ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಸಫಾರಿ: ಇನ್ನೂ ನಿರ್ಧಾರ ಇಲ್ಲ

ಜೂನ್‌ 8 ರಿಂದ ಕಾರ್ಯಾರಂಭ ಮಾಡಲಿರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌
Last Updated 6 ಜೂನ್ 2020, 3:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಆತಿಥ್ಯ ಉದ್ಯಮ, ಟ್ರೆಕ್ಕಿಂಗ್‌, ಸಫಾರಿಗಳನ್ನು ಜೂನ್‌ 8ರಿಂದ ಪುನರಾರಂಭಿಸಲು ಸರ್ಕಾರ ಅವಕಾಶ ನೀಡಿದ್ದರೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಬಗ್ಗೆ ಅರಣ್ಯ ಇಲಾಖೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ಆದರೆ, ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌ಗಳು ಜೂನ್‌ 8 ರಿಂದ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಿವೆ. ಜೂನ್‌ 13ರಿಂದ ಬುಕ್ಕಿಂಗ್‌ಗಳು ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್‌ ಪ್ರಕರಣ ದಾಖಲಾದ ನಂತರ, ಮಾರ್ಚ್‌ 14ರಿಂದ ಬಂಡೀಪುರದ ಸಫಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಸುತ್ತಮುತ್ತಲಿನ ರೆಸಾರ್ಟ್‌ಗಳನ್ನೂ ಮುಚ್ಚಲಾಗಿತ್ತು.

ಮೂರು ಕೋಟಿ ನಷ್ಟ: ಬಂಡೀಪುರದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದಾಗಿ ₹3 ಕೋಟಿಯಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಬೇಸಿಗೆ ರಜಾ ಸಮಯದಲ್ಲಿ ಪ್ರವಾಸಿಗರು ಸಫಾರಿಗಾಗಿ ಭಾರಿ ಸಂಖ್ಯೆಯಲ್ಲಿ ಬಂಡೀಪುರಕ್ಕೆ ಬರುತ್ತಾರೆ. ಅಲ್ಲದೇ ಅರಣ್ಯ ಇಲಾಖೆಯ ವಸತಿಗೃಹಗಳನ್ನು ಕಾಯ್ದಿರಿಸುತ್ತಾರೆ. ಈ ಬಾರಿ ಲಾಕ್‌ಡೌನ್‌ ರಜಾ ಸಮಯದಲ್ಲೇ ಆಗಿರುವುದರಿಂದ ಹೆಚ್ಚಿನ ನಷ್ಟವಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಕಳೆದ ವರ್ಷ ಕಾಳ್ಗಿಚ್ಚಿನಿಂದಾಗಿ ರಜಾ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ಹಾಗಿದ್ದರೂ ಆದಾಯದಲ್ಲಿ ದೊಡ್ಡ ನಷ್ಟವಾಗಿರಲಿಲ್ಲ.

‘ಕರ್ನಾಟಕ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಿಗರೂ ಬಂಡೀಪುರದ ಸಫಾರಿಗೆ ಬರುತ್ತಾರೆ. ಮುಂಗಡವಾಗಿಯೇ ಟಿಕೆಟ್‌ ಕಾಯ್ದಿರಿಸುತ್ತಾರೆ. ಈ ಬಾರಿಯೂ ಬೇಸಿಗೆಯಲ್ಲಿ ಅನೇಕ ಬುಕ್ಕಿಂಗ್ ಆಗಿದ್ದವು. ಅವುಗಳೆಲ್ಲವನ್ನು ರದ್ದು ಮಾಡಿ ಹಣವನ್ನು ಮರು ಪಾವತಿ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಕಳೆದ ವರ್ಷ ಬೆಂಕಿಯಿಂದ ಗೋಪಾಲಸ್ವಾಮಿ ಬೆಟ್ಟ ವಲಯದ ಸಾವಿರಾರು ಎಕರೆಗಳಷ್ಟು ಕಾಡು ನಾಶವಾಗಿತ್ತು. ಅದರಿಂದ ಸ್ವಲ್ಪ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು.ಈ ವರ್ಷ ಉತ್ತಮ ಮಳೆ, ಬೆಂಕಿಯ ತೊಂದರೆಯಿಲ್ಲ. ಎಲ್ಲೆಲ್ಲೂ ಹಸಿರು ಇದೆ. ಹಾಗಾಗಿ ಪ್ರವಾಸಿಗರ ಸಂಖ್ಯೆ ದುಪ್ಪಟ್ಟು ಆಗಿರುತ್ತಿತ್ತು. ಅಂದಾಜು ಮೂರು ಕೋಟಿಗಳಷ್ಟು ಆದಾಯವೂ ಬರುತ್ತಿತ್ತು ’ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ. ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆದೇಶ ಬಂದಿಲ್ಲ

‘ಜನರ ಆರೋಗ್ಯದ ಹಿತದೃಷ್ಟಿಯಿಂದ ಸಫಾರಿ ನಿಲ್ಲಿಸಲಾಗಿತ್ತು. ಜೂನ್‌ 8ರ ನಂತರ ಸಫಾರಿ ಆರಂಭಿಸುವ ಬಗ್ಗೆ ನಮಗಿನ್ನೂ ಸೂಚನೆ ಬಂದಿಲ್ಲ. ಇದೇ 8ರ ನಂತರ ಜಂಗಲ್ ಲಾಡ್ಜಸ್‌ಅಂಡ್‌ ರೆಸಾರ್ಟ್‌ಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ. ಆದರೆ ನಮಗೆ ಇನ್ನೂ ಆದೇಶ ಬಂದಿಲ್ಲ’ ಎಂದು ಟಿ.ಬಾಲಚಂದ್ರ ಅವರು ಹೇಳಿದರು.

‘ಸದ್ಯದ ಮಟ್ಟಿಗೆ ಎಲ್ಲ ಸಫಾರಿ ವಾಹನಗಳನ್ನು ಸರ್ವೀಸ್‌ ಮಾಡಿ ಇಟ್ಟಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT