ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಎಸ್‌ನಿಂದ ಬೈಕ್‌ ಜಾಥಾ; ಚಾಲನೆ ನಾಳೆ

ಬಿಜೆಪಿ, ಕಾಂಗ್ರೆಸ್‌ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಯತ್ನ–ಗಿರೀಶ
Published 18 ಫೆಬ್ರುವರಿ 2024, 5:46 IST
Last Updated 18 ಫೆಬ್ರುವರಿ 2024, 5:46 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯದಾದ್ಯಂತ 3000 ಕಿ.ಮೀಗಳ ಬೈಕ್‌ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸೋಮವಾರ (ಫೆ.19) ಜಾಥಾಗೆ ಚಾಲನೆ ನೀಡಲಾಗುವುದು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ ಶನಿವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಆ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ ಚಾಲನೆ ಸಿಗಲಿದೆ. ಮಾರ್ಚ್‌ 2ರಂದು ಜಾಥಾ ಮುಕ್ತಾಯವಾಗಲಿದೆ. ನೆಲಮಂಗಲದಲ್ಲಿ ಸಮಾರೋಪ ನಡೆಯಲಿದೆ’ ಎಂದರು. 

‘ಬಹುತೇಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾಥಾ ಸಾಗಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 20ರಂದು ಮಂಗಳವಾರ ಸಂಜೆ 5.30ಕ್ಕೆ ಜಾಥಾ ಚಾಮರಾಜನಗರಕ್ಕೆ ಬರಲಿದ್ದು, ನಗರದ ಹಳೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಯಲಿದೆ’ ಎಂದರು. 

‘12 ದಿನಗಳ ಕಾಲ ನಡೆಯಲಿರುವ ಜಾಥಾದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಕನಿಷ್ಠ 100 ಮಂದಿ ಪಾಲ್ಗೊಳ್ಳಲಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಸೇರಲಿದ್ದಾರೆ. ಸಾರ್ವಜನಿಕರು ಕೂಡ ಇದಕ್ಕೆ ಬೆಂಬಲ ನೀಡಿ, ಜಾಥಾದಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.  

ಕೆಆರ್‌ಎಸ್‌ ಜಿಲ್ಲಾ ಉಪಾಧ್ಯಕ್ಷ ಸೈಯದ್‌ ಸಮಿ, ಕಾರ್ಯದರ್ಶಿ ಮುಜಾಮಿಲ್‌, ಗುಂಡ್ಲುಪೇಟೆ ತಾಲ್ಲೂಕು ಅಧ್ಕಕ್ಷ ಮಹೇಶ್‌, ಕಾರ್ಯಕರ್ತರಾದ ಮುಬಾರಕ್‌, ತೌಸಿಫ್‌ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT