ಗುರುವಾರ , ಜೂನ್ 30, 2022
27 °C

ಬಿಆರ್‌ಟಿ: ಮತ್ತೆ ಕಂಡು ಬಂದ ಕಪ್ಪು ಚಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಿ ಚಿರತೆ ಮತ್ತೆ ಕಂಡು ಬಂದಿದೆ. 

ಈ ಹಿಂದೆ 2010ರ ಆಗಸ್ಟ್‌ನಲ್ಲಿ ಬಿಆರ್‌ಟಿಯ ಬೈಲೂರು ವಲಯದಲ್ಲಿ ಕಪ್ಪು ಚಿರತೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದಲ್ಲೂ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕರಿ ಚಿರತೆ ಕಂಡು ಬಂದಿತ್ತು. 

ಈಗ ಹೊಳೆಮತ್ತಿ ನೇಚರ್ ಫೌಂಡೇಶನ್‌ ಡಾ.ಸಂಜಯ್ ಗುಬ್ಬಿ ಮತ್ತು ತಂಡದವರು ಬಿಳಿಗಿರಿರಂಗನಬೆಟ್ಟದಲ್ಲಿ ಚಿರತೆಗಳಿಗೆ ಸಂಬಂಧಿತ ಅಧ್ಯಯನಕ್ಕಾಗಿ ನಡೆಸಿದ್ದ ಕ್ಯಾಮರಾ ಟ್ರ್ಯಾಪ್‌ನಲ್ಲಿ ಮತ್ತೆ ಗೋಚರಿಸಿದೆ. ಡಿಸೆಂಬರ್ 2020ರಲ್ಲಿ ಇದೇ ಗಂಡು ಚಿರತೆ ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು. ಈ ಗಂಡು ಚಿರತೆಗೆ ಆರು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕಾರಿಡಾರ್‌ ಸಂರಕ್ಷಣೆ ಅಗತ್ಯ: ‘ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್‌ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್‌ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ಕಾರಿಡಾರ್‌ನ ಸಂರಕ್ಷಿಸುವ ಅಗತ್ಯವಿದೆ. ಈ ಕಿರಿದಾದ ಕಾರಿಡಾರ್‌ ಮೂಲಕ ಕೊಳ್ಳೇಗಾಲ-ಹಾಸನೂರು ರಸ್ತೆ (ರಾಜ್ಯ ಹೆದ್ದಾರಿ-38) ಹಾದು ಹೋಗುತ್ತದೆ ಮತ್ತು ‌ತಸ್ತೆಯಲ್ಲಿನ ವಾಹನ ದಟ್ಟಣೆ ವನ್ಯಜೀವಿಗಳ ಓಡಾಟಕ್ಕೆ ಅಡ್ಡಿಯಾಗಿದೆ’ ಎಂದು ಹೊಳೆಮತ್ತಿ ನೇಚರ್‌ ಫೌಂಡೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು