ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಭೀತಿಯಿಂದ ಬಂಡೀಪುರ ಸಫಾರಿಗೆ ಬಾರದ ಜನ

ಜೂನ್‌ 8ರಿಂದ ಸಫಾರಿಗೆ ಅವಕಾಶ
Last Updated 15 ಜೂನ್ 2020, 20:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಲಾಕ್‌ಡೌನ್‌ ಸಡಿಲಿಕೆಗೊಂಡು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ಅವಕಾಶ ಮಾಡಿಕೊಟ್ಟಿದ್ದರೂ ಸಹ ಪ್ರಯಾಣಿಕರು ಸಫಾರಿಗೆ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಸಫಾರಿ ಕ್ಯಾಂಪಸ್ ಭಣಗುಡುತ್ತಿದೆ.

ಲಾಕ್‌ಡೌನ್‌ನಿಂದಾಗಿ 70 ದಿನಗಳ ಕಾಲ ಸಫಾರಿ ಬಂದ್ ಮಾಡಲಾಗಿತ್ತು. ಜೂನ್ 8ರಿಂದ ಸಫಾರಿಗೆ ಅವಕಾಶ ನೀಡಲಾಗಿದೆ. ಆದರೆ, ಕೋವಿಡ್‌–19 ಭಯದಿಂದ ಪ್ರವಾಸಿಗರು ಸಫಾರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ಅಂತ್ಯದವರೆಗೆ ಹೆಚ್ಚು ಪ್ರವಾಸಿಗರು ಬರುತ್ತಾರೆ. ವಾರಾಂತ್ಯದಲ್ಲಿ ಸಫಾರಿಗೆ ಟಿಕೆಟ್ ಸಿಗದೆ ಬೇಸರದಿಂದ ವಾಪಸ್ ಆಗುವ ದೃಶ್ಯಗಳು ಸಾಮಾನ್ಯ. ಆದರೆ, ಈ ಬಾರಿ ಕೊರೊನಾ ಸೋಂಕಿನ ಭಯದಿಂದ ಜನರು ಸಫಾರಿಗೆ ಮನಸ್ಸು ಮಾಡುತ್ತಿಲ್ಲ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಫಾರಿಗೆ ನೂರು ಮಂದಿಯೂ ಬರುತ್ತಿಲ್ಲ ಎಂದು ವಲಯ ಅರಣ್ಯಾಧಿಕಾರಿ ನವೀನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಪ್ಸಿಯಲ್ಲಿ ನಾಲ್ವರು ಮತ್ತು ವಾಹನದಲ್ಲಿ 30 ಮಂದಿಯನ್ನು ಸಫಾರಿಗೆ ಕರೆದೊಯ್ಯಲಾಗುತ್ತದೆ. ಕೊರೊನಾ ಸೋಂಕಿನ ಪರಿಣಾಮ ವಾಹನದಲ್ಲಿ 15 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಸಹ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಪ್ರವಾಸಿಗರು ಹೆಚ್ಚಿದ್ದರೆ ಸುಮಾರು ₹3 ಕೋಟಿ ಆದಾಯ ಬರುತ್ತಿತ್ತು. ಈ ವರ್ಷ ಕಾಡಿಗೆ ಯಾವುದೇ ಬೆಂಕಿ ಬಿದ್ದಿಲ್ಲ. ಹೀಗಾಗಿ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಪ್ರವಾಸಿಗರ ನಿರೀಕ್ಷೆ ಇತ್ತು. ಆದರೆ, ಕೊರೊನಾ ಸೋಂಕಿನಿಂದಾಗಿ ನಮ್ಮ ನಿರೀಕ್ಷೆ ತಲೆಕೆಳಗಾಗಿದೆ’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದರು.

ಪ್ರವಾಸಿಗರನ್ನು ನಂಬಿ ಎಳನೀರು, ಟೀ– ಕಾಫಿ, ತಿಂಡಿ–ತಿನಿಸಿನ ಅಂಗಡಿಗಳನ್ನು ಇಟ್ಟುಕೊಂಡಿದ್ದ ವ್ಯಾಪಾರಿಗಳು ಸಹ ಕಂಗಾಲಾಗಿದ್ದಾರೆ. ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ವ್ಯಾಪಾರ ಮಾಡುತ್ತಿದ್ದರು. ಇವರಿಗೂ ಸರಿಯಾದ ವ್ಯಾಪಾರ ಇಲ್ಲದೆ ಬೇರೆ ಕೆಲಸಗಳತ್ತ ಮುಖ ಮಾಡಿದ್ದಾರೆ.

ವಸತಿ ಗೃಹಗಳು ಖಾಲಿ:ಬಂಡೀಪುರದ ವಸತಿ ಗೃಹಗಳು, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್, ಖಾಸಗಿ ರೆಸಾರ್ಟ್, ಹೊಂ ಸ್ಟೇಗಳು ಇದ್ದು, ಎಲ್ಲವೂ ಖಾಲಿ ಹೊಡೆಯುತ್ತಿವೆ. ಕಳೆದ ವರ್ಷ ವಸತಿ ಗೃಹಗಳಿಗೆ ಬುಕ್ಕಿಂಗ್ ಸಿಗುತ್ತಿರಲಿಲ್ಲ. ಈ ಬಾರಿ ರಿಯಾಯಿತಿ ನೀಡಿದ್ದರೂ ಸಹ ವಸತಿ ಗೃಹಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಬಂಡೀಪುರದ ಸುತ್ತಮುತ್ತಲಿನ ಅನೇಕ ಹೋಟೆಲ್, ರೆಸ್ಟೋರೆಂಟ್‌ಗಳು ಇನ್ನೂ ಬಂದ್ ಆಗಿವೆ. ಇವುಗಳನ್ನು ತೆರೆದರೆ ಖರ್ಚು ಹೆಚ್ಚಾಗುತ್ತದೆ. ಕೆಲಸ ಮಾಡುವವರಿಗೆ ಕೂಲಿಯನ್ನೂ ನೀಡಲು ಆಗುವುದಿಲ್ಲ. ಆದ್ದರಿಂದ ಇನ್ನೂ ಸ್ವಲ್ಪ ದಿನ ತೆರೆಯದಿರಲು ನಿರ್ಧರಿಸಲಾಗಿದೆ ಎಂದು ಖಾಸಗಿ ರೆಸಾರ್ಟ್ ಮಾಲೀಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT