ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈರ್ಮಲ್ಯ: ವಾಯುವಿಹಾರಿಗಳಿಗೆ ಕಿರಿ ಕಿರಿ

ಎಂಜಿಎಸ್‌ವಿ ಕಾಲೇಜು ಮೈದಾನದೊಳಕ್ಕೆ ಆಹಾರ ತ್ಯಾಜ್ಯ ಎಸೆಯುವ ಗ್ರಾಹಕರು
Last Updated 22 ಆಗಸ್ಟ್ 2018, 15:28 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪಟ್ಟಣದ ಹೃದಯ ಭಾಗದಲ್ಲಿರುವ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿರುವುದರಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆ ಇಲ್ಲಿಗೆವಾಯು ವಿಹಾರಕ್ಕೆ ಬರುವ ಜನರಿಗೆ ತೊಂದರೆಯಾಗುತ್ತಿದೆ.

ಕಾಲೇಜಿನ ಆವರಣ ಗೋಡೆಯ (ಕಾಂಪೌಂಡ್‌)ಹೊರಬದಿ ತಳ್ಳುಗಾಡಿಗಳಲ್ಲಿ ಹಲವಾರು ವ್ಯಾಪಾರಿಗಳು ಪಾನಿಪುರಿ, ಗೋಬಿ ಮಂಚೂರಿ, ಚುರುಮುರಿಯಂತಹ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಅಲ್ಲಿಗೆ ಬರುವ ಗ್ರಾಹಕರು ಇವುಗಳನ್ನು ತಿಂದ‌ ನಂತರ ಎಲೆ ಅಥವಾ ಪ್ಲೇಟ್‌ಗಳನ್ನು ಮೈದಾನದ ಒಳಕ್ಕೆ ಎಸೆಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ.

ಕೆಲವು ವರ್ಷಗಳ ಹಿಂದೆ ಫುಟ್‌ಪಾತ್‌ ವ್ಯಾಪಾರಿಗಳು ಬಸ್‌ ನಿಲ್ದಾಣದ ಆಸು ಪಾಸಿನಲ್ಲಿ ವ್ಯಾಪಾರ ಮಾಡುತ್ತಿದ್ದರು. ಅಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ಕಾರಣಕ್ಕೆ ಅವರಿಗೆಬಸ್ತೀಪುರ ರಸ್ತೆಯಲ್ಲಿ, ಅಂದರೆ ಎಂಜಿಎಸ್‌ವಿ ಕಾಲೇಜು ಮೈದಾನದ ಆವರಣಗೋಡೆಗೆ ಹೊಂದಿಕೊಂಡಂತೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿತ್ತು.

ನಗರದ ಕೃಷ್ಣ ಟಾಕೀಸ್ ವೃತ್ತ ಹಾಗೂ ಬಸ್ತೀಪುರ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ತಳ್ಳುಗಾಡಿಗಳನ್ನು ಇಟ್ಟುಕೊಂಡು ರಾತ್ರಿ ಹೊತ್ತು ಫಾಸ್ಟ್‌ಫುಡ್‌ ತಯಾರಿಸಿ ವ್ಯಾಪಾರ ಮಾಡುತ್ತಾರೆ.

ಇಲ್ಲಿಗೆಪ್ರತಿ ನಿತ್ಯ ಬರುವ ಗ್ರಾಹಕರು ತ್ಯಾಜ್ಯಗಳನ್ನು ಕಾಲೇಜಿನ ಕಾಂಪೌಂಡ್ ಒಳಗೆ ಬಿಸಾಡಿ ಹೋಗುತ್ತಾರೆ. ಇದರಿಂದ ನಿತ್ಯ ವಾಯುವಿಹಾರಕ್ಕೆ ಬರುವ ನಾಗರಿಕರಿಗೆ ಕಿರಿ-ಕಿರಿಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಗ್ರಾಹಕರು ಉಳಿದ ಆಹಾರ, ಎಲೆ, ಪ್ಲೇಟ್‌ ತ್ಯಾಜ್ಯಗಳನ್ನು ಬಿಸಾಡುವುದರಿಂದ, ಅವುಗಳು ಕೊಳೆತು ದುರ್ವಾಸನೆ ಬರುತ್ತದೆ. ಇದರಿಂದ ನಾಗರಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗುತ್ತಿದೆ. ವ್ಯಾಪಾರ ಮಾಡುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ತ್ಯಾಜ್ಯವನ್ನು ಸಂಗ್ರಹಿಸಲು ಅವರು ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಟ್ಟುಕೊಳ್ಳಬೇಕು. ಗ್ರಾಹಕರು ಅವುಗಳಿಗೇ ತ್ಯಾಜ್ಯ ಹಾಕುವಂತೆ ನೋಡಿಕೊಳ್ಳಬೇಕು’ ಎಂದು ಸ್ಥಳೀಯ ಒತ್ತಾಯಿಸುತ್ತಿದ್ದಾರೆ.

ಹಲವು ಷರತ್ತು:ಅಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ ನಗರಸಭೆಯು ವ್ಯಾಪಾರಿಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿತ್ತು.

ಕಡ್ಡಾಯವಾಗಿ ಕಸದ ಬುಟ್ಟಿಯನ್ನು ಇಟ್ಟು, ಗ್ರಾಹಕರು ಅದನ್ನೇ ಬಳಸುವಂತೆ ನೋಡಿಕೊಳ್ಳಬೇಕು. ಅಲ್ಲಿಗೆ ಬರುವ ಜನರಿಗೆ ನಿಗದಿತ ಸ್ಥಳದಲ್ಲೇ ವಾಹನಗಳನ್ನು ನಿಲ್ಲಿಸುವುವಂತೆ ಸೂಚಿಸಬೇಕು. ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅಡಚಣೆ ಆಗಬಾರದು. ತಪ್ಪಿದರೆ ವ್ಯಾಪಾರಕ್ಕೆ ನೀಡಲಾಗಿರುವ ಅವಕಾಶವನ್ನು ರದ್ದುಪಡಿಸಲಾಗುತ್ತದೆ ಎಂದು ನಗರಸಭೆ ಆಡಳಿತ ಸ್ಪಷ್ಟವಾದ ಸೂಚನೆ ನೀಡಿತ್ತು. ಆದರೆ, ಇದರ ಪಾಲನೆಯಾಗುತ್ತಿಲ್ಲ.

‘ಕಸದ ಬುಟ್ಟಿ ಇಟ್ಟಿದ್ದರೂ, ಗ್ರಾಹಕರು ಎಲ್ಲೆಲ್ಲೋ ತ್ಯಾಜ್ಯವನ್ನು ಎಸೆಯುತ್ತಾರೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

‘ನಿಯಮ ಪಾಲಿಸದಿದ್ದರೆ ಕ್ರಮಖಚಿತ’

ತ್ಯಾಜ್ಯವನ್ನು ಎಸೆಯದಂತೆ, ಸ್ವಚ್ಛತೆ ಕಾಪಾಡುವಂತೆ ಈಗಾಗಲೇ ಒಂದು ಬಾರಿ ವ್ಯಾಪಾರಿಗಳಿಗೆ ನೋಟಿಸ್‌ ನೀಡಿದ್ದೇವೆ. ಇನ್ನೊಮ್ಮೆ ಎಚ್ಚರಿಕೆ ನೀಡುತ್ತೇವೆ. ಮತ್ತೂ ತ್ಯಾಜ್ಯಗಳನ್ನು ಎಸೆದರೆ ವ್ಯಾಪಾರಿಗಳಿಗೆ ನೋಟಿಸ್‌ ನೀಡಿ ಅಲ್ಲಿಂದ ತೆರವುಗೊಳಿಸುತ್ತೇವೆ ಎಂದು ಕೊಳ್ಳೇಗಾಲ ನಗರಸಭೆಯ ಪ್ರಭಾರ ಆಯುಕ್ತ ಸುರೇಶ್‌ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT