ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ | ಗಿರಿಜನರ ಅಭಿವೃದ್ಧಿಗೆ ₹1.25 ಕೋಟಿ

Published 16 ಜನವರಿ 2024, 4:18 IST
Last Updated 16 ಜನವರಿ 2024, 4:18 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಹಾಡಿ ಜನರ ಅಭಿವೃದ್ಧಿಗಾಗಿ ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಡಿ ₹1.25 ಕೋಟಿ ಕಾಯ್ದಿರಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ ಕುಮಾರ್ ತಿಳಿಸಿದರು.

ಬಂಡೀಪುರ ಅರಣ್ಯಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆದಿವಾಸಿ ಸಮುದಾಯಗಳ ಕುಂದುಕೊರತೆ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ‘ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ, ಕಾಡು ಕುರುಬ ಸೇರಿದಂತೆ ಬುಡಕಟ್ಟು ಜನಾಂಗದವರ 53 ಹಾಡಿಗಳಿವೆ. ಹುಲಿ ಮತ್ತು ಕಾಡಿನ ಸಂರಕ್ಷಣೆಯಲ್ಲಿ ಅದಿವಾಸಿಗಳ ಪಾತ್ರ ಮಹತ್ವದ್ದು. ಹಿಂದಿನಿಂದಲೂ ಗಿರಿಜನರು ಅರಣ್ಯ ಸಂರಕ್ಷಣೆಯ ಭಾಗವಾಗಿದ್ದಾರೆ’ ಎಂದರು. 

‘ಬುಡಕಟ್ಟು ಮಹಿಳೆಯರು ಮತ್ತು ಯುವಕರು ಆರ್ಥಿಕ ಸ್ವಾವಲಂಬಿಗಳಾಗಲು ಜೀವನೋಪಾಯ ತರಬೇತಿಗಳಾದ ವಾಹನ ಚಾಲನೆ, ಟೈಲರಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಏರ್ಪಡಿಸಲು ಯೋಜನೆ ರೂಪಿಸಲಾಗಿದೆ. ಆದಿವಾಸಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚಿಸಿ ಲಂಟಾನದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿ (45 ದಿನಗಳು) ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುತ್ತದೆ. ಆದಿವಾಸಿ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಅಡುಗೆ ಸಂಪರ್ಕ ಮತ್ತು ಸಿಲಿಂಡರ್‌ಗಳ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು’ ಎಂದರು.

‘ಜಮೀನು ಹೊಂದಿರುವಂತಹ ಆದಿವಾಸಿ ಕುಟುಂಬಗಳಿಗೆ ವ್ಯವಸಾಯದ ಸಲುವಾಗಿ ಉಚಿತವಾಗಿ ಭೂಮಿ ಉಳುಮೆ ಮಾಡಿಸಿಕೊಡುವುದು, ರಸ ಗೊಬ್ಬರ ಮತ್ತು ಬೀಜ ವಿತರಣೆ. ಕಾಡಂಚಿನ ಗ್ರಾಮದ ರೈತರಿಗೆ ಜೇನು ಸಾಕಾಣಿಕೆ ತರಬೇತಿ ನೀಡಿ, ಜೇನು ಪೆಟ್ಟಿಗೆ ವಿತರಿಸಿ ಜೇನು ಕೃಷಿಗೆ ಪ್ರೋತ್ಸಾಹಿಸಲಾಗುವುದು. ಆದಿವಾಸಿ ಯುವಕರಿಗೆ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ‘ಹಸಿರು ವಿದ್ಯಾರ್ಥಿ’ ವೇತನ ಒದಗಿಸಲಾಗುವುದು’ ಎಂದರು.  

‘ಮಾನವ-ವನ್ಯಪ್ರಾಣಿ ಸಂಘರ್ಷದಲ್ಲಿ ಆನೆ, ಹುಲಿ ದಾಳಿಗಳಿಂದಾಗಿ ಮೃತಪಟ್ಟಿರುವ ಆದಿವಾಸಿ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಬುಡಕಟ್ಟು ಜನಾಂಗದ ಹಾಡಿಗಳಲ್ಲಿ ಚಾವಡಿಗಳ ದುರಸ್ಥಿ ಕಾರ್ಯ, ಆಯ್ದ ಬುಡಕಟ್ಟು ಹಾಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗುವುದು’ ಎಂದು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ಕಾಂಗ್ರೆಸ್ ಮುಖಂಡ ಎಚ್.ಎಸ್.ನಂಜಪ್ಪ, ಆದಿವಾಸಿ ಸಮುದಾಯದ ಮುಖಂಡರಾದ ರತ್ನಮ್ಮ, ರಾಜೇಂದ್ರ, ಪುಟ್ಟಮ್ಮ ಸೇರಿದಂತೆ  25 ಮುಖಂಡರು ಸಭೆಯಲ್ಲಿದ್ದರು.

‘ಮೊದಲ ಪ್ರಯತ್ನ ಈ ವರ್ಷವೇ ಅನುಷ್ಠಾನ’

ಸಭೆಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಮೇಶ್‌ ಕುಮಾರ್‌ ಅವರು ‘ಆದಿವಾಸಿ ಜನರ ಕುಂದು ಕೊರತೆಗಳನ್ನು ಆಲಿಸುವುದಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ದೇಶದಲ್ಲಿಯೇ ಇದೊಂದು ಮೊದಲ ಪ್ರಯತ್ನ. ಆದಿವಾಸಿಗಳ ಕಷ್ಟಗಳನ್ನು ಕೇಳುವುದು ನಮ್ಮ ಉದ್ದೇಶವಾಗಿತ್ತು’ ಎಂದರು.  ‘ಹತ್ತು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚೆಯಾಗಿದೆ. ಅದರಲ್ಲಿ ಏಳೆಂಟು ಬೇಡಿಕೆಗಳನ್ನು ಈ ವರ್ಷವೇ ಈಡೇರಿಸಲಾಗುವುದು. ಬಂಡೀಪುರ ವ್ಯಾಪ್ತಿಯಲ್ಲಿ 44 ಪರಿಸರ ಅಭಿವೃದ್ಧಿ ಸಮಿತಿಗಳಿದ್ದು ಈ ಸಮಿತಿಯ ಪ್ರತಿನಿಧಿಗಳ ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT