ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ರಹಸ್ಯ ಸಭೆ

ಚಾಮರಾಜನಗರದ ಖಾಸಗಿ ಹೋಟೆಲ್‌ನಲ್ಲಿ ಚರ್ಚೆ: ಕುತೂಹಲ ಮೂಡಿಸಿದ ನಡೆ
Last Updated 21 ಮಾರ್ಚ್ 2023, 4:17 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ, ಕೆಲವು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಭಾನುವಾರ ರಾತ್ರಿ ರಹಸ್ಯ ಸಭೆ ನಡೆಸಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿರುವ ನಾಲ್ಕೈದು ಮಂದಿ ಮುಖಂಡರು ಹೋಟೆಲ್‌ ಒಂದರಲ್ಲಿ ಸೇರಿ, ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿರುವುದು ಪಕ್ಷದೊಳಗೆ ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿಯಲ್ಲಿ 12 ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಆರೇಳು ಮಂದಿ ಪ್ರಬಲ ಆಕಾಂಕ್ಷಿಗಳು ಆರಂಭದಿಂದಲೂ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಭಾನುವಾರದ ಸಭೆಯಲ್ಲಿ ಎಷ್ಟು ಮಂದಿ ಭಾಗವಹಿಸಿದ್ದರು ಎಂಬ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ವಿಚಾರಿಸಿದರೆ ಯಾರೂ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಆದರೆ, ಸಭೆ ನಡೆದಿರುವುದನ್ನು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ. ಕಾಡಾ ಅಧ್ಯಕ್ಷ ನಿಜಗುಣರಾಜು ಸೇರಿದಂತೆ ನಾಲ್ಕೈದು ಮಂದಿ ಇದ್ದರು ಎಂದು ಹೇಳಲಾಗುತ್ತಿದೆ.

‘ಹೊರಗಡೆಯಿಂದ ಬಂದವರಿಗೆ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸಲು ಅವಕಾಶ ನೀಡಬಾರದು. ಸ್ಥಳೀಯ ಆಕಾಂಕ್ಷಿಗಳಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಲಿ. ಗೆಲುವಿಗೆ ಒಂದಾಗಿ ಶ್ರಮಿಸೋಣ’ ಎಂಬ ಅಭಿಪ್ರಾಯವನ್ನು ಆಕಾಂಕ್ಷಿಗಳು ವ್ಯಕ್ತಪಡಿಸಿದರು ಎಂಬುದು ತಿಳಿದು ಬಂದಿದೆ.

‘ನನಗೂ ಸಭೆಗೆ ಬರಲು ಹೇಳಿದ್ದರು. ಆದರೆ, ನಾನು ಹೋಗಿಲ್ಲ. ಎಷ್ಟು ಜನ ಭಾಗವಹಿಸಿದ್ದಾರೆ ಎಂಬುದು ತಿಳಿದಿಲ್ಲ. ನನ್ನ ನಿಲುವು ಆರಂಭದಿಂದಲೂ ಒಂದೇ. ಯಾರಾದರೂ ಅಭ್ಯರ್ಥಿಯಾಗಲಿ, ಸ್ಥಳೀಯರಿಗೆ ಟಿಕೆಟ್‌ ನೀಡಬೇಕು. ಅದನ್ನು ಮುಖಂಡರ ಮುಂದೆ ಹೇಳಿದ್ದೇನೆ. ಇತರ ಆಕಾಂಕ್ಷಿಗಳ ಮುಂದೆಯೂ ತಿಳಿಸಿದ್ದೇನೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌ ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ, ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ರುದ್ರೇಶ್‌ ವಿರುದ್ಧ ಹರಿಹಾಯ್ದಿದ್ದರು.

ನಾನೂ ಟಿಕೆಟ್‌ ಆಕಾಂಕ್ಷಿ: ಈ ಮಧ್ಯೆ, ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಯು.ಎಂ.ಪ್ರಭುಸ್ವಾಮಿ ‘ಚಾಮರಾಜನಗರ ಕ್ಷೇತ್ರದಿಂದ ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈಗಾಗಲೇ ಚಾಮರಾಜನಗರ ಕ್ಷೇತ್ರದ ಪ್ರಭಾರಿ ಕೋಟೆ ಎಂ.ಶಿವಣ್ಣಗೆ ಅರ್ಜಿ ಸಲ್ಲಿಸಿದ್ದೇನೆ. ನಮ್ಮ ತಂದೆ ಯು.ಎಂ.ಮಾದಪ್ಪ ಶಾಸಕರಾಗಿದ್ದಾಗ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ’ ಎಂದು ತಿಳಿಸಿದರು.

‘20–30 ವರ್ಷ ಜನತಾ ಪಕ್ಷದಲ್ಲಿ ಉಡಿಗಾಲ ಮಂಡಲ ಕಾರ್ಯದರ್ಶಿಯಾಗಿ, ಜನತಾದಳದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಆ ನಂತರ ಎಂ.ರಾಜಶೇಖರಮೂರ್ತಿ, ಬಿ.ಎಸ್.ಯಡಿಯೂರಪ್ಪ, ಬಂಗಾರಪ್ಪ ಮೂಲಕ ಬಿಜೆಪಿಗೆ ಸೇರ್ಪಡೆಯಾಗಿ ರಾಜ್ಯ ಪರಿಷತ್ ಸದಸ್ಯರಾಗಿ ನೇಮಕವಾಗಿದ್ದೆ’ ಎಂದರು.

'ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತನಾಗಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಿದ್ದು, ಮಹದೇಶ್ವರರ ಹೆಸರಲ್ಲಿ ಪ್ರವಾಸೋದ್ಯಮ, ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.

‘ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ಗೆ ಸೇರ್ಪಡೆಯಾಗುವಂತೆ ಕರೆ ಮಾಡಿ ಕೇಳಿದ್ದಾರೆ. ಆದರೆ, ನಾನು ಯಾವುದೇ ಪಕ್ಷಕ್ಕೆ ಹೋಗದೆ ಇಲ್ಲೇ ಉಳಿದಿದ್ದು ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಚಂದ್ರಶೇಖರ್, ನಟೇಶ್, ಮಾದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT