ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಕಡಿದು, ಸಾಗಾಟಕ್ಕೆ ರೈತರಿಗೆ ಅನುಮತಿ: ಶೋಭಾ ಕರಂದ್ಲಾಜೆ

ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿ, ಮೋದಿ ಸರ್ಕಾರದ ಕೃಷಿ ಕಾರ್ಯಕ್ರಮಗಳ ವಿವರಣೆ
Last Updated 17 ಆಗಸ್ಟ್ 2021, 1:23 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೇಂದ್ರ ಸರ್ಕಾರವು ಅರಣ್ಯ ಕೃಷಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ರೈತ ತನ್ನ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಸೇರಿದಂತೆ ಎಲ್ಲ ಮರಗಳನ್ನು ಕಡಿದು ಸಾಗಾಟ ಮಾಡುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗಿರುವ ಕಾಯ್ದೆಯನ್ನು ಸಡಿಲಗೊಳಿಸಲಾಗಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮವಾರ ಹೇಳಿದರು.

ಜಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಇಡೀ ದೇಶದಲ್ಲೇ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳುಕರ್ನಾಟಕದಲ್ಲಿ ಬಿಗಿಯಾಗಿವೆ. ಈ ಕಾರಣದಿಂದ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆಸಿದ ಮರಗಳನ್ನು ಕಡಿಯಲೂ ಅರಣ್ಯ ಇಲಾಖೆಯ ಅನುಮತಿ ಬೇಕು. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಲು ಪ್ರಧಾನಿ ಮೋದಿ ಅವರು ಸೂಚಿಸಿದ್ದಾರೆ’ ಎಂದು ಹೇಳಿದರು.

‘2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬುದು ಮೋದಿ ಅವರ ಸಂಕಲ್ಪ. ಕೋವಿಡ್‌ ಕಾರಣದಿಂದ ಎರಡು ವರ್ಷ ಹಾಳಾಗಿದೆ. ಆದಾಯ ಹೆಚ್ಚಿಸುವುದಕ್ಕಾಗಿ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಕೈಗೊಂಡಿದೆ. ಮುಂದೆಯೂ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ’ ಎಂದರು.

‘2013–14ರ ಚುನಾವಣಾ ಬಜೆಟ್‌ನಲ್ಲಿ ಯುಪಿಎ ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೇವಲ ₹21 ಸಾವಿರ ಕೋಟಿ ನೀಡಿತ್ತು. ಮೋದಿ ಸರ್ಕಾರ ಈ ವರ್ಷ ₹1.23 ಲಕ್ಷ ಕೋಟಿ ನೀಡಿದೆ. ಇದಲ್ಲದೇ ಕೃಷಿ ಸಂಶೋಧನೆಗಾಗಿ ₹8,500 ಕೋಟಿ ಮೀಸಲಿಟ್ಟಿದೆ. ಕೃಷಿ ಮೂಲಭೂತ ನಿಧಿಯಾಗಿ ಪ್ರತ್ಯೇಕ ₹1 ಲಕ್ಷ ಕೋಟಿ ಇಟ್ಟಿದೆ. ಈ ನಿಧಿಯನ್ನು ಬಳಸಿಕೊಂಡು, ಮಾರುಕಟ್ಟೆ, ಶೈತ್ಯಾಗಾರ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಒದಗಿಸಲು ಅವಕಾಶ ಇದೆ’ ಎಂದರು.

ಮಿಶ್ರಬೆಳೆ ಪದ್ಧತಿ ಅನುಸರಿಸಿ: ‘ರೈತರು ಕೇವಲ ಕೃಷಿ ಮಾತ್ರ ಮಾಡದೆ ಅದಕ್ಕೆ ಪೂರಕವಾಗಿ ಹೈನುಗಾರಿಕೆ, ಕುಕ್ಕುಟೋದ್ಯಮ ಮುಂತಾದ ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ನಿರಂತರವಾಗಿ ಆದಾಯ ಬರುವಂತೆ ಮಾಡಲು ಮಿಶ್ರ ಬೆಳೆ ಪದ್ಧತಿ ಅನುಸರಿಸುವತ್ತ ಗಮನಹರಿಸಬೇಕು. ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಸಹಕಾರಿ ತತ್ವದ ಅಡಿಯಲ್ಲಿ ಸಾಮೂಹಿಕವಾಗಿ ಕೆಲಸ ಮಾಡಬೇಕು’ ಎಂದು ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯಪಟ್ಟರು.

ಸಿರಿಧಾನ್ಯ ಬೆಳೆಸಿ: ‘ಭಾರತದ ಮನವಿಗೆ ಓಗೊಟ್ಟು 2023 ಇಸವಿಯನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಆಚರಿಸಲು ವಿಶ್ವಸಂಸ್ಥೆ ನಿರ್ಧರಿಸಿದೆ. ಸಿರಿಧಾನ್ಯಗಳಿಗೆ ಎಲ್ಲ ಕಡೆಯೂ ಬೇಡಿಕೆ ಇದ್ದು, ಒಣಭೂಮಿಯಲ್ಲೂ ಬೆಳೆಯಬಹುದು. ರಾಜ್ಯದಲ್ಲಿ ಇವುಗಳನ್ನು ಬೆಳೆಯಲು ಪೂರಕವಾತಾವರಣ ಇದೆ. ರೈತರು ಇವುಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಂಡಲಗಳಿಗೆ ಭೇಟಿ: ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು, ‘ಮುಂದಿನ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗ‌ಬೇಕು. ಎಲ್ಲ ಮಂಡಲಗಳಿಗೂ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದೇನೆ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗುವುದು. ಎರಡೂ ಚುನಾವಣೆಗಳಲ್ಲೂ ನಮ್ಮ ಕಾರ್ಯಕರ್ತರೇ ಗೆಲ್ಲಬೇಕು’ ಎಂದರು.

ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಮಾತನಾಡಿದರು.ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್.ಸುಂದರ್‌, ತುಳಸಿ ಮುನಿರಾಜು, ಶಾಸಕ ನಾಗೇಂದ್ರ, ಮೈ.ಯಿ.ರವಿಶಂಕರ್‌ ಇದ್ದರು.

ರೈತ ನಟರಾಜು ಮನೆಗೆ ಶೋಭಾ ಭೇಟಿ

ಇದಕ್ಕೂ ಮುನ್ನ ಶೋಭಾ ಅವರು ತಾಲ್ಲೂಕಿನಮಾದಾಪುರದಲ್ಲಿರುವ ರೈತ ನಟರಾಜು ಅವರ ಮನೆಗೆ ಭೇಟಿ ನೀಡಿದರು.

ನಟರಾಜು ಅವರೊಂದಿಗೆ ಸಮಾಲೋಚಿಸಿದ ಸಚಿವರು ಯಾವ ಯಾವ ಬೆಳೆ ಬೆಳೆಯಲಾಗುತ್ತಿದೆ ಎಂಬ ಬಗ್ಗೆ ವಿಚಾರಿಸಿದರು.

ಇದೇ ವೇಳೆ ಸ್ಥಳೀಯ ರೈತರು ಹಲವು ಬೇಡಿಕೆಗಳು ಹಾಗೂ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.

‘ದೇಶದ ಬೆನ್ನೆಲುಬಾದ ರೈತರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ರೈತರ ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ದೇಶದಲ್ಲಿ ಶೇ 70ರಷ್ಟು ಜನರು ವ್ಯವಸಾಯ ಸಂಬಂಧಿ ಕೆಲಸಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಶೇ 80ರಷ್ಟು ಸಣ್ಣ ಅತಿಸಣ್ಣ ರೈತರಿದ್ದಾರೆ. ಇವರಿಗೆ ಧೈರ್ಯ ಹಾಗೂ ಬಲ ತುಂಬುವುದು ಕೇಂದ್ರದ ಸಂಕಲ್ಪವಾಗಿದೆ’ ಎಂದರು.

ಶಾಸಕ ಸಿ.ಎಸ್‌.ನಿರಂಜನಕುಮಾರ್‌,ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ, ಇತರೆ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT