ಬುಧವಾರ, ಆಗಸ್ಟ್ 17, 2022
23 °C
ಗ್ರಾಮಾಂತರ ಮಂಡಲ ಅಧ್ಯಕ್ಷ ಸ್ಥಾನದಿಂದ ಪ್ರಶಾಂತ್‌ ಪದಚ್ಯುತಿಗೆ ಆಕ್ರೋಶ

ಬಿಜೆಪಿ ಜಿಲ್ಲಾ ಘಟಕದ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಿಜೆಪಿಯ ಚಾಮರಾಜನಗರ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿದ್ದ ಪ್ರಶಾಂತ್ ಅವರನ್ನು ಪಕ್ಷದ ಜವಾಬ್ದಾರಿಯಿಂದ ಪದಚ್ಯುತಿಗೊಳಿಸಿರುವುದನ್ನು ಖಂಡಿಸಿ, ಪಕ್ಷದ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾ ಬಿಜೆಪಿ ಘಟಕದ ಕಚೇರಿ ಎದುರು ಪ್ರತಿಭಟಿಸಿದರು. 

ಪ್ರಶಾಂತ್ ಅವರನ್ನು ಮತ್ತೆ ತಾಲ್ಲೂಕು ಅಧ್ಯಕ್ಷರಾಗಿ ಮಾಡಬೇಕು. ಹಾಗೂ ವೀರಶೈವ-ಲಿಂಗಾಯತರನ್ನು ಕಡೆಗಣಿಸುತ್ತಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ  ಕೆಲ ಸದಸ್ಯರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. 

ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ಮಹೇಶ್ ಮಾತನಾಡಿ, ‘ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸಾದ್ ಸೇರಿದಂತೆ ಹಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿಕೊಡುತ್ತಿದ್ದಾರೆ. ಗ್ರಾಮಾಂತರ ಅಧ್ಯಕ್ಷರನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಕೋವಿಡ್ ಸಂದರ್ಭದಲ್ಲಿ ತೆಗೆದು ಹಾಕಿ, ಆ ಜಾಗಕ್ಕೆ ಪಕ್ಷದ ಯಾವುದೇ ಸಮಿತಿಯಲ್ಲಿ ಪದಾಧಿಕಾರಿ ಅಲ್ಲದ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿರುವುದು ಯಾವ ನ್ಯಾಯ? ಮತ್ತೊಬ್ಬರನ್ನು ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಸಮಿತಿಯಲ್ಲಿರುವ ನಮ್ಮ ಗಮನಕ್ಕೂ ತಂದಿಲ್ಲ. ತಮಗೆ ಇಷ್ಟ ಬಂದವರನ್ನು ನೇಮಕ ಮಾಡುವ ಮೂಲಕ ಪಕ್ಷದ ಶಿಸ್ತು ಹಾಗು ನಿಯಮವನ್ನು ಗಾಳಿಗೆ ತೂರಿದ್ದಾರೆ. ಇದರಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಹಾಗೂ ಬೇಸರವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮುಖಂಡ ಪಿ.ಎನ್.ದಯಾನಿಧಿ ಮಾತನಾಡಿ, ‘ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡುವ ಜೊತೆಗೆ ಮುಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೆವು. ಇದನ್ನು ಸಹಿಸಿದ ಜಿಲ್ಲಾ ಸಮಿತಿಯ ಕೆಲವರು ಕಾಂಗ್ರೆಸ್‌ನ ಹಾಲಿ ಶಾಸಕರ ಪರ ಒಳ ಒಪ್ಪಂದ ಮಾಡಿಕೊಂಡು ಸಂಘಟನೆಗೆ ತೊಡಕುಂಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಿಸಲವಾಡಿ ಬಸವರಾಜು, ಕುಮಾರ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶಮಿತ್‌ಕುಮಾರ್, ಉಮೇಶ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಸುಧಾ ಶಂಕರ್, ರವಿ, ಜಿಲ್ಲಾ ಕಾರ್ಯದರ್ಶಿ ರವಿ, ಪೃಥ್ವಿರಾಜ್, ಅಮಚವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಂದ್ರ, ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್, ಹೆಗ್ಗೋಠಾರ ಅಧ್ಯಕ್ಷ ಪ್ರಕಾಶ್, ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಮೂರ್ತಿ, ಮಂಜು, ಸಿದ್ದರಾಜು, ಬಸವರಾಜು, ಸ್ವಾಮಿ, ಗುರುರಾಜ್, ಪರಶಿವಮೂರ್ತಿ, ದೊಡ್ಡಮೋಳೆ ರಂಗನಾಥ್, ಬಂಡಿಗೆರೆ ರವಿ, ಹರದನಹಳ್ಳಿ ಚಂದ್ರು, ಕೃಷ್ಣ, ರವಿ, ಮುಖಂಡರಾದ ಅಂಕನಶೆಟ್ಟಿಪುರ ಸೋಮಣ್ಣ, ಚೆನ್ನಂಜಪ್ಪ ಪ್ರತಿಭಟನೆಯಲ್ಲಿದ್ದರು.

‘ರಾಜ್ಯ ಘಟಕದ ಸೂಚನೆ ಮೇರೆಗೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣ ಪ್ರಸಾದ್‌ ಅವರು, ‘ಪಕ್ಷದ ಪದಾಧಿಕಾರಿಗಳನ್ನು ಏಕಾಏಕಿ ಬದಲಾಯಿಸಲು ಆಗುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ವರದಿಯೊಂದನ್ನು ತಯಾರಿಸಿ ಅದನ್ನು ರಾಜ್ಯ ಮಟ್ಟದ ಸಮಿತಿಯ ಮುಂದಿಟ್ಟು, ಅವರು ಸೂಚನೆ ನೀಡಿದ ಬಳಿಕಷ್ಟೇ ಬದಲಾಯಿಸಲು ಸಾಧ್ಯ’ ಎಂದು ಹೇಳಿದರು. 

‘ರಾಜ್ಯ ಘಟಕದ ಸೂಚನೆ ಮೇರೆಗೆ ಪ್ರಶಾಂತ್ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ. ಪಕ್ಷದಲ್ಲಿ ನಡೆದಿರುವ ಚರ್ಚೆಯ ಬಗ್ಗೆ ಎಲ್ಲ ಕಾರ್ಯಕರ್ತರಿಗೆ ತಿಳಿಯುವ ಸಾಧ್ಯತೆ ಕಡಿಮೆ. ಮೊನ್ನೆಯೂ ಹಲವರು ಕರೆ ಮಾಡಿ ವಿಚಾರಿಸಿದ್ದರು. ಅವರಿಗೆ ವಿವರಣೆ ನೀಡಿ ಮನವರಿಕೆ ಮಾಡಲಾಗಿದೆ. ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು