ಬುಧವಾರ, ಆಗಸ್ಟ್ 10, 2022
25 °C
ಚಾಮರಾಜನಗರ: ಬಿಜೆಪಿ ಬೆಂಬಲಿತ ಮನೋಜ್‌ ಪಟೇಲ್‌ ಅಧ್ಯಕ್ಷ, ಕಲಾವತಿ ಉಪಾಧ್ಯಕ್ಷೆ

ಎಪಿಎಂಸಿ ಗದ್ದುಗೆ ಹಿಡಿದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇತ್ತೀಚೆಗೆ ಜಿಲ್ಲಾ ಹಾಲು ‌ಒಕ್ಕೂಟದ (ಚಾಮುಲ್‌) ಆಡಳಿತದ ಚುಕ್ಕಾಣಿ ಹಿಡಿದು ಬೀಗಿದ್ದ ಬಿಜೆಪಿಯು, ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ. 

ಎಪಿಎಂಸಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮನೋಜ್‌ ಪಟೇಲ್‌ ಹಾಗೂ ಕಲಾವತಿ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

16 ಸದಸ್ಯರನ್ನು ಹೊಂದಿರುವ ಎಪಿಎಂಸಿಯಲ್ಲಿ ಮನೋಜ್‌ ಪಟೇಲ್‌ ಹಾಗೂ ಕಲಾವತಿ ಅವರು ತಲಾ ಒಂಬತ್ತು ಮತಗಳನ್ನು ಪಡೆದರೆ, ಕಾಂಗ್ರೆಸ್‌ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್‌.ಎನ್‌.ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಮಚಂದ್ರ ಅವರು ತಲಾ ಏಳು ಮತಗಳನ್ನು ಪಡೆದು ಸೋಲು ಅನುಭವಿಸಿದರು. 

ಬಿಜೆಪಿ ಬೆಂಬಲಿಸಿದ ವೆಂಕಟರಾವ್‌: ಎಪಿಎಂಸಿಯ 12 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರು ಏಳು ಮಂದಿ ಹಾಗೂ ಬಿಜೆಪಿ ಬೆಂಬಲಿತರು ನಾಲ್ವರು, ಪಕ್ಷೇತರ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದರು. ಸರ್ಕಾರ ನಾಮನಿರ್ದೇಶನ ಮಾಡಿದ ಮೂವರು ಸದಸ್ಯರು ಇದ್ದಾರೆ. ತೆಂಗು ಬೆಳೆಗಾರರ ಸಂಸ್ಕರಣಾ ಸಂಘದ ಪ್ರತಿನಿಧಿಯೊಬ್ಬರೂ ಎಪಿಎಂಸಿ ಸದಸ್ಯರಾಗಿರುತ್ತಾರೆ.

ಎಲ್ಲರನ್ನೂ ಸೇರಿಸಿದರೆ ಎಪಿಎಂಸಿ ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆ 16 ಆಗುತ್ತದೆ. ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಏರಲು ಒಂಬತ್ತು ಸದಸ್ಯರ ಬೆಂಬಲ ಬೇಕು. ಕಾಂಗ್ರೆಸ್‌ ಬಳಿ ಏಳು ಸದಸ್ಯರು ಮಾತ್ರವಿದ್ದರೆ, ಬಿಜೆಪಿ ಬೆಂಬಲಿತ ಎಂಟು ಸದಸ್ಯರಿದ್ದರು. ಹಾಗಾಗಿ, ಚಾಮರಾಜನಗರ ವರ್ತಕರ ಕ್ಷೇತ್ರದಿಂದ ಸ್ವತಂತ್ರವಾಗಿ ಆಯ್ಕೆಯಾಗಿದ್ದ ವೆಂಕಟರಾವ್‌ ಅವರು ನಿರ್ಣಾಯಕರಾಗಿದ್ದರು. 

ವೆಂಕಟರಾವ್‌ ಅವರು ‌ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರಿಂದ ಮನೋಜ್‌ ಪಟೇಲ್‌ ಹಾಗೂ ಕಲಾವತಿ ಅವರ ಗೆಲುವು ಸುಲಭವಾಯಿತು.

ರಹಸ್ಯ ಮತದಾನದಲ್ಲಿ ನಿರ್ದೇಶಕರಾದ ಮಹದೇವಪ್ರಸಾದ್, ರವಿಕುಮಾರ್, ವೆಂಕಟರಾವ್, ನಾಮನಿರ್ದೇಶನ ಸದಸ್ಯರಾದ ಮಹೇಶ್, ಕೆಂಗಾಕಿ ಪ್ರೇಮ, ಶಿವಕುಮಾರ್, ತೆಂಗು ಬೆಳೆಗಾರರ ಸಂಘದ ಸದಸ್ಯ ನಿಂಗಪ್ಪ, ಜಿ.ಎಂ.ರವಿಶಂಕರಮೂರ್ತಿ, ಮಹೇಶ್, ಎಂ.ಬಿ.ಗುರುಸ್ವಾಮಿ, ಎ.ಎಸ್‌.ಪ್ರದೀಪ್, ಪ್ರೇಮ ಭಾಗವಹಿಸಿದ್ದರು.‌ ತಹಶೀಲ್ದಾರ್ ಬಸವರಾಜು ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಸಂಭ್ರಮಾಚರಣೆ: ಮನೋಜ್‌ ಪಟೇಲ್‌ ಹಾಗೂ ಕಲಾವತಿ ಅವರ ಗೆಲುವು ಖಚಿತವಾಗುತ್ತಲೇ, ಎಪಿಎಂಸಿ ಆವರಣದಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿದರು. ಶಾಸಕ ಎನ್‌.ಮಹೇಶ್‌, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಮುಖಂಡ ಎನ್‌.ನಂಜುಂಡಸ್ವಾಮಿ, ಅಮ್ಮನಪುರ ಮಲ್ಲೇಶ್‌, ನಿಜಗುಣರಾಜು, ಡಾ.ಎ.ಆರ್‌.ಬಾಬು, ಕೆಲ್ಲಂಬಳ್ಳಿ ಸೋಮನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌  ಇತರರು ಮನೋಜ್‌ ಹಾಗೂ ಕಲಾವತಿ ಅವರಿಗೆ ಹಾರ ಹಾಕಿ ಅಭಿನಂದಿಸಿದರು. 

ಮಾವನ ವಿರುದ್ಧ ಗೆದ್ದ ಅಳಿಯ: ಮನೋಜ್‌ ಪಟೇಲ್‌ ಹಾಗೂ ಕಾಂಗ್ರೆಸ್‌ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಚ್‌.ಎನ್‌.ಮಹದೇವಪ್ರಸಾದ್‌ ಅವರು ನೆಂಟರು. ಸಂಬಂಧದಲ್ಲಿ ಇಬ್ಬರು ಸೋದರ ಮಾವ, ಸೋದರ ಅಳಿಯ ಆಗುತ್ತಾರೆ.  ಚುನಾವಣೆಯಲ್ಲಿ ಮಾವನ ವಿರುದ್ಧ ಅಳಿಯ ಗೆದ್ದಿದ್ದಾರೆ. 

‘ಶೈತ್ಯಾಗಾರ ನಿರ್ಮಾಣಕ್ಕೆ ಒತ್ತು’

ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮನೋಜ್‌ ಪಟೇಲ್‌ ಅವರು, ‘ಅಧ್ಯಕ್ಷನಾಗಿ ಎಪಿಎಂಸಿಯ ಅಭಿವೃದ್ಧಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಲು ಪ‍್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ರೈತರ ಬೆಳೆ ಉತ್ಪನ್ನಗಳನ್ನು ಹೆಚ್ಚು ದಿನಗಳ ಕಾಲ ಕೆಡದಂತೆ ಇಡಲು, ಶೈತ್ಯಾಗಾರ ನಿರ್ಮಿಸುವ ಗುರಿ ಇದೆ. ಎಪಿಎಂಸಿ ಆವರಣದಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗುವುದು. ರೈತರ ಹಾಗೂ ವರ್ತಕರ ನಡುವೆ ಸೇತುವೆಯಾಗಿ ಕೆಲಸ ಮಾಡುವೆ’ ಎಂದು ಹೇಳಿದರು. 

––

ಜಿಲ್ಲೆಯ ಪಕ್ಷದ ಮುಖಂಡರು, ಸಚಿವ ಸೋಮಣ್ಣ, ಪಕ್ಷದ ಕಾರ್ಯಕರ್ತರ ಬೆಂಬಲ ಹಾಗೂ ಸಹಕಾರದಿಂದ ಗೆಲುವು ಸಿಕ್ಕಿದೆ. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ
ಮನೋಜ್‌ ಪಟೇಲ್‌, ಎಪಿಎಂಸಿ ನೂತನ ಅಧ್ಯಕ್ಷ

––

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಬಿಜೆಪಿ ಮುಖಂಡರು ಬೆಂಬಲಿಸುವಂತೆ ಕೇಳಿದ್ದರು. ಸಚಿವರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ
ವೆಂಕಟರಾವ್‌, ವರ್ತಕರ ಕ್ಷೇತ್ರದ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು