ಗುಂಡ್ಲುಪೇಟೆ: ‘ಕಾಡಿನಲ್ಲಿ ಹುಲಿಗಳು ಹೆಚ್ಚಾದಂತೆ ಪರಿಸರ ಸಮತೋಲನವಾಗಿರುತ್ತದೆ. ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಮುಖ್ಯ ಹೊಣೆಗಾರಿಕೆ’ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ಕಚೇರಿ ಆವರಣದಲ್ಲಿ ಶನಿವಾರ ನಡೆದ ವಿಶ್ವ ಹುಲಿ ದಿನ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಅರಣ್ಯ ಸಂರಕ್ಷಣೆ ಬಗ್ಗೆ ಸುತ್ತಮುತ್ತಲಿನ ಜನರಿಗೆ ಅರಣ್ಯ ಇಲಾಖೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
‘ಮೈಸೂರು ರಾಜಮನೆತನ ಹಾಗೂ ಬಂಡೀಪುರಕ್ಕೂ ಅವಿನಾಭಾವ ಸಂಬಂಧವಿದೆ. ಬಂಡೀಪುರ ಅಭಯಾರಣ್ಯ ಸಂರಕ್ಷಣೆಗೆ ಮಹಾರಾಜರು ಶ್ರಮ ವಹಿಸಿದ್ದಾರೆ. ಜೊತೆಗೆ ವೈಯಕ್ತಿಕವಾಗಿ ಬಂಡೀಪುರ ನನಗೆ ಅಚ್ಚುಮೆಚ್ಚಿನ ಸ್ಥಳ. ಆಗಾಗ್ಗೆ ಬಂಡೀಪುರ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಕೃತಿ ಸೌಂದರ್ಯ ಸವಿಯುತ್ತಿರುತ್ತೇನೆ. ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಖುಷಿ ವಿಚಾರ, ಪ್ರಜ್ಞಾವಂತ ಸಮಾಜದ ಪ್ರಜೆಗಳಾದ ನಾವು ಹುಲಿಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ತಿಳಿಸಿದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಮಾತನಾಡಿ,‘ಬಂಡೀಪುರ ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದ ಫಲವಾಗಿ ಹೆಚ್ಚಿನ ಹುಲಿ ಸಂತತಿ ಇರುವ ಅರಣ್ಯ ಪ್ರದೇಶವೆಂದು ಗುರುತಿಸಿಕೊಂಡಿದೆ. ಈ ಸಂಬಂಧ ಸಾರ್ವಜನಿಕರಲ್ಲಿ ಹುಲಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹೆಚ್ಚು ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಹುಲಿ ದಿನಾಚರಣೆಯ ಅಂಗವಾಗಿ ಗಿರಿಜನ ಮಕ್ಕಳು ಹಾಗೂ ವಿವಿಧ ವಲಯಗಳ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ ಹಾಗೂ ಆಶು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಜೆಎಸ್‍ಎಸ್ ಸಹನಾ ಇಂಟಿಗ್ರೇಟೆಡ್ ಸ್ಕೂಲ್ ಫಾರ್ ಡಿಸೇಬಲೆಡ್ ಚಿಲ್ಡ್ರನ್‌ನ 30 ಜನ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು, ವಿವೇಕಾನಂದ ಟ್ರೈಬಲ್ ಸೆಂಟರ್ ಆಫ್ ಲರ್ನಿಂಗ್‍ನ 50 ಜನ ಮಕ್ಕಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 40 ಜನ ವಿದ್ಯಾರ್ಥಿಗಳು, ಹಂಗಳ, ಮಂಗಲ ಹಾಗೂ ಭೀಮನಬೀಡು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 50 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಕಾರಿ ನವೀನ್, ರವೀಂದ್ರ, ಕೆ.ಪರಮೇಶ್, ವಲಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ನರೇಶ್, ಮಲ್ಲೇಶ್ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.