ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಶ್ರೀನಿವಾಸ‍ಪ್ರಸಾದ್‌ ಕುಟುಂಬಕ್ಕೆ ಟಿಕೆಟ್‌ ಸಲ್ಲದು- ಪಾಪು

Published 20 ಫೆಬ್ರುವರಿ 2024, 2:53 IST
Last Updated 20 ಫೆಬ್ರುವರಿ 2024, 2:53 IST
ಅಕ್ಷರ ಗಾತ್ರ

ಚಾಮರಾಜನಗರ: ‘ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಪಕ್ಷವು ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್‌ ನೀಡಬೇಕು. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಮೇಲೆ ಕ್ಷೇತ್ರದ ಜನರಿಗೆ ಇರುವ ಗೌರವ ಉಳಿಯಬೇಕು ಎಂದರೆ, ಅವರು ತಮ್ಮ ಕುಟುಂಬದವರಿಗೆ ಟಿಕೆಟ್‌ ಕೊಡಬೇಕು ಎಂದು ಹೇಳಬಾರದು’ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಮುಖಂಡ ವೆಂಕಟರಮಣಸ್ವಾಮಿ (ಪಾಪು) ಸೋಮವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘40 ವರ್ಷಗಳಿಂದ ಜನಪರ ಹೋರಾಟದಲ್ಲಿ ತೊಡಗಿಕೊಂಡಿದ್ದೇನೆ. 2008ರಲ್ಲಿ ಬೆಂಕಿ ಮಹದೇವಪ್ಪ ಅವರೊಂದಿಗೆ ಬಿಜೆಪಿಗೆ ಬಂದಿದ್ದೆ. ಅಂದಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಪ್ರತಿ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ, ನನಗೆ ಈ ಬಾರಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು’ ಎಂದರು. 

‘44 ವರ್ಷಗಳಿಂದ ಟಿಕೆಟ್‌ ವಿಚಾರದಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದೆ. ಕ್ಷೇತ್ರದಿಂದ ಹೊರಗಡೆ ಇರುವವರೇ ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯೂ ಹೊರಗಡೆಯವರೇ ಟಿಕೆಟ್‌ ಆಕಾಂಕ್ಷಿಗಳು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದರು. 

‘ಒಕ್ಕೂಟ ವ್ಯವಸ್ಥೆಯಲ್ಲಿ ಯಾರು, ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಬಹುದು ಎಂಬುದು ಗೊತ್ತಿದೆ. ಇದು ಮೀಸಲು ಲೋಕಸಭಾ ಕ್ಷೇತ್ರ. ಸ್ಥಳೀಯರಿಗೆ ಟಿಕೆಟ್‌ ಕೊಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಸಂಸದರಾಗಿರುವವರಿಗೂ ಕೆಲಸ ಮಾಡಬೇಕು ಎಂಬ ಒತ್ತಡ ಇರುತ್ತದೆ. ಧ್ರುವನಾರಾಯಣ ಅವರು ಉತ್ತಮ ಕೆಲಸ ಮಾಡಿದ್ದರು. ಕಾಗಲವಾಡಿ ಶಿವಣ್ಣ ಅವರು ಸಂಸತ್ತಿನಲ್ಲಿ ಕನ್ನಡದಲ್ಲೆ ಮಾತನಾಡಿ ಗಮನ ಸೆಳೆದಿದ್ದರು’ ಎಂದರು. 

‘ಬಿಜೆಪಿಯಲ್ಲಿ ನಾನಲ್ಲದೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಸಚಿವ ಕೋಟೆ ಶಿವಣ್ಣ, ಮಾಜಿ ಶಾಸಕ ಎಸ್‌.ಬಾಲರಾಜ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮುಖಂಡ ಲಕ್ಷ್ಮಣ್ ಅವರು ಇದ್ದಾರೆ. ಎಲ್ಲರೂ ಹೋರಾಟದಿಂದ ಮೇಲೆ ಬಂದವರು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ವರಿಷ್ಠರು ಸ್ಥಳೀಯರನ್ನೇ ಪರಿಗಣಿಸಬೇಕು’ ಎಂದು ಪಾಪು ಒತ್ತಾಯಿಸಿದರು.   

‘ಸಂಸದರ ಇಬ್ಬರು ಅಳಿಯಂದಿರು ನಮ್ಮ ಕ್ಷೇತ್ರದವರಲ್ಲ. ಶ್ರೀನಿವಾಸ ಪ್ರಸಾದ್‌ ಅವರು ಈವರೆಗೂ ಟಿಕೆಟ್‌ ಯಾರಿಗೆ ನೀಡಬೇಕು ಎಂದು ಹೇಳಿಲ್ಲ. ‘ಕುಟುಂಬದವರಿಗೆ ನೀಡಬೇಕು ಎಂದು ನಾನು ಹೇಳುವುದಿಲ್ಲ’ ಎಂದು ಅವರು ಈ ಹಿಂದೆ ಹೇಳಿದ್ದಾರೆ. ಕ್ಷೇತ್ರದ ಜನರಿಗೆ ಅವರ ಮೇಲೆ ಅಪಾರ ಗೌರವ ಇದೆ. ಅದು ಉಳಿಯಬೇಕು ಎಂದಿದ್ದರೆ ಅವರು ತಮ್ಮ ಕುಟುಂಬದವರಿಗೆ ಟಿಕೆಟ್‌ ಕೊಡಬೇಕು ಎಂದು ಹೇಳಬಾರದು’ ಎಂದರು. 

‘ಸಂಸದರ ಪರವಾಗಿ 44 ವರ್ಷಗಳಿಂದ ನಾನು ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲೂ ಅವರಿಗೆ ಟಿಕೆಟ್‌ ನೀಡಬೇಕು ಎಂದು ಮೊದಲು ಒತ್ತಾಯಿಸಿದವನು ನಾನು. ಅವರ ಕಷ್ಟಕಾಲದಲ್ಲೆಲ್ಲ ಬೆನ್ನಿಗೆ ನಿಂತಿದ್ದೇನೆ. ವಾಸ್ತವವಾಗಿ ಅವರು ನನಗೆ ಬೆಂಬಲ ನೀಡಬೇಕು’ ಎಂದು ಪಾಪು ಹೇಳಿದರು. 

ಮುಖಂಡರಾದ ಬಸವನಪುರ ರಾಜಶೇಖರ್, ಅಸ್ಲಾಂ ಷರೀಫ್, ಜಿ.ಎಂ.ಶಂಕರ್, ಲಿಂಗರಾಜು, ಪರಶಿವಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಇದ್ದರು.

‘ಬಿಜೆಪಿಗೆ ಗೆಲುವಿನ ಸಾಧ್ಯತೆ’

‘ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ನಮಗೆ ಗೆಲ್ಲುವ ವಾತಾವರಣ ಇದೆ. ಮೋದಿ ಅಲೆ ಕ್ಷೇತ್ರದಾದ್ಯಂತ ಇದೆ. ಇದರ ಜೊತೆಗೆ ರಾಜ್ಯದ ಜನರು ಗ್ಯಾರಂಟಿ ಯೋಜನೆಗಳಿಂದ ಬೇಸತ್ತಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ. ಏಳು ಮಂದಿ ಶಾಸಕರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದರೊಂದಿಗೆ ಜೆಡಿಎಸ್‌ ಜೊತೆಗಿನ ಮೈತ್ರಿ ಕೂಡ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ಪಾಪು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT