ಭಾನುವಾರ, ಏಪ್ರಿಲ್ 11, 2021
29 °C
40 ವಿದ್ಯುತ್‌ ಕಂಬಗಳು ಧರೆಗೆ, ಈರುಳ್ಳಿ ಬೆಳೆಗೂ ಹಾನಿ

ಚಾಮರಾಜನಗರದಲ್ಲಿ ಬಿರುಗಾಳಿ ಮಳೆಗೆ 600 ಎಕರೆ ಬಾಳೆ ನಾಶ, ₹3 ಕೋಟಿ ನಷ್ಟ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ‌. ಕೃಷಿ ಬೆಳೆಗಳಿಗಿಂತ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಹಾನಿಯಾಗಿದೆ.

ಹೆಚ್ಚು ಹಾನಿಯಾದ ಪ್ರದೇಶದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಶನಿವಾರ ಸಮೀಕ್ಷೆ ನಡೆಸಿದ್ದು, ಪ್ರಾಥಮಿಕ ಅಂಕಿ ಅಂಶಗಳ ಪ್ರಕಾರ 600 ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. ₹ 3 ಕೋಟಿ ನಷ್ಟ ಸಂಭವಿಸಿದೆ ಎಂದು ಅವರು ಅಂದಾಜಿಸಿದ್ದಾರೆ. 

ಸಣ್ಣ ಈರುಳ್ಳಿ, ಟೊಮೆಟೊ ಸೇರಿದಂತೆ ಇನ್ನಿತರ ತರಕಾರಿ ಬೆಳೆಗಳಿಗೂ ಮಳೆಯಿಂದಾಗಿ ತೊಂದರೆಯಾಗಿದ್ದು, ಹಾನಿಯ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ. ರಾಮಸಮುದ್ರದ ಭಾಗದಲ್ಲಿ 30 ಎಕರೆಯಷ್ಟು ಜಾಗದಲ್ಲಿ ಬೆಳೆದಿದ್ದ ಈರುಳ್ಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

‘ಬಾಳೆ ಬೆಳೆಗೆ ಹೆಚ್ಚು ಹಾನಿ ಸಂಭವಿಸಿದ್ದು, ಮೊದಲಿಗೆ ಅದರ ಸಮೀಕ್ಷೆ ನಡೆಸುತ್ತಿದ್ದೇವೆ. ಜಿಲ್ಲೆಯ ಹಲವು ಕಡೆಗಳಲ್ಲಿ ಶುಕ್ರವಾರ ಮಳೆಯಾಗಿದ್ದರೂ, ಚಾಮರಾಜನಗರ ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಭಾರಿ ಗಾಳಿಯಿಂದಾಗಿ ಕಟಾವಿನ ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ನೆಲಕ್ಕಚ್ಚಿವೆ. ತಾಲ್ಲೂಕಿನಲ್ಲೇ ಹೆಚ್ಚು ಹಾನಿ ಸಂಭವಿಸಿದೆ. ಈರುಳ್ಳಿ ಹಾಗೂ ಇನ್ನಿತರ ಬೆಳೆಗಳಿಗೆ ಆಗಿರುವ ಹಾನಿಯನ್ನು ಲೆಕ್ಕಹಾಕಿಲ್ಲ. ಕೆಲವು ಜಮೀನುಗಳಲ್ಲಿ ಇನ್ನೂ ನೀರು ನಿಂತಿದ್ದು, ಒಂದೆರಡು ದಿನ ಕಳೆದು ನಿಖರ ಮಾಹಿತಿ ತಿಳಿಯಲಿದೆ’ ಎಂದು  ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಎರಡು ಹೋಬಳಿಗಳಲ್ಲಿ ಹಾನಿ ಹೆಚ್ಚು: ತಾಲ್ಲೂಕಿನ ಚಂದಕವಾಡಿ ಹಾಗೂ ಕಸಬಾ ಹೋಬಳಿಯಲ್ಲಿ ಹೆಚ್ಚು ಬೆಳೆ ನಷ್ಟವಾಗಿದೆ. ಅಧಿಕಾರಿಗಳು ಅಂದಾಜಿಸಿರುವ ಪ್ರಕಾರ, ಕಸಬಾ ಹೋಬಳಿಯ ರಾಮಸಮುದ್ರ ವ್ಯಾಪ್ತಿಯಲ್ಲಿ ಅಂದಾಜು 300 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನೆಲಕ್ಕಚ್ಚಿದೆ. ಚಂದಕವಾಡಿ ಹೋಬಳಿಯಲ್ಲಿ 250 ಎಕರೆ ಪ್ರದೇಶ ಸಂತೇಮರಹಳ್ಳಿ ಹೋಬಳಿಯಲ್ಲಿ 30 ಎಕರೆ ಬಾಳೆ ನಾಶವಾಗಿದೆ. ಚಂದಕವಾಡಿ ಹೋಬಳಿಗಳಲ್ಲಿ 50ರಿಂದ 60 ಮರಗಳು ಗಾಳಿಗೆ ಸಿಕ್ಕಿ ಮುರಿದು ಬಿದ್ದಿವೆ.

‘ಚಂದಕವಾಡಿ ಹೋಬಳಿಯ ಹೊಂಡರಬಾಳು, ಜ್ಯೋತಿಗೌಡನಪುರ, ಹೆಬ್ಬಸೂರು, ಬ್ಯಾಡಮೂಡ್ಲುಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಸಂತೇಮರಹಳ್ಳಿ ಹೋಬಳಿ ವ್ಯಾಪ‍್ತಿಯ ರೇಚಂಬಳ್ಳಿ, ಹೊಂಗನೂರು, ಕೋಟಂಬಳ್ಳಿಗಳ ರೈತರೂ ನಷ್ಟ ಅನುಭವಿಸಿದ್ದಾರೆ’ ಎಂದು ಶಿವಪ್ರಸಾದ್‌ ಅವರು ಮಾಹಿತಿ ನೀಡಿದರು. 

‘ವಿವಿಧ ಕಡೆಗಳಲ್ಲಿ ಈರುಳ್ಳಿ ಬೆಳೆಗೂ ಹಾನಿ ಸಂಭವಿಸಿದೆ. ಜಮೀನಿನಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ನಿಂತ ಕಾರಣಕ್ಕೆ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಈರುಳ್ಳಿ ನಷ್ಟದ ಬಗ್ಗೆ ಇನ್ನೂ ಸಮೀಕ್ಷೆ ನಡೆಸಿಲ್ಲ. ರಾಮಸಮುದ್ರ ವ್ಯಾಪ್ತಿಯಲ್ಲಿ 30 ಎಕರೆ ಪ್ರದೇಶದಲ್ಲಿ ಹಾನಿಯಾಗಿದೆ’ ಎಂದು ಅವರು ವಿವರಿಸಿದರು. 

ವಿವಿಧ ಕಡೆಗಳಲ್ಲಿ ರೈತರು ಬೆಳೆದಿರುವ ನುಗ್ಗೆ ಗಿಡಗಳು, ಜೋಳದ ಫಸಲು ಸೇರಿದಂತೆ ಹಲವು ಬೆಳೆಗಳು ಗಾಳಿ ಮಳೆಗೆ ನೆಲಕ್ಕೆ ಬಾಗಿವೆ.

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ: ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಅಧಿಕಾರಿಗಳು ಸಮೀಕ್ಷೆ ನಡೆಸಿ ಎಲ್ಲ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ. 

ಹಾರಿ ಹೋದ ಚಾವಣಿ: ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗಾಳಿಯ ರಭಸಕ್ಕೆ ಮನೆಯ ಶೀಟುಗಳು ಹಾರಿ ಹೋಗಿ ನಿವಾಸಿಗಳಿಗೆ ತೊಂದರೆಯಾಗಿದೆ.

ಕತ್ತಲಲ್ಲಿ ಮುಳುಗಿದ ಹಳ್ಳಿಗಳು, ಸೆಸ್ಕ್‌ಗೂ ನಷ್ಟ

ಗಾಳಿ ಮಳೆಯಿಂದಾಗಿ ಚಂದಕವಾಡಿ ಹೋಬಳಿಯ ವಿವಿಧ ಕಡೆಗಳಲ್ಲಿ 38 ವಿದ್ಯುತ್‌ ಕಂಬಳು, ನಾಲ್ಕು ವಿದ್ಯುತ್‌ ಪರಿವರ್ತಕಗಳು ಧರೆಗೆ ಉರುಳಿವೆ. ಮೂರು ಕಿ.ಮೀ ಉದ್ದದ ವಿದ್ಯುತ್‌ ಮಾರ್ಗ ನೆಲಕ್ಕೆ ಬಿದ್ದಿದೆ. 

‘ಕಂಬಗಳು ಬಿದ್ದಿದ್ದರಿಂದ 27 ಹಳ್ಳಿಗಳಿಗೆ ಶುಕ್ರವಾರ ರಾತ್ರಿ ವಿದ್ಯುತ್‌ ಪೂರೈಕೆ ಇರಲಿಲ್ಲ. ಶನಿವಾರ ಬೆಳಿಗ್ಗೆ 25 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದೇವೆ. ಇನ್ನೂ ಎರಡು ಹಳ್ಳಿಗಳಿಗೆ ಬಾಕಿ ಇದೆ’ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಚಾಮರಾಜನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣ ಚಂದ್ರ ತೇಜಸ್ವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆರ್ಥಿಕವಾಗಿಯೂ ಸಂಸ್ಥೆಗೆ ನಷ್ಟವಾಗಿದೆ. ಆದರೆ ಅದರ ಪ್ರಮಾಣವನ್ನು ಇನ್ನೂ ಅಂದಾಜಿಸಿಲ್ಲ. ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಎರಡು ಮೂರು ದಿನಗಳಲ್ಲಿ ನಷ್ಟದ ಅಂದಾಜು ತಿಳಿಯಲಿದೆ. ಎರಡು ವರ್ಷಗಳ ಅವಧಿಯಲ್ಲಿ ನಮ್ಮಲ್ಲಿ ಈ ಪ್ರಮಾಣದ ಹಾನಿ ಸಂಭವಿಸಿಲ್ಲ’ ಎಂದು ಅವರು ಮಾಹಿತಿ ನೀಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು