ಮಂಗಳವಾರ, ಫೆಬ್ರವರಿ 25, 2020
19 °C
ಯಡಿಯೂರಪ್ಪ ಗುಣಗಾನ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ರಾಜ್ಯ ಉಳಿಸಲು ಶಾಸಕರ ರಾಜೀನಾಮೆ: ನಳೀನ್‌ ಕುಮಾರ್‌ ಕಟೀಲ್‌ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕರ್ನಾಟಕವನ್ನು ಉಳಿಸಲು ಮತ್ತು ಅಭಿವೃದ್ಧಿ ಮಾಡುವುದಕ್ಕಾಗಿ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಂತೆ ಮಾಡಿದರು’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಗುರುವಾರ ಪ್ರತಿಪಾದಿಸಿದರು.

ಬಿಜೆಪಿ ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ಜಿಲ್ಲಾ ವಿಶೇಷ ಸಭೆಯಲ್ಲಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗುಣಗಾನ ಮಾಡಿದರು. 

‘ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುತ್ತಲೇ ರಾಜ್ಯದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಯಿತು. ಒಬ್ಬರೇ ನೆರೆ ಪೀಡಿತ ಪ್ರದೇಶಗಲ್ಲಿ ಓಡಾಡಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದರು’ ಎಂದರು. 

‘ಮನೆ ಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಸಲು ₹5 ಲಕ್ಷ ಪರಿಹಾರ ಘೋಷಿಸಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ತಕ್ಷಣವೇ ₹5 ಸಾವಿರದ ಪರಿಹಾರ ಘೋಷಿಸಿದ್ದಾರೆ. ಇಡೀ ರಾಜ್ಯದ ಜನರು ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಟ್ಟಿದೆ’ ಎಂದು ಕಟೀಲ್‌ ಹೇಳಿದರು.

ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆ: ‘ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಕೆ.ಎಸ್‌.ಈಶ್ವರಪ್ಪ, ಪ್ರಹ್ಲಾದ ಜೋಶಿ ಅವರಂತಹ ಹಿರಿಯರು ನನ್ನ ಬೆನ್ನಿಗೆ ನಿಂತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ’ ಎಂದು ಅವರು ಹೇಳಿದರು. 

‘ದೊಡ್ಡ ದೊಡ್ಡ ನಾಯಕರು ಅಲಂಕರಿಸಿರುವ ಅಧ್ಯಕ್ಷ ಸ್ಥಾನಕ್ಕೆ ನನ್ನಂತಹ ಕಿರಿಯನನ್ನು ಆಯ್ಕೆ ಮಾಡಿದಾಗ ಭಯವಾಗಿತ್ತು. ಅದರೆ ಹಿರಿಯ ನಾಯಕರೆಲ್ಲ, ‘ನಿಮ್ಮ ಹಿಂದೆ ನಾವಿದ್ದೇವೆ. ಧೈರ್ಯವಾಗಿ ಕೆಲಸಮಾಡಿ’ ಎಂದು ಪ್ರೋತ್ಸಾಹ ನೀಡಿದರು’ ಎಂದರು. 

‘ಹಿರಿಯರ ಸಲಹೆ, ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನಗಳು ಬರುವುದು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಅವರು ಪ್ರಸ್ತಾಪಿಸಿದರು. 

‘ಸ್ವಾಮಿ ವಿವೇಕಾನಂದ ಅವರ ಆಶಯದಂತೆ ಭಾರತವನ್ನು ‘ವಿಶ್ವಗುರು’ ಮಾಡುವುದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಮತ್ತು ಎಲ್ಲರನ್ನು ಒಟ್ಟು ಸೇರಿಸಿ ದೇಶವನ್ನು ಪ್ರಗತಿಯತ್ತ ಮುನ್ನಡೆಸುವುದು.. ಈ ಮೂರು ಗುರಿಗಳನ್ನು ಇಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಿತ್ತು. ಅದೇ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು. 

ಸಂಸದ ಶ್ರೀನಿವಾಸ ಪ್ರಸಾದ್ ಮಾತನಾಡಿ, ‘ಈ ಬಾರಿ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಭಾವಿಸಿರಲಿಲ್ಲ. ಕಾಂಗ್ರೆಸ್‌ನಿಂದ 3.4 ಲಕ್ಷ ಹೆಚ್ಚು ಮತಗಳನ್ನು ಪಡೆಯಬೇಕಿತ್ತು. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಚುನಾವಣಾ ರಾಜಕೀಯ ಸಾಕು ಎಂದು ಹೇಳಿದ್ದೆ. ಮುಖಂಡರು, ಕಾರ್ಯಕರ್ತರು ಎಲ್ಲರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿದ್ದೆ’ ಎಂದು ಹೇಳಿದರು. 

ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೇ ಮಾತು ಮುಂದುವರಿಸಿದ ಅವರು, ‘ದುರಂಹಕಾರದಿಂದ ವರ್ತಿಸುತ್ತಿದ್ದ ವ್ಯಕ್ತಿಗೆ ಪಾಠ ಕಲಿಸುವುದಕ್ಕಾಗಿ, ಚುನಾವಣೆಯಲ್ಲಿ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ’ ಎಂದರು. 

‘ಸಿದ್ದರಾಮಯ್ಯ ಅವರು ಸೋಲಿನ ಹತಾಶೆಯಿಂದ ಮೈಸೂರಿನಿಂದ ಬಾದಾಮಿಗೆ ಪಲಾಯನ ಮಾಡಿದ್ದ‌ರು. ‘ನಾನೇ ಮುಖ್ಯಮಂತ್ರಿ’ ಅಂತ ಹೇಳುತ್ತಾ ಬಾದಾಮಿಯಲ್ಲಿ ಸ್ಪರ್ಧಿಸಿ, ಕಡಿಮೆ ಅಂತರದಿಂದ ಗೆದ್ದಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ’ ಎಂದರು. 

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ರಾಜ್ಯ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಗುರುಸ್ವಾಮಿ, ಜಿ.ಎನ್‌.ನಂಜುಂಡಸ್ವಾಮಿ, ಫಣೀಶ್‌, ಪರಿಮಳಾ ನಾಗಪ್ಪ ಇದ್ದರು. 

ಕಾಡಿ ಬೇಡಿ ಪಡೆದ ಸ್ಥಾನ: ಕಟೀಲ್‌ ವ್ಯಂಗ್ಯ

ಕೊಳ್ಳೇಗಾಲ: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್‌ ಕುಮಾರ್‌ ಕಟೀಲ್‌ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ವಿರೋಧ ಪಕ್ಷಕ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ನಿರ್ಲಕ್ಷ ಮಾಡಿದೆ. ಅವರು ವರಿಷ್ಠರ ಕೈ ಕಾಲುಗಳನ್ನು ಹಿಡಿದು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಮಾತಿಗೆ ಪಕ್ಷದಲ್ಲಿ ಯಾರು ಕೂಡ ಬೆಲೆ ಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದನ್ನು ಬಿಡಬೇಕು’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನೂ ಮೂರುವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಯಾರು ಕೂಡ ಆತಂಕ ಪಡಬೇಕಾಗಿಲ್ಲ. ಮುಂದಿನ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಬರುತ್ತದೆ. ಜನರ ಆರ್ಶೀವಾದ ಈ ಸರ್ಕಾರದ ಮೇಲಿದೆ. ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಇಲ್ಲಸಲ್ಲದ ಆರೋಪಗಳಿಗೆ ಯಾರೂ ಕಿಡಿಗೊಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು