ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥನ ಸನ್ನಿಧಿಯಲ್ಲಿ ದೊಡ್ಡಜಾತ್ರೆ ವೈಭವ, ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಬಿಳಿಗಿರಿರಂಗನಬೆಟ್ಟ: ಅದ್ಧೂರಿ ಬ್ರಹ್ಮರಥೋತ್ಸವ
Published 4 ಮೇ 2023, 14:02 IST
Last Updated 4 ಮೇ 2023, 14:02 IST
ಅಕ್ಷರ ಗಾತ್ರ

ಯಳಂದೂರು: ಸಾವಿರಾರು ಭಕ್ತರ ಜಯಘೋಷಗಳ ನಡುವೆ ಬಿಳಿಗಿರಿರಂಗನಬೆಟ್ಟದ ಒಡೆಯ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು.

ಜಿಲ್ಲೆ, ಹೊ ಜಿಲ್ಲೆಗಳ ಸಾವಿರಾರು ಭಕ್ತರು ದೊಡ್ಡ ಜಾತ್ರೆಯಲ್ಲಿ ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು. ದೇವಳದಲ್ಲಿ ಹರಕೆ ಸಲ್ಲಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಉತ್ಸವಕ್ಕೂ ಮೊದಲು. ರಂಗನಾಥನ ದೇಗುಲದ ಸುತ್ತಲೂ ತಳಿರು ತೋರಣಗಳ ಸಿಂಗಾರ, ರಂಗೋಲಿ ಅಲಂಕಾರ ಮಾಡಲಾಗಿತ್ತು. ಜಾತ್ರೆಗೂ ಮುನ್ನವೇ ಆಗಮಿಸಿದ್ದ ಭಕ್ತಗಣ ಕಬ್ಬು, ಬಾಳೆ, ಹೂಗಳ ಮಾಲೆಕಟ್ಟಿ, ದವಸ, ಧಾನ್ಯ ಸಮರ್ಪಿಸಿದರು. ಗರ್ಭಗುಡಿಯಲ್ಲಿ ಅರ್ಚಕರು ಮುಂಜಾವದ ಪೂಜೆ, ಕರ್ಪೂರದ ಆರತಿ ಬೆಳಗಿ, ಮಂತ್ರ ಘೋಷಗಳನ್ನು ಪೂರೈಸಿ, ಸುಗಂಧ ಕಡ್ಡಿ ಹಚ್ಚಿ, ಧೂಪದ ಪರಿಮಳವನ್ನು ತುಂಬಿದರು.

ಚಿತ್ತ ನಕ್ಷತ್ರದಲ್ಲಿ ರಥೋತ್ಸವಕ್ಕೆ ವೈಭವದ ಚಾಲನೆ ನೀಡಲಾಯಿತು. ಮಧ್ಯಾಹ್ನ 12.10 ರಿಂದ 12.34 ಗಂಟೆಯೊಳಗೆ ಶುಭ ಕರ್ಕಾಟಕ ಲಗ್ನದ ಧನುರ್ಗುರು ನಾವಾಂಶ ಶುಭ ಮುಹೂರ್ತದಲ್ಲಿ ಭೂದೇವಿ ಮತ್ತು ಶ್ರೀದೇವಿ ಸಮೇತ ಬಿಳಿಗಿರಿ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥಾರೋಹಣ ಮಾಡಲಾಯಿತು.

ರಥೋತ್ಸವದಲ್ಲಿ ಶಂಖನಾದ: ಅಪಾರ ಭಕ್ತರ ಜಯಘೋಷಗಳ ನಡುವೆ ರಥ ಏರಿದ ಆಗಮಿಕರು ಉತ್ಸವಮೂರ್ತಿಗೆ ಪೂಜೆ ನೆರವೇರಿಸಿದರು. ಅರ್ಚನೆ ಮುಗಿಯುತ್ತಿದ್ದಂತೆ ಭಕ್ತಗಣದ ಘೋಷಣೆ ಮುಗಿಲು ಮುಟ್ಟಿತ್ತು. ರಥದ ಮುಂಭಾಗ ಕರ್ಪೂರ ಬೆಳಗಿ, ಹಣ್ಣುಕಾಯಿ ಪೂಜೆ ಮಾಡಿ, ಮಂಗಳಾರತಿ ಸಲ್ಲಿಸುತ್ತಿದ್ದಂತೆ ಗೋವಿಂದ ನಾಮ ಸ್ಮರಣೆ ಎಲ್ಲೆಡೆಯೂ ಮಾರ್ಧನಿಸಿತು. ದಾಸರು ಜಾಗಟೆ ಬಾರಿಸಿ, ಎಡಬಿಡದೆ ಶಂಖ ಊದಿದರು. ‘ಉಘೇ ರಂಗಪ್ಪ’ ಸ್ಮರಣೆ ಮುಗಿಲುಮುಟ್ಟಿತು. ಮಂಗಳ ವಾದ್ಯ ಮೊಳಗುತ್ತಿದ್ದಂತೆ ಭಕ್ತರು ತೇರು ಎಳೆದು ಸಂಭ್ರಮಿಸಿದರು.

ಬ್ರಹ್ಮರಥ ಪೂರ್ವಾಭಿಮುಖವಾಗಿ ಸಾಗುವಾಗ ಕೃಷಿಕರು ಹೊಸ ಫಸಲನ್ನು ತೇರಿಗೆ ತೂರಿದರು. ಹರಕೆ ಹೊತ್ತ ಮಹಿಳೆಯರು ಕನಕಾಭಿಷೇಕ ಮಾಡಿದರು. ನವ ಜೋಡಿಗಳು ಹಣ್ಣು ಧವನ ತೂರಿ ದೈವಗಳನ್ನು ಸ್ಮರಿಸಿದರು. ಹಾದಿಯುದ್ದಕ್ಕೂ ದಾಸರು ಹಳದಿ ವಸ್ತ್ರ ಧರಿಸಿ ಬ್ಯಾಟೆಮನೆ ಉತ್ಸವಗಳನ್ನು ನೆರವೇರಿಸಿದರು. ನಂತರ ಭಕ್ತರು ರಥವನ್ನು ಪಶ್ಚಿಮಾಭಿಮುಖವಾಗಿ ಎಳೆದು ಸ್ವಸ್ಥಾನಕ್ಕೆ ತಲುಪಿದರು. 

ಈ ವೇಳೆ, ದೇವರಿಗೆ ಅರ್ಪಿಸಿದ್ದ ಹೂ, ಹಣ್ಣುಗಳನ್ನು ಪಡೆಯಲು ಭಕ್ತರು ಮುಗಿಬಿದ್ದರು. ರಥಕ್ಕೆ ಉದ್ದಂಡ ನಮಸ್ಕಾರ ಹಾಕಿ ಶ್ರದ್ಧಾ ಭಕ್ತಿ ಸಮರ್ಪಿಸಿದರು.

ದರ್ಶನಕ್ಕೆ ಜನಸಾಗರ: ರಥೋತ್ಸವದ ನಂತರ ಗಿರಿ ಏರಿದ ಭಕ್ತರು ದೇವಾಲಯದ ಸುತ್ತಲೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಗೆಬಗೆ ಪುಷ್ಪ ಹಾಗೂ ಚಿನ್ನದ ಆಭರಣಗಳಿಂದ ಶೋಭಿಸುತ್ತಿದ್ದ ರಂಗಪ್ಪನಿಗೆ ಹರಕೆ ಒಪ್ಪಿಸಿದರು. ಅಮ್ಮನವರ ಗುಡಿಯಲ್ಲಿ ಕುಂಕುಮಾರ್ಚನೆ ಮಾಡಿ, ರಂಗಪ್ಪನ ಪಾದುಕೆಯನ್ನು ಶಿರಕ್ಕೆ ಸ್ಪರ್ಶಿಸಿಕೊಂಡರು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಕಜ್ಜಾಯ, ಕಡ್ಲೆಪುರಿ, ಬೆಂಡು, ಬತಾಸು, ಮಕ್ಕಳ ಆಟಿಕೆಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಮಜ್ಜಿಗೆ ಪಾನಕ ವಿತರಣೆ: ಭಕ್ತರಿಗೆ ದಾರಿಯುದ್ದಕ್ಕೂ ಸ್ಥಳೀಯರು ನೀರು, ಮಜ್ಜಿಗೆ, ಪಾನಕ ವಿತರಿಸಿದರು. ತಾಪದಿಂದ ನಲುಗಿದ್ದ ಭಕ್ತರು ಬಸ್ ನಿಲ್ಲಿಸಿ ಪಾನೀಯಗಳನ್ನು ಸೇವಿಸಿದರು. ಬೆಟ್ಟದಲ್ಲಿ ದಾಸೋಹ ಮತ್ತು ಅರವಟ್ಟಿಗೆಗಳ ಬಳಿ ಭಕ್ತರಿಗೆ ನೀರು ಮತ್ತು ಅನ್ನಪ್ರಸಾದ ವಿತರಿಸಲಾಯಿತು. ಗ್ರಾಮಸ್ಥರು ಮಂಟಪೋತ್ಸವಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಸ್ ವ್ಯವಸ್ಥೆ ಅಚ್ಚುಕಟ್ಟು: ಈ ಬಾರಿ ಯಳಂದೂರು ಮತ್ತು ಗುಂಬಳ್ಳಿ ಚೆಕ್‌ಪೋಸ್ಟ್‌ಗಳಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ, ಕೆಎಸ್ಆರ್‌ಟಿಸಿ ಬಸ್‌ಗಳ ಮೂಲಕ ಭಕ್ತರು ಸುಲಲಿತವಾಗಿ ಬೆಟ್ಟ ತಲುಪಿದರು. ಬಿಗಿ ಬಂದೋಬಸ್ತ್ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲಾಯಿತು. ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT