ಶನಿವಾರ, ಜನವರಿ 28, 2023
21 °C
ಜಿಲ್ಲೆಯಾದ್ಯಂತ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 66ನೇ ಪರಿನಿರ್ವಾಣ ದಿನ ಆಚರಣೆ

ಚಾಮರಾಜನಗರ: ಸಂವಿಧಾನ ಶಿಲ್ಪಿಯ ಸ್ಮರಣೆ, ತತ್ವಾದರ್ಶಗಳ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 66ನೇ ಪರಿನಿರ್ವಾಣ ದಿನವನ್ನು ಜಿಲ್ಲೆಯಾದ್ಯಂತ ಮಂಗಳವಾರ ಆಚರಿಸಲಾಯಿತು. 

ಜಿಲ್ಲಾಡಳಿತ, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೊಂಬತ್ತಿ ಹಿಡಿದು ಗೌರವ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ ಅಂಬೇಡ್ಕರ್‌ ಸ್ಮರಣಾರ್ಥ ಮೊಂಬತ್ತಿ ಮೆರವಣಿಗೆಯೂ ನಡೆಯಿತು. 

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ಮುಖಂಡರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್‌  ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದರು. 

ನಂತರ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್‌, ‘ನಮ್ಮ ದೇಶಕ್ಕೆ ಅಂಬೇಡ್ಕರ್‌ ಕೊಡುಗೆ ಅಪಾರವಾಗಿದ್ದು, ಅವರ ಉದಾತ್ತ ಚಿಂತನೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. 

‘ಮಾನವ ಜನಾಂಗದ ಏಳಿಗೆಗಾಗಿ ತಮ್ಮ ಜೀವನವನ್ನು ಅವರು ಮುಡುಪಾಗಿಟ್ಟಿದ್ದರು. ಅವರ ಆದರ್ಶ ಚಿಂತನೆಗಳನ್ನು ಮರೆಯಬಾರದು. ದೇಶ ಸಮಾಜದ ಸುಧಾರಣೆ ಹಾಗೂ ಒಳ್ಳೆಯ ದಾರಿಯಲ್ಲಿ ನಡೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು. 

‘ಯಾರೂ ಬಲಹೀನರಾಗಬಾರದು. ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಶಕ್ತಿ ಇರುತ್ತದೆ. ನಮ್ಮಲ್ಲಿ ನಾವೇ ಶಕ್ತಿ ತುಂಬುವಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ಪ್ರತಿಪಾದಿಸಿದ ವಿಚಾರ ಆಲೋಚನೆ ಆದರ್ಶಗಳನ್ನು ಪಾಲಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರು ಶಪಥ ಮಾಡಬೇಕು’ ಎಂದರು.

‘ಅಂಬೇಡ್ಕರ್ ಅವರ ಮಹತ್ತರ ಧ್ಯೇಯೊದ್ದೇಶಗಳನ್ನು ಸ್ಮರಿಸಬೇಕು. ಶಾಂತಿ, ಆರೋಗ್ಯಯುತ ಸಮಾಜ ನಿರ್ಮಾಣದ ಗುರಿ ಹೊಂದಬೇಕು. ಅರ್ಥಪೂರ್ಣ ಬದುಕು ಹಾಗೂ ಸರಿಯಾದ ದಾರಿಯಲ್ಲಿ ಮುನ್ನಡೆಯಲು ಅಂಬೇಡ್ಕರ್ ಅವರ ಮಾದರಿ ಅನುಸರಿಸಬೇಕು’ ಎಂದು ರಮೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ಸಿ.ಎಂ.ನರಸಿಂಹಮೂರ್ತಿ, ಮಹೇಶ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಗೀತೆಗಳನ್ನು ಹಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಇದ್ದರು.

ಎಸ್‌ಪಿ ವಿರುದ್ಧ ಮುಖಂಡರ ಅಸಮಾಧಾನ

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವೇದಿಕೆ ಕಾರ್ಯಕ್ರಮಕ್ಕೆ ಬಾರದೆ ಕಚೇರಿಗೆ ತೆರಳಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅವರ ನಡೆಗೆ  ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. 

ಅಂಬೇಡ್ಕರ್ ಅವರ ಮೇಲೆ ಎಸ್‌ಪಿ ಅವರಿಗೆ ಗೌರವವಿಲ್ಲವೇ? ಬರೀ ಮಾಲಾರ್ಪಣೆ ಮಾಡಿ ತೆರಳಿದರೇ ಸಾಕೇ? ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿ ಹೋಗಬಹುದಿತ್ತಲ್ಲವೇ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ ಕಾರ್ಯಕ್ರಮಕ್ಕೆ ಎಸ್‌ಪಿಯವರು ಬರಲೇಬೇಕು ಎಂದು ಆಗ್ರಹಿಸಿದರು. 

ಆ ನಂತರ, ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಬಂದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮುಖಂಡರಲ್ಲಿ ಕ್ಷಮೆ ಕೋರಿದ ಅವರು, ಸ್ಪಷ್ಟನೆಯನ್ನೂ ನೀಡಿದರು. 

‘ಅಪರಾಧ ಪ್ರಕರಣಗಳ ಕುರಿತ ಸಭೆ ಹಾಗೂ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡುತ್ತಿರುವುದರಿಂದ ಪೊಲೀಸ್ ಅಧಿಕಾರಿಗಳ ಜತೆ ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ’ ಎಂದು ಹೇಳಿದರು. 

‘ಅಂಬೇಡ್ಕರ್ ಅವರು ಸರ್ವ ಜನರ ಸಮಾನತೆಗೆ ಶ್ರಮಿಸಿದವರು. ಮಾನವೀಯ ಚಿಂತನೆಗಳನ್ನು ಹೊಂದಿದ್ದ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು