ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿ: ಸಂಸತ್ತಿನಲ್ಲಿ ಚರ್ಚೆಯಾಗಲಿ

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹ
Last Updated 4 ಆಗಸ್ಟ್ 2020, 12:46 IST
ಅಕ್ಷರ ಗಾತ್ರ

ಚಾಮರಾಜನಗರ: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ–2020 ಬಗ್ಗೆ ಸಂಸತ್‌ನಲ್ಲಿ ವಿಸ್ತೃತ ಚರ್ಚೆಯಾಗಬೇಕು. ಆ ನಂತರವೇ ಅದನ್ನು ಜಾರಿಗೆ ತರಬೇಕು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಆಗ್ರಹಿಸಿದರು.

ನಗರದಲ್ಲಿ ಸೋಮವಾರ ನಡೆದಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದ ಅವರು, ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದ ಹಿನ್ನೆಲೆಯುಳ್ಳ ಕೇಂದ್ರದ ಬಿಜೆಪಿ ಸರ್ಕಾರವು ಈ ಹಿಂದೆ ಪಠ್ಯದ ಕೇಸರೀಕರಣ, ಜೆಎನ್‌ಯು ವಿಶ್ವವಿದ್ಯಾಲಯ, ರೋಹಿತ್‌ ವೇಮುಲಾ ಆತ್ಮಹತ್ಯೆ ಪ್ರಕರಣಗಳಲ್ಲಿ ವಿವಾದಕ್ಕೆ ಗುರಿಯಾಗಿತ್ತು. ಆ ಪಕ್ಷದವರಿಗೆ ‌ಮನುವಾದಿ ಮಾನಸಿಕತೆಯ ಇರುವುದರಿಂದ ಅವರು ಜಾರಿಗೆ ತರಲು ಹೊರಟಿರುವ ಶಿಕ್ಷಣ ನೀತಿ ಅನುಮಾನಾಸ್ಪದವಾಗಿರುತ್ತದೆ’ ಎಂದರು.

‘ಬ್ಯಾಂಕ್, ಎಲ್‌ಐಸಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣದ ಪ್ರಸ್ತಾವಗಳ ನಡುವೆ ಹೊಸ ಶಿಕ್ಷಣ ನೀತಿ ತರುತ್ತಿರುವುದು ಅನುಮಾನ ಹುಟ್ಟುಹಾಕಿದೆ.ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂಬ ಶಂಕೆಯೂ ಇದೆ. ಕೋವಿಡ್‌ಗೆ ತುತ್ತಾಗಿರುವ ಜನರಿಗೆ ಆಸ್ಪತ್ರೆಗಳು ಮತ್ತು ವೆಂಟಿಲೇಟರ್‌ಗಳ ಅಗತ್ಯವಿದೆ. ಈ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವುದು ಹಾಸ್ಯಾಸ್ಪದ’ ಎಂದು ಅವರು ಟೀಕಿಸಿದರು.

‘ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ನರೇಂದ್ರಮೋದಿ ಸರ್ಕಾರ ದಿನಕ್ಕೊಂದು ಕಾಯ್ದೆ ತಿದ್ದುಪಡಿ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಯಾವುದೇ ಹೊಸ ಯೋಜನೆಗಳನ್ನು ಅಥವಾ ನೀತಿಗಳನ್ನು ರೂಪಿಸುವ ಮೊದಲು ಸಂಸತ್‌ನಲ್ಲಿ ಚರ್ಚೆಗೊಳಪಡಿಸಬೇಕು. ಅಥವಾ ಇರುವ ವ್ಯವಸ್ಥೆಯನ್ನು ಭದ್ರಪಡಿಸಿ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಹಾಗೂ ಕೋವಿಡ್‌ ಪೀಡಿತರಿಗೆ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಬೇಕು’ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲ್ಲೂಕು ಅಧ್ಯಕ್ಷ ಎಸ್.ಪಿ.ಮಹೇಶ್, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ಬಸವಣ್ಣ, ಶಾಂತರಾಜು ಬಿಸಲವಾಡಿ, ಕುಮಾರಸ್ವಾಮಿ, ಅಮಚವಾಡಿ ಪ್ರಕಾಶ್, ಅರಳೀಪುರ ಮಹದೇವಸ್ವಾಮಿ, ದ್ಯಾವಲಾಪುರ ಶಿವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT