ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತೆಕ್ಕೆಗೆ ಚಾಮರಾಜನಗರ ನಗರಸಭೆ

ನಿರೀಕ್ಷೆಯಂತೆ ಆಶಾ ಅಧ್ಯಕ್ಷೆ, ಸುಧಾ ಉಪಾಧ್ಯಕ್ಷೆ, ಮತದಾನಕ್ಕೆ ಗೈರಾದ ಶಾಸಕ ಸಿ.ಪುಟ್ಟರಂಗಶೆಟ್ಟಿ
Last Updated 2 ನವೆಂಬರ್ 2020, 13:40 IST
ಅಕ್ಷರ ಗಾತ್ರ

ಚಾಮರಾಜನಗರ: ನಿರೀಕ್ಷೆಯಂತೆ ಇಲ್ಲಿನ ನಗರಸಭೆಯ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿದೆ.

ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ 7ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಸಿ.ಎಂ.ಆಶಾ ಅವರು ಅಧ್ಯಕ್ಷೆಯಾಗಿ ಹಾಗೂ 29ನೇ ವಾರ್ಡ್‌ನ ಪಿ.ಸುಧಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾ‌ಗಿದ್ದಾರೆ.

31 ಸದಸ್ಯ ಬಲದ ನಗರಸಭೆಗೆ ಎರಡು ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ 15, ಕಾಂಗ್ರೆಸ್‌ನ ಎಂಟು, ಎಸ್‌ಡಿಪಿಐನ ಆರು, ಬಿಎಸ್‌ಪಿಯ ಒಬ್ಬರು ಹಾಗೂ ಒಬ್ಬ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಮೀಸಲಾತಿ ಪಟ್ಟಿ ವಿಚಾರ ಹೈಕೋರ್ಟ್‌ನಲ್ಲಿ ಇದ್ದುದರಿಂದ ಎರಡು ವರ್ಷಗಳಿಂದ ಸದಸ್ಯರಿಗೆ ಅಧಿಕಾರ ಇರಲಿಲ್ಲ.

ರಾಜ್ಯ ಸರ್ಕಾರ ಇತ್ತೀಚೆಗೆ ಮೀಸಲಾತಿ ಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿತ್ತು. ಅದರ ಪ್ರಕಾರ, ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾಗಿದೆ.

ತಲಾ ಇಬ್ಬರು ಅಭ್ಯರ್ಥಿಗಳು: ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಡಾ.ಗಿರೀಶ್‌ ದಿಲೀಪ್‌ ಬದೋಲೆ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸಿ.ಎಂ.ಆಶಾ ಹಾಗೂ ಕಾಂಗ್ರೆಸ್‌ನಿಂದ18ನೇ ವಾರ್ಡ್‌ ಸದಸ್ಯೆ ಎನ್‌.ಶಾಂತಿ ಅವರು ಸ್ಪರ್ಧಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಪಿ.ಸುಧಾ ಹಾಗೂ ಕಾಂಗ್ರೆಸ್‌ನಿಂದ 16ನೇ ವಾರ್ಡ್‌ನ ಚಂದ್ರಕಲಾ ಬಿ.ಎಸ್‌. ಅವರು ಕಣಕ್ಕಿಳಿದಿದ್ದರು.

ಸಿ.ಎಂ.ಆಶಾ ಹಾಗೂ ಸುಧಾ ಅವರಿಗೆ ತಲಾ 17 ಮತಗಳು ಬಂದರೆ, ಶಾಂತಿ ಹಾಗೂ ಚಂದ್ರಕಲಾ ಅವರಿಗೆ ತಲಾ 14 ಮತಗಳು ಬಿದ್ದವು. ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಮೂರು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

ಸಂಸದ ಹಾಜರ್‌, ಶಾಸಕ ಗೈರು: ನಗರಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು 17 ಮತಗಳ ಅಗತ್ಯವಿತ್ತು. ಬಿಜೆಪಿ 15 ಸದಸ್ಯರನ್ನು ಹೊಂದಿದ್ದು, ಇನ್ನೆರಡು ಮತಗಳ ಅಗತ್ಯವಿತ್ತು. 27ನೇ ವಾರ್ಡ್‌ನ ಬಿಎಸ್‌ಪಿ ಸದಸ್ಯ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಸಂಸದ ಹಾಗೂ ಶಾಸಕರಿಗೂ ಮತದಾನದ ಹಕ್ಕು ಇತ್ತು. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಇದರಿಂದಾಗಿ ಇಬ್ಬರೂ 17 ಮತಗಳನ್ನು ಪಡೆದು ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರು.

ಕಾಂಗ್ರೆಸ್‌ನ ಎಂಟು ಸದಸ್ಯರು ಹಾಗೂ ಎಸ್‌ಡಿಪಿಐನ ಆರು ಸದಸ್ಯರು ಸೇರಿದಂತೆ ಒಟ್ಟು 14 ಮತಗಳು ಇಬ್ಬರಿಗೆ ಬಿದ್ದವು.ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೂ ಮತದಾನದ ಹಕ್ಕು ಇತ್ತು. ಆದರೆ ಅವರು ಬಂದಿರಲಿಲ್ಲ. ಇದರಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಒಂದು ಮತ ಕಡಿಮೆಯಾಯಿತು.17ನೇ ವಾರ್ಡ್‌ನ ಪಕ್ಷೇತರ ಸದಸ್ಯ ಸಿ.ಎಂ.ಬಸವಣ್ಣ ಅವರು ಚುನಾವಣೆಗೆ ಗೈರಾಗಿದ್ದರು.

ಸೋಲು ಖಚಿತ ಎಂಬ ಕಾರಣದಿಂದ ಶಾಸಕರು ಮತದಾನಕ್ಕೆ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ.

ವಿಜಯೋತ್ಸವ: ಬಿಜೆಪಿಯ ಇಬ್ಬರು ಸದಸ್ಯರು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಶಾಸಕ ಸಿ.ಎಸ್‌.ನಿರಂಜನ ಕುಮಾರ್‌, ಮುಖಂಡ ಎಂ.ರಾಮಚಂದ್ರ ಸೇರಿದಂತೆ ಪಕ್ಷದ ಮುಖಂಡರು ನೂತನ ವಿಜೇತರನ್ನು ಅಭಿನಂದಿಸಿದರು.

ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್‌‍ಪಿ ಸದದ್ಯ ಪ್ರಕಾಶ್‌ ಅವರನ್ನು ಕೂಡ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಭಿನಂದಿಸಿದರು.

ಕಾರ್ಯಕರ್ತರೊಂದಿಗೆ ಚಾಮರಾಜೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದ ಆಶಾ ಹಾಗೂ ಸುಧಾ ಅವರು ದೇವರಿಗೆ ನಮಿಸಿದರು. ನಂತರ ಅಲ್ಲಿಂದ ಮಾರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ನಗರದ ಅಭಿವೃದ್ಧಿಗೆ ಶ್ರಮಿಸಲಿ: ಶ್ರೀನಿವಾಸ ಪ್ರಸಾದ್‌

ಚುನಾವಣಾ ಪ್ರಕ್ರಿಯೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು, ‘ನಗರಸಭೆ ಚುನಾವಣೆ ನಡೆದು ಎರಡು ವರ್ಷಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಿದೆ. ಬಿಜೆಪಿಯ ಆಶಾ ಹಾಗೂ ಸುಧಾ ಅವರು 17 ಮತಗಳನ್ನು ಪಡೆದು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಸಹಕಾರ ಪಡೆದು ಚಾಮರಾಜನಗರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು’ ಎಂದರು.

‘ಶಾಸಕರು ಚುನಾವಣೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಅವರು ಬಂದಿಲ್ಲ. ನಾನು ಮತದಾನ ಮಾಡಿದ್ದೇನೆ. ನನಗೂ ಜವಾಬ್ದಾರಿ ಇದೆ. ಗಡಿ ಭಾಗದಲ್ಲಿರುವ ನಮ್ಮ ಜಿಲ್ಲೆ ಅಭಿವೃದ್ಧಿಯಾಗಬೇಕಿದೆ. ಪಕ್ಷಭೇದ ಮರೆತು ಎಲ್ಲ 31 ಸದಸ್ಯರು ಒಟ್ಟಾಗಿ ಉತ್ತಮ ಆಡಳಿತ ನೀಡಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT