ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಶೇ 100 ಫಲಿತಾಂಶ, 9ನೇ ಸ್ಥಾನ

ಎಸ್ಸೆಸ್ಸೆಲ್ಸಿ: 625 ‌ಅಂಕ ಯಾರಿಗೂ ಇಲ್ಲ, ಎಲ್ಲರೂ ತೇರ್ಗಡೆ, ಜಿಲ್ಲೆಯ ಸ್ಥಾನಮಾನ ಏರಿಕೆ
Last Updated 10 ಆಗಸ್ಟ್ 2021, 4:20 IST
ಅಕ್ಷರ ಗಾತ್ರ

ಚಾಮರಾಜನಗರ: 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಪ‍ರೀಕ್ಷೆಯಲ್ಲಿ ಜಿಲ್ಲೆಯು ಶೇ 100ರಷ್ಟು ಫಲಿತಾಂಶ ದಾಖಲಿಸಿದೆ.

ಪ್ರೌಢ ಶಿಕ್ಷಣ ಮಂಡಳಿಯು ಫಲಿತಾಂಶದಲ್ಲಿ ಜಿಲ್ಲೆಗೆ ‘ಎ’ ಶ್ರೇಣಿ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನ 9ಕ್ಕೆ ಏರಿದೆ. 2019–20ನೇ ಸಾಲಿನಲ್ಲಿ 11ನೇ ಸ್ಥಾನ ಗಳಿಸಿತ್ತು.

ಪೂರ್ಣಾಂಕ (625) ಪಡೆದಿರುವ 157 ವಿದ್ಯಾರ್ಥಿಗಳಲ್ಲಿ ಜಿಲ್ಲೆಯ ಯಾರೊಬ್ಬರೂ ಇಲ್ಲ. ಜಿಲ್ಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ ಲಭ್ಯವಾಗಿಲ್ಲ. ಮಂಗಳವಾರ ಗೊತ್ತಾಗಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಎರಡನೇ ಅಲೆಯ ಕಾರಣಕ್ಕೆ ಮಾರ್ಪಾಟು ಮಾಡಿದ ವಿಧಾನದಲ್ಲಿ ನಡೆದ ಪರೀಕ್ಷೆಗೆ ಜಿಲ್ಲೆಯ 11,187 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. 5,735 ಬಾಲಕರು ಹಾಗೂ 5,452 ಬಾಲಕಿಯರು ಪರೀಕ್ಷೆ ಬರೆದಿದ್ದರು.

ತಾಲ್ಲೂಕುವಾರು ಫಲಿತಾಂಶ: ಚಾಮರಾಜನಗರ ತಾಲ್ಲೂಕಿನಲ್ಲಿ 3,505 ಮಕ್ಕಳು, ಗುಂಡ್ಲುಪೇಟೆಯಲ್ಲಿ 2,300, ಹನೂರಿನಲ್ಲಿ 1,819, ಕೊಳ್ಳೇಗಾಲದಲ್ಲಿ 1,909 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 856 ಮಕ್ಕಳು ಪರೀಕ್ಷೆ ಎದುರಿಸಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

791 ಮಕ್ಕಳು ‘ಎ+’ ಶ್ರೇಣಿ (90–100 ಅಂಕ), 3,054 ಮಂದಿ ‘ಎ’ ಶ್ರೇಣಿ (80–90), 5,417 ವಿದ್ಯಾರ್ಥಿಗಳು ‘ಬಿ’ ಶ್ರೇಣಿ (60–80) ಹಾಗೂ 1,925 ವಿದ್ಯಾರ್ಥಿಗಳು ‘ಸಿ’ (35–60 ಅಂಕ) ಶ್ರೇಣಿಗಳಲ್ಲಿ ತೇರ್ಗಡೆ ಹೊಂದಿದ್ದಾರೆ.

‘ಈ ಬಾರಿ ಎರಡೇ ಪರೀಕ್ಷೆ ನಡೆದಿರುವುದರಿಂದ ತಜ್ಞರು ರೂಪಿಸಿರುವ ಮಾನದಂಡಗಳ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ನಮ್ಮಲ್ಲಿ ಯಾರೂ ಪೂರ್ಣಾಂಕ ಪಡೆದಿಲ್ಲ. ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳ ವಿವರ ತಕ್ಷಣಕ್ಕೆ ಸಿಕ್ಕಿಲ್ಲ. ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಈ ಬಾರಿ 9ನೇ ಸ್ಥಾನ ಸಿಕ್ಕಿದೆ’ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಅವರು ತಿಳಿಸಿದರು.

ಕೈಕೊಟ್ಟ ಸರ್ವರ್‌: ತಕ್ಷಣಕ್ಕೆ ಸಿಗದ ಫಲಿತಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಲೇ ಶಿಕ್ಷಣ ಇಲಾಖೆಯ ವಿವಿಧ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ವೀಕ್ಷಣೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮುಗಿಬಿದ್ದಿದ್ದರಿಂದ ಸರ್ವರ್‌ ಸಮಸ್ಯೆ ಉಂಟಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ತಕ್ಷಣಕ್ಕೆ ಜಿಲ್ಲೆಯ ಫಲಿತಾಂಶದ ವಿವರ ಸಿಗಲಿಲ್ಲ.

ಕೋವಿಡ್‌ ಎರಡನೇ ಅಲೆಯ ಕಾರಣಕ್ಕೆ ಕಳೆದ ಶೈಕ್ಷಣಿಕ ಸಾಲಿನ ಪರೀಕ್ಷೆಯನ್ನು ಜುಲೈ 19 ಮತ್ತು 22ಕ್ಕೆ ನಡೆಸಲಾಗಿತ್ತು. ಆರು ಪರೀಕ್ಷೆಗಳ ಬದಲಿಗೆ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲಾಗಿತ್ತು. ಕೋರ್‌ ವಿಷಯಗಳ ಪರೀಕ್ಷೆಯನ್ನು 19ರಂದು ನಡೆಸಿದ್ದರೆ, ಭಾಷಾ ವಿಷಯಗಳ ಪರೀಕ್ಷೆಯನ್ನು 22ರಂದು ನಡೆಸಲಾಗಿತ್ತು. ತಲಾ 125 ಅಂಕಗಳ ಪರೀಕ್ಷೆಗಳಲ್ಲಿ 120 ಅಂಕಗಳಿಗೆ ತಲಾ ಒಂದು ಅಂಕದ ಬಹು ಉತ್ತರ ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗಿತ್ತು.

ಪರೀಕ್ಷೆಗೆ ಹಾಜರಾದವರು ಎಲ್ಲರೂ ತೇರ್ಗಡೆಯಾಗುವುದು ಮೊದಲೇ ನಿಶ್ಚಯವಾಗಿತ್ತು. ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಡೆಯಲಿರುವ ಅಂಕಗಳ ಆಧಾರದಲ್ಲಿ ಶ್ರೇಣಿಗಳನ್ನು ನಿಗದಿ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT