ಭಾನುವಾರ, ಸೆಪ್ಟೆಂಬರ್ 26, 2021
25 °C

ಅಂಬೇಡ್ಕರ್‌ವಾದದಿಂದ ಮನುವಾದದತ್ತ: ಮಹೇಶ್‌ ಬಿಜೆಪಿ ಸೇರ್ಪಡೆಗೆ ಬಿಎಸ್‌ಪಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಡಾ.ಬಿ.ಆರ್‌.ಅಂಬೇಡ್ಕರ್‌, ಕಾನ್ಶಿರಾಂ ಅವರ ತತ್ವ, ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ (ಬಿಎಸ್‌ಪಿ) ಗೆದ್ದಿದ್ದ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ರಾಜಕೀಯದ ಅಸ್ತಿತ್ವಕ್ಕಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಎಸ್‌ಪಿ ಮಂಗಳವಾರ ಆರೋಪಿಸಿದೆ. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು, ‘ಅಂಬೇಡ್ಕರ್‌, ಪುಲೆ ಮುಂತಾದ ಮಾನವತಾವಾದಿಗಳ ತತ್ವ ಸಿದ್ಧಾಂತಗಳ ಅಡಿಯಲ್ಲಿ ರೂಪುಗೊಂಡಿರುವ ಬಿಎಸ್‌ಪಿಯಲ್ಲಿದ್ದ ಮಹೇಶ್‌ ಅವರು ಈಗ ಹೆಗ್ಗಡೆವಾರ್‌, ಗೋಲ್ವಾಲ್ಕರ್‌, ಸಾವರ್ಕರ್‌, ಶ್ಯಾಮ್‌ ಪ್ರಸಾದ್‌ ಮುಖರ್ಜಿ ಮುಂತಾದ ಮನುವಾದಿ, ಮೂಲಭೂತವಾದಿ ವ್ಯಕ್ತಿಗಳು ರೂಪಿಸಿರುವ ಆರ್‌ಎಸ್‌ಎಸ್‌, ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅವರು ಅಂಬೇಡ್ಕರ್‌ ವಾದದಿಂದ ಮನುದಾದದ ಕಡೆಗೆ, ಅಂಬೇಡ್ಕರ್‌ವಾದದಿಂದ ಗೋಲ್ವಾಲ್ಕರ್‌‌ವಾದದ ಕಡೆಗೆ ಹೋಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.  

‘ಮಹೇಶ್‌ ಅವರು ಉದ್ದೇಶಪೂರ್ವಕವಾಗಿಯೇ ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗಿದ್ದರು. ನಂತರದ ಬೆಳವಣಿಗೆಗಳು ಇದನ್ನು ಸಾಬೀತು ಪಡಿಸಿದ್ದವು. ಕೊಳ್ಳೇಗಾಲದಲ್ಲಿ ನೀರಾವರಿ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ಬಂದಿದ್ದಾಗ, ‘ಬಿಜೆಪಿ ಸರ್ಕಾರ ಬರಲು ನನ್ನಷ್ಟೇ ಮಹೇಶ್‌ ಅವರು ಕೂಡ ಕಾರಣಕರ್ತರು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಕೆಲವು ತಿಂಗಳ ಹಿಂದೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ಕೊಳ್ಳೇಗಾಲ ಬಂದಿದ್ದಾಗ ಇದೇ ರೀತಿ ಮಾತನಾಡಿದ್ದರು’ ಎಂದರು. 

ರಾಜೀನಾಮೆ ನೀಡಲಿ: ‘ಪಕ್ಷವನ್ನು ಯಾರಾದರೂ ತೊರೆದ ಸಂದರ್ಭದಲ್ಲಿ, ‘ಕಸ, ಕಸದ ಬುಟ್ಟಿಗೆ ಸೇರಿತು’ ಎಂದು ಸಂಸ್ಥಾಪಕ ಕಾನ್ಶಿರಾಂ ಅವರು ಹೇಳುತ್ತಿದ್ದರು. ಮಹೇಶ್‌ ಅವರು ಈ ಮಾತುಗಳನ್ನು ಹೆಚ್ಚು ಬಳಸುತ್ತಿದ್ದರು. ಈಗ ಅವರೇ ಈ ಮಾತಿಗೆ ಉದಾಹರಣೆಯಾಗಿರುವುದು ದುರಂತ’ ಎಂದು ಕೃಷ್ಣಮೂರ್ತಿ ಅವರು ಟೀಕಿಸಿದರು. 

‘ಹಿಂದೆ ಪಕ್ಷದಿಂದ ಆಯ್ಕೆಯಾಗಿದ್ದ ಕೊಳ್ಳೇಗಾಲದ ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಸಂದರ್ಭದಲ್ಲಿ, ‘ಧೈರ್ಯ, ನೈತಿಕತೆ ಇದ್ದರೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಸ್ಪರ್ಧಿಸಿ ಗೆಲ್ಲಲಿ’ ಎಂದು ಎನ್‌.ಮಹೇಶ್‌  ಸವಾಲು ಹಾಕಿದ್ದರು. ಈಗ ನಾವು ಅದೇ ಸವಾಲನ್ನು ಮಹೇಶ್‌ ಅವರಿಗೆ ಹಾಕುತ್ತೇವೆ’ ಎಂದರು. 

ಕಾಂಗ್ರೆಸ್‌ ಸೇರಲು ಪ್ರಯತ್ನ: ಎನ್‌.ಮಹೇಶ್‌ ಅವರು ಕಾಂಗ್ರೆಸ್‌ ಸೇರಲೂ ಪ್ರಯತ್ನ ನಡೆಸಿದ್ದರು. ಆದರೆ, ಅವರ ಪಕ್ಷದ ಮುಖಂಡರು ಒಪ್ಪಿರಲಿಲ್ಲ. ಹೀಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಆರೋಪಿಸಿದರು. 

‘ಪಕ್ಷ ನಿಷ್ಠೆ ಏನು ಎಂಬುದನ್ನು ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಕಲಿಯಲಿ. ಸ್ವಾಮೀಜಿಗಳು ಬೆಂಬಲ ನೀಡಿದ್ದರೂ, ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಹೇಶ್‌ ಅವರು ಬಿಜೆಪಿಗೆ ಹೋದ ಬಳಿಕ ಆ ಪಕ್ಷಕ್ಕಾದರೂ ನಿಷ್ಠರಾಗಿರಲಿ’ ಎಂದರು.

ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ ಹಾಗೂ ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಅರಕಲವಾಡಿ ಪ್ರಕಾಶ್ ಇದ್ದರು. 

‘ಪಕ್ಷಕ್ಕೆ ಬರುವವರಿಗೆ ಸ್ವಾಗತ’
‘ಈಗಿನ ಬೆಳವಣಿಗೆಯ ಬಗ್ಗೆ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ಮಹೇಶ್‌ ಇಲ್ಲದಿದ್ದರೆ ಬಿಎಸ್‌ಪಿ ಇಲ್ಲ ಎಂಬ ಭ್ರಮೆ ಎರಡು ವರ್ಷಗಳ ಹಿಂದೆಯೇ ಕಳಚಿ ಬಿದ್ದಿದೆ. ಮಹೇಶ್‌ ಅವರ ಉಚ್ಚಾಟನೆ ನಂತರ ಗೊಂದಲಕ್ಕೆ ಒಳಗಾಗಿ ತಟಸ್ಥರಾಗಿರುವ ಕಾರ್ಯಕರ್ತರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆ. ಅವರು ಮತ್ತೆ ಬಂದರೆ ಸ್ವಾಗತಿಸುತ್ತೇವೆ’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.

ರಾಜೀನಾಮೆಗೆ ಹೈಕಮಾಂಡ್‌ ಕಾರಣವಲ್ಲ: ಮಹೇಶ್‌ ಅವರು ನಾಲ್ಕು ತಿಂಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಹೈಕಮಾಂಡ್‌ ಕಾರಣವಲ್ಲ. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಪುಟ್ಟರಂಗಶೆಟ್ಟಿ ಅವರೊಂದಿಗಿನ ಸಂಘರ್ಷ ಹಾಗೂ ಶಿಕ್ಷಣ ಖಾತೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು