ್ಲಿಂದ ನಾಗಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ತುಳಸಿಕೆರೆಯ ಪರಿಸರ ಅಭಿವೃದ್ಧಿ ಸಮಿತಿಯು ಚಾರಣಿಗರನ್ನು ಹೊತ್ತೊಯ್ಯುವ ಖಾಸಗಿ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸುತ್ತದೆ. 

ಪತ್ರದಲ್ಲೇನಿದೆ?: ‘ನಾಗಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ತೆರಳುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಪರಿಸರಕ್ಕೆ ಹಾನಿ ಹಾಗೂ ಜಲಮೂಲಗಳು ಕಲುಷಿತಗೊಳ್ಳುತ್ತಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ. 

‘ಚಾರಣಿಗರನ್ನು ಕರೆದೊಯ್ಯುವ ಖಾಸಗಿ ವಾಹನಗಳಲ್ಲಿ ಬಹುಪಾಲು ವಾಹನಗಳು ವಿಮೆ, ಕ್ಷಮತಾ ಪ್ರಮಾಣ ಪತ್ರ ಹೊಂದಿಲ್ಲ. ತುಳಸಿಕೆರೆಯ ಪರಿಸರ ಅಭಿವೃದ್ಧಿ ಸಮಿತಿಯು ಚಾರಣಿಗರನ್ನು ಹೊತ್ತೊಯ್ಯುವ ಖಾಸಗಿ ವಾಹನಗಳಿಗೆ ಪ್ರವೇಶ ಶುಲ್ಕ ಪಡೆಯುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ನಾಗಮಲೆ ಪ್ರದೇಶದ ಸಾಮರ್ಥ್ಯ, ಪ್ರಮಾಣಿತ ಕಾರ್ಯ ವಿಧಾನ ಮತ್ತು ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಹೊಂದುವವರೆಗೆ ತಾತ್ಕಾಲಿಕವಾಗಿ ಯಾವುದೇ ವಾಹನ, ಚಾರಣಿಗರು ಅರಣ್ಯ ಪ್ರದೇಶದ ಒಳಗಡೆ ಪ್ರವೇಶಿಸದಂತೆ ಕ್ರಮ  ಕೈಗೊಂಡು ಕಚೇರಿಗೆ ವರದಿ ನೀಡಬೇಕು’ ಎಂದು ಎಸಿಎಫ್‌ ಪತ್ರದಲ್ಲಿ ತಿಳಿಸಿದ್ದಾರೆ. 
 

ಯೋಜನೆ ರೂಪಿಸಿ ಕ್ರಮ: ಡಿಸಿಎಫ್‌ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ ಸಂತೋಷ್ ಕುಮಾರ್ ‘ಪ್ರತಿನಿತ್ಯ ಹತ್ತಾರು ವಾಹನಗಳು ನಾಗಮಲೆಗೆ ತೆರಳುತ್ತಿವೆ. ವಾಹನಗಳಲ್ಲಿ ತೆರಳುವಾಗ ಏನಾದರೂ ಅನಾಹುತವಾದರೆ ಯಾರು ಹೊಣೆ? ಉನ್ನತ ಅಧಿಕಾರಿಗಳ ಸೂಚನೆಯಂತೆ ಶನಿವಾರದಿಂದ ನಾಗಮಲೆಗೆ ಖಾಸಗಿ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT