ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗೊಠಾರ: ನರೇಗಾ ಅಡಿ ಜಲ ಸಂರಕ್ಷಣೆ ಕಾಮಗಾರಿ

ಜಿಲ್ಲೆಯಲ್ಲೂ 100 ದಿನಗಳ ಜಲಶಕ್ತಿ ಅಭಿಯಾನಕ್ಕೆ ಚಾಲನೆ
Last Updated 9 ಏಪ್ರಿಲ್ 2021, 14:55 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ‘ಜಲ ಶಕ್ತಿ ಅಭಿಯಾನ’ಕ್ಕೆ ಜಿಲ್ಲೆಯಲ್ಲೂ ಶುಕ್ರವಾರ ಚಾಲನೆ ಸಿಕ್ಕಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅಡಿಯಲ್ಲಿ ಈ ಅಭಿಯಾನ ಅನುಷ್ಠಾನಕ್ಕೆ ಬರಲಿದ್ದು, 100 ದಿನಗಳ ಕಾಲ ಜಲ ಸಂರಕ್ಷಣೆಗಾಗಿ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೈಗೆತ್ತಿಕೊಳ್ಳಲಿದೆ.

ತಾಲ್ಲೂಕಿನ ಹೆಗ್ಗೊಠಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪೂರ್ವ ಮುಂಗಾರು ಮಳೆ ಆರಂಭವಾಗುವುದಕ್ಕೆ ಮುನ್ನವೇ ನೀರಿನ ಸಂರಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶ. ಯೋಜನೆಯ ನೀಲ ನಕ್ಷೆಯಂತೆ ಎಲ್ಲ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುವುದು. ಈ ಸಂಬಂಧ ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಅಭಿಯಾನದ ಅಡಿಯಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಜಲಸಂರಕ್ಷಣೆ ಆಧರಿತ ಕಾಮಗಾರಿಗಳನ್ನು ಮುಂದಿನ 100 ದಿನಗಳ ಅವಧಿಯಲ್ಲಿ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

ನರೇಗಾ ಯೋಜನೆಯಲ್ಲಿ ‘ದುಡಿಯೋಣ ಬಾ’ ಅಭಿಯಾನ ಪ್ರಾರಂಭವಾಗಿದ್ದು, ಉದ್ಯೋಗ ಚೀಟಿ ಹೊಂದಿರುವ ಗ್ರಾಮೀಣ ಜನರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಏನೇನು ಕಾಮಗಾರಿ?

ಕೇಂದ್ರ ಸರ್ಕಾರವು ಮಾರ್ಚ್‌ 22ರಿಂದ ನವೆಂಬರ್‌ 31ರವರೆಗೆ ಜಲಶಕ್ತಿ ಅಭಿಯಾನ ಯೋ‌ಜನೆಯನ್ನು ಘೋಷಿಸಿದೆ. ಮುಂಗಾರು ಆರಂಭವಾಗುವುದಕ್ಕೂ ಮೊದಲು, ಅಂದರೆ ಏಪ್ರಿಲ್‌ 1ರಿಂದ 100 ದಿನಗಳ ಕಾಲ ಅಂದರೆ, ನರೇಗಾ ಅಡಿಯಲ್ಲಿ ಜಲ ಸಂರಕ್ಷಣೆ ಅಭಿಯಾನ ಹಮ್ಮಿಕೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಯೋಜನೆ ರೂಪಿಸಿದೆ.

ಸಮಗ್ರ ಕೆರೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಕೆರೆ ಕೋಡಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ದುರಸ್ತಿ, ಕೆರೆ ಅಂಚಿನ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡುವ ಕಾಮಗಾರಿ ನಡೆಯಲಿದೆ.

ಇದಲ್ಲದೇ ಬದು ನಿರ್ಮಾಣ ಅಭಿಯಾನ, ಕಲ್ಯಾಣಿಗಳ ಪುನಶ್ಚೇತನ, ನಾಲೆಗಳ ಪುನಶ್ಚೇತನ, ಗೋಕಟ್ಟೆಗಳ ನಿರ್ಮಾಣ, ಜಾಗವಿರುವ ಕಡೆಗಳಲ್ಲಿ ಹೊಸ ಕೆರೆಗಳ ನಿರ್ಮಾಣ, ಬಚ್ಚಲು ಗುಂಡಿಗಳ ನಿರ್ಮಾಣ, ಬಹು ಕಮಾನುಗಳ ಚೆಕ್‌ ಡ್ಯಾಂ ನಿರ್ಮಾಣ, ಕೊಳವೆಬಾವಿಗಳ ಮರುಪೂರಣ, ಮಳೆ ನೀರು ಸಂಗ್ರಹ, ಅರಣ್ಯೀಕರಣ ಕಾಮಗಾರಿಗಳು, ಚೆಕ್‌ ಡ್ಯಾಂಗಳ ಹೂಳು ತೆಗೆಯುವುದು, ಜಲ ಸಂರಕ್ಷಣೆ ಕಾಮಗಾರಿಗಳ ದುರಸ್ತಿ ಸೇರಿದಂತೆ ಹಲವು ಕಾಮಗಾರಿಗಳನ್ನು ಈ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT