ಮಂಗಳವಾರ, ಮೇ 17, 2022
24 °C
ಸಂವಿಧಾನ ಶಿಲ್ಪಿಯ 131ನೇ ವರ್ಷದ ಜನ್ಮದಿನಾಚರಣೆ ಅದ್ದೂರಿ

ಚಾಮರಾಜನಗರ: ‘ಜಗತ್ತಿನ ಜ್ಞಾನದ ಸಂಕೇತ ಅಂಬೇಡ್ಕರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದೇ ಇರಬಹುದು. ಆದರೆ, ಸಂವಿಧಾನದ ಮೂಲಕ ನಮ್ಮೊಂದಿಗೆ ಜೀವಂತವಾಗಿದ್ದಾರೆ’ ಎಂದು ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನ ಪ್ರಾಧ್ಯಾಪ‍ಕ ಪ್ರೊ.ಹ.ರಾ.ಮಹೇಶ್‌ ಅವರು ಗುರುವಾರ ಅಭಿಪ್ರಾಯಪಟ್ಟರು. 

ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂ‌ಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಅವರ 131ನೇ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಅಂಬೇಡ್ಕರ್‌ ಅವರು ಜಗತ್ತಿನ ಜ್ಞಾನದ ಸಂಕೇತ. ಅವರ ಜನ್ಮದಿನವನ್ನು ಜಗತ್ತಿನಾದ್ಯಂತ 'ವಿಶ್ವ‌ ಜ್ಞಾನ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಜಗತ್ತಿನ 146 ದೇಶಗಳಲ್ಲಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಏಪ್ರಿಲ್ 14ರಿಂದ ಡಿಸೆಂಬರ್ 5ರ ಮಹಾ ಪರಿನಿರ್ವಾಣ ದಿನದವರೆಗೆ ಅವರ ಜನ್ಮ ದಿನ ಊರು ಊರು‌ ಹಳ್ಳಿಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತೀಯರಿಗೆ ಹೆಮ್ಮೆಯ ವಿಚಾರ' ಎಂದರು.

‘ಜಾತಿ, ಧರ್ಮ, ರಾಷ್ಟ್ರ ರಹಿತವಾಗಿ ಎಲ್ಲರೂ ಅವರನ್ನು ಸ್ಮರಣೆ ಮಾಡುತ್ತಾರೆ. ಇದಕ್ಕೆ ಅವರ ಜ್ಞಾನ, ವ್ಯಕ್ತಿತ್ವ ಹಾಗೂ ರಾಜಿಯಾಗದ ಹೋರಾಟ ಕಾರಣ. ಅಂಬೇಡ್ಕರ್ ಅವರು ದಿಢೀರ್ ಆಗಿ ಬೆಳೆದವರಲ್ಲ. ಅವರಲ್ಲಿ ಸಂತರ ಪ್ರಜ್ಞೆ ಇತ್ತು. ‘ನನಗೆ ಮೂವರು ಗುರು ಎಂದು ಬುದ್ಧ, ಸಂತ  ಕಬೀರ ಹಾಗೂ ಜ್ಯೋತಿ ಬಾ ಫುಲೆ ಅವರನ್ನು‌ ಹೆಸರಿಸಿದ್ದರು’ ಎಂದು ಹೇಳಿದರು.

‘ಮೊದಲು ಅಂಬೇಡ್ಕರ್ ಜಯಂತಿ ದಲಿತ ಕೇರಿಗಳಲ್ಲಿ ಮಾತ್ರ‌ ನಡೆಯುತ್ತಿತ್ತು. ನಮ್ಮ ಸಮಾಜದ ವ್ಯವಸ್ಥೆ ಅವರನ್ನು ದಲಿತರಿಗೆ ಮಾತ್ರ ಸೀಮಿತವಾಗಿತ್ತು. ಬರಹಗಾರರು ತಮ್ಮ ಬರವಣಿಗೆಗಳ ಮೂಲಕ ಈ ರೀತಿ ಮಾಡಿದ್ದರು. ಆದರೆ, ಅಂಬೇಡ್ಕರ್ ಅವರು ಈಗ ಜಾತಿಯನ್ನು ಮೀರಿ ಎಲ್ಲರ ಎದೆಯಲ್ಲಿದ್ದಾರೆ’ ಎಂದು ಮಹೇಶ್ ಅವರು ಹೇಳಿದರು.

‘ದೇಶದಲ್ಲಿ 1835ರಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಕಾರಣರಾದವರು ಅಸ್ಪೃಶ್ಯರು. ಭೀಮ ಕೋರೆಗಾಂವ್ ಗೆಲುವಿಗೆ ಕಾರಣರಾದ‌ ಮಹರ್ ಸೈನಿಕರು ಗೆಲುವಿನ ಉಡುಗೊರೆಯಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವಂತೆ ಕೇಳಿದ್ದರು. ಈ ಕಾರಣಕ್ಕೆ ಮೆಕಾಲೆ ಶಿಕ್ಷಣ ಪದ್ಧತಿ ಆರಂಭವಾಯಿತು. ಎಲ್ಲರಿಗೂ ಶಿಕ್ಷಣ ಸಿಗುವಂತಾಯಿತು’ ಎಂದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಮಾತನಾಡಿ, ‘ದೇಶಕ್ಕೆ ಸಂವಿಧಾನವನ್ನು‌ ನೀಡುವುದರ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿದಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಹೆಮ್ಮೆ’ ಎಂದರು.

‘ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಒತ್ತು ನೀಡಬೇಕು ಎಂಬುದು ಅಂಬೇಡ್ಕರ್ ಅವರ ಮಾತು. ಅವರ ಆದರ್ಶಗಳನ್ನು ಜಯಂತಿಯ ಮೂಲಕ ಮನೆ ಮನೆಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು’ ಎಂದರು.

ತಿ.ನರಸೀಪುರದ ನಳಂದ ಬುದ್ಧವಿಹಾರದ ಪೂಜ್ಯ ಬೋಧಿರತ್ನ ಬಂತೇಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿದರು.  

ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಮುಖಂಡರಾದ ಎ.ಆರ್.ಬಾಲರಾಜು, ಕೆರೆಹಳ್ಳಿ‌ ನವೀನ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿ.ಪಂ. ಸಿಇಒ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಇದ್ದರು.

‘ಜಾತಿ, ಸಮುದಾಯಕ್ಕೆ ಸೀಮಿತ ಬೇಡ’
‘ಮನುಕುಲಕ್ಕಾಗಿ‌‌ ಕೆಲಸ ಮಾಡಿದವರನ್ನು ನಾವು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಿ ಅವಮಾನಿಸಬಾರದು. ಬಸವಣ್ಣ ಅವರನ್ನು‌ ಲಿಂಗಾಯತ ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ರಾಷ್ಟ್ರಕವಿ ಕುವೆಂಪು ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ನಡೆಯುತ್ತಿದೆ. ಕನ್ನಡಿಗ, ದೇಶ‌ಭಕ್ತ ಟಿಪ್ಪು ಸುಲ್ತಾನ್ ಅವರನ್ನು ಒಂದು ಸಮುದಾಯಕ್ಕೆ, ಮದರ್ ಥೆರೆಸಾ ಅವರನ್ನು ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಮಹಾ‌ಮೋಸ. ಇದು ಅಂಬೇಡ್ಕರ್ ವಾದ ಅಲ್ಲ’ ಎಂದು ಹ.ರಾ.ಮಹೇಶ್ ಹೇಳಿದರು.

ಪುತ್ಥಳಿಗೆ ಹಾರ, ಅದ್ದೂರಿ ಮೆರವಣಿಗೆ
ಇದಕ್ಕೂ ಮೊದಲು, ಗುರುವಾರ ಬೆಳಿಗ್ಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಂಬೇಡ್ಕರ್‌ ಅವರ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹಾರ ಹಾಕುವುದರ ಮೂಲಕ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ವೇದಿಕೆ ಸಮಾರಂಭಕ್ಕೂ‌ ಮುನ್ನಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅದ್ದೂರಿ ‌ಮೆರವಣಿಗೆ ನಡೆಯಿತು. 

ಸತ್ಯ ಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಚಿವ ವಿ.ಸೋಮಣ್ಣ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ‌ ನೀಡಿದರು.

ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡೀವಿಯೇಷನ್ ರಸ್ತೆ ಭುವನೇಶ್ವರಿ ವೃತ್ತದ ಮೂಲಕ ಸಾಗಿ ಕಾರ್ಯಕ್ರಮ‌ ನಡೆದ ಪೇಟೆ ಪ್ರೈಮರಿ ಶಾಲೆ ಆವರಣ ತಲುಪಿದರು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.