ಹಬ್ಬದ ಬಳಿಕ ಹೂವಿಗೆ ಬೇಡಿಕೆ ಕುಸಿತ
ಯುಗಾದಿ ಹಬ್ಬದ ಬಳಿಕ ಹೂವುಗಳಿಗೆ ಬೇಡಿಕೆ ದಿಢೀರ್ ಕಡಿಮೆಯಾಗಿದೆ. ಬೆಲೆಯೂ ಗಣನೀಯವಾಗಿ ಇಳಿದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೂವುಗಳ ಧಾರಣೆ ಅರ್ಧಕ್ಕರ್ಧ ಕಡಿಮೆಯಾಗಿದೆ. ‘ಯುಗಾದಿಯೊಂದಿಗೆ ಗ್ರಾಮೀಣ ಭಾಗದಲ್ಲಿ ಉತ್ಸವಗಳು ಹಬ್ಬಗಳು ಬಹುತೇಕ ಮುಕ್ತಾಯ ಕಂಡಿವೆ. ಶುಭ ಸಮಾರಂಭಗಳು ಮಾತ್ರ ನಡೆಯುತ್ತಿವೆಯಷ್ಟೇ. ಹಾಗಾಗಿ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇನ್ನೂ ಕೆಲವು ವಾರಗಳ ವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. ಸೇವಂತಿಗೆ ಹೂವುಗಳ ಪೂರೈಕೆ ಕಡಿಮೆಯಾಗಿರುವುದರಿಂದ ಅದಕ್ಕೆ ಮಾತ್ರ ಹೆಚ್ಚು ಬೆಲೆ (ಕೆಜಿಗೆ ₹200–₹300) ಇದೆ ಎಂದು ಅವರು ಹೇಳಿದರು.