ಗುರುವಾರ , ಸೆಪ್ಟೆಂಬರ್ 23, 2021
21 °C

ಮಹದೇಶ್ವರ ಬೆಟ್ಟ: ಭಕ್ತರ ಅನುಪಸ್ಥಿತಿಯಲ್ಲಿ ಭೀಮನ ಅಮಾವಾಸ್ಯೆ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಭೀಮನ ಅಮಾವಾಸ್ಯೆ ಪ್ರಯುಕ್ತ ಇಲ್ಲಿನ ಮಲೆಮಹದೇಶ್ವರ ಸ್ವಾಮಿಗೆ ಭಾನುವಾರ ವಿಶೇಷ ಪೂಜೆ ಪೂಜೆ ಸರಳ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿತು. 

ವಾರಾಂತ್ಯ ಕರ್ಫ್ಯೂ ಹಾಗೂ ಕೋವಿಡ್‌ ನಿಯಂತ್ರಣಕ್ಕಾಗಿ ವಾರಾಂತ್ಯದಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ವಿವಧಿ ವಿಧಾನಗಳು ನಡೆದವು. 

ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ ದಿನದಂದು ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುತ್ತಾರೆ. 

ಧಾರ್ಮಿಕ ಕಾರ್ಯಕ್ರಮ: ಭಾನುವಾರ ಮುಂಜಾವು 3 ಗಂಟೆಯಿಂದಲೇ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆರಂಭದಲ್ಲಿ ಸ್ವಾಮಿಗೆ ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ 4 ಗಂಟೆಯಿಂದ 6 ಗಂಟೆಯವರೆಗೆ ಎರಡನೇ ಪೂಜೆಯನ್ನು ನೆರವೇರಿಸಲಾಯಿತು.

ಬೇಡಗಂಪಣ ಅರ್ಚಕರು ಮಜ್ಜನದ ಬಾವಿಯಿಂದ ನೀರನ್ನು ತಂದು ಅದಕ್ಕೆ ಗಂಧವನ್ನು ಸೇರಿಸಿ ಸ್ವಾಮಿಗೆ ಅಭಿಷೇಕ ಮಾಡಿದರು. ನಂತರ ಹಾಲು ಮತ್ತು ಬೆಲ್ಲದ ಅಭಿಷೇಕ ನಡೆಸಲಾಯಿತು. ಗಣಪತಿ ಪೂಜೆಯನ್ನು ಮಾಡಿ ಪಂಚ ಕಳಸ ಸಮೇತವಾಗಿ ಶತನಾಮಾವಳಿಯ ಬಿಲ್ವಾರ್ಚನೆ ಮಾಡಲಾಯಿತು. ನಂತರ ಸ್ವಾಮಿಗೆ ನವರತ್ನ ಕಿರೀಟ ಧಾರಣೆ ಹಾಗೂ ಶೇಷಣ್ಣ ಒಡೆಯರ ವಿಗ್ರಹ, ತ್ರಿಶೂಲ ಇಟ್ಟು ಫಲ ಪುಷ್ಪ ಪತ್ರೆಗಳಿಂದ ಅಲಂಕಾರ ಮಾಡಲಾಯಿತು.

ನಗಾರಿ, ಜಾಗಟೆ, ದವಣೆ ಹಾಗೂ ಮಂಗಳವಾಧ್ಯಗಳ ಸಮೇತವಾಗಿ ಬೆಳ್ಳಿಯ ದೀವಟಿಗೆ ಸಹಿತ ಪಂಜಿನ ಸೇವೆಯನ್ನು ನೆರವೇರಿಸಿ ದೂಪದ ಆರತಿ, ಏಕಾರತಿ, ಕುಂಭಾರತಿ, ಪಂಚಾರತಿ, ರಥಾರತಿ ಹಾಗೂ ಕರ್ಪೂರದ ಆರತಿಯ ಸಮೇತವಾಗಿ ಮಾದೇಶ್ವರ ಸ್ವಾಮಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು.

ಸಾಲೂರು ಶ್ರೀಗಳ ಹಾಜರಿ: ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಪೀಠಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ವರ್ಷಾಚರಣೆ ದಿನವೂ ಭಾನುವಾರವೇ ಆಗಿದ್ದರಿಂದ ಶ್ರೀಗಳು ಬೆಳಗಿನ ಅಭೀಷೇಕದ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು