ಚಾಮರಾಜನಗರ: ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಆರಂಭಿಸಿರುವುದು ಸಂತೋಷವೇ. ಆದರೆ ವಿ.ವಿಗೆ ಜಮೀನು, ಅನುದಾನ ಮಂಜೂರು ಮಾಡಬೇಕಾಗಿತ್ತು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ಹೇಳಿದರು.
ನಗರದ ಹೊರವಲಯದ ಬೇಡರಪುರದಲ್ಲಿ ಚಾಮರಾಜನಗರ ವಿವಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಏಳು ಜಿಲ್ಲೆಗಳಲ್ಲಿ ಸರ್ಕಾರ ವಿ.ವಿ ಆರಂಭಿಸಿದೆ. ತಲಾ ₹2 ಕೋಟಿ ಅನುದಾನ ನೀಡುವುದಾಗಿ ಹೇಳಿದೆ. ಈ ಅನುದಾನ ವೇತನಕ್ಕೆ ಸಾಕಾಗುವುದಿಲ್ಲ. ವಿಶ್ವವಿದ್ಯಾಲಯ ಎಂದ ಮೇಲೆ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳು ಬೇಕು. 200 ಎಕರೆ ಜಮೀನು ಮತ್ತು ₹200 ಕೋಟಿ ಅನುದಾನ ಕೇಳಿದ್ದೆವು' ಎಂದರು.
'ಯಾವುದೇ ಸಂಸ್ಥೆ ಉದ್ಘಾಟನೆಯಾಗುವ ಮೊದಲು ಎಲ್ಲ ಸೌಲಭ್ಯಗಳು ಅಲ್ಲಿ ಇರಬೇಕು. ಆದರೆ ನಮ್ಮಲ್ಲಿ ಏನೂ ಇಲ್ಲದೆ ಉದ್ಘಾಟನೆಯಾಗುತ್ತದೆ. ನಂತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ' ಎಂದರು.
'ಜಿಲ್ಲೆಯಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರ ಆಗಲು ಕಾರಣೀಭೂತರಾದವರು ದಿವಂಗತ ಆರ್.ಧ್ರುವನಾರಾಯಣ. ಶೈಕ್ಷಣಿಕವಾಗಿ ಅಭಿವೃದ್ಧಿಹೊಂದಲು ಅವರು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಕೊಡುಗೆಗಳನ್ನು ನೀಡಿದ್ದಾರೆ. ಸ್ನಾತಕೋತ್ತರ ಕೇಂದ್ರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಇಡಬೇಕು ಎಂದು ಧ್ರುವನಾರಾಯಣ ಪ್ರಯತ್ನ ಮಾಡಿದ್ದರು. ಪ್ರತ್ಯೇಕ ವಿವಿಗೂ ಅಂಬೇಡ್ಕರ್ ಹೆಸರು ಇಡಬೇಕು ಎಂಬ ಇಚ್ಛೆ ಅವರಿಗಿತ್ತು. ಈ ಸಂದರ್ಭದಲ್ಲಿ ನಾವು ಧ್ರುವನಾರಾಯಣ ಅವರನ್ನು ಸ್ಮರಿಸಬೇಕು. ಅವರ ಆಸೆಯಂತೆ ವಿವಿಗೆ ಅಂಬೇಡ್ಕರ್ ಹೆಸರು ಇಡಬೇಕು' ಎಂದು ಪುಟ್ಟರಂಗಶೆಟ್ಟಿ ಒತ್ತಾಯಿಸಿದರು.
ಜಿಲ್ಲೆ ಆಬಿವೃದ್ಧಿಯಾಗಿದೆ: 1997ರಲ್ಲಿ ಪ್ರತ್ಯೇಕ ಜಿಲ್ಲೆಯಾದ ನಂತರ, ಎಲ್ಲ ಶಿಕ್ಷಣ ಸಂಸ್ಥೆಗಳು ಇಲ್ಲಿ ಸ್ಥಾಪನೆಯಾಗಿದೆ. ₹30 ಕೋಟಿ ವೆಚ್ಚದಲ್ಲಿ ವಸತಿಯುತ ಮಹಿಳಾ ಕಾಲೇಜು ನಿರ್ಮಾಣವಾಗುತ್ತಿದೆ. ₹25 ಕೋಟಿ ವೆಚ್ಚದಲ್ಲಿ ಯಡಬೆಟ್ಟದಲ್ಲಿ ಕೃಷಿ ಕಾಲೇಜು ಕಾಮಗಾರಿ ನಡೆಯುತ್ತಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಇರುವುದರಿಂದ ನಮ್ಮದು ಹಿಂದುಳಿದ ಜಿಲ್ಲೆಯಲ್ಲ. ಜಿಲ್ಲೆ ಅಭಿವೃದ್ಧಿಯಾಗಿದೆ' ಎಂದರು.
ಜ್ಞಾನ ಶೋಧನಾ ವಿವಿಯಾಗಲಿ: ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, 'ವಿಶ್ವವಿದ್ಯಾಲಯಕ್ಕೆ ತಲುಪುವವರೆಗೆ ನಮ್ಮ ಜ್ಞಾನ, ಕಲಿಕೆ ಸೀಮಿತವಾಗುತ್ತಿರುತ್ತದೆ. ವಿ.ವಿಗಳಲ್ಲಿ ಅಧ್ಯಯನ, ಸಂಶೋಧನೆ ಮಾಡಿದ ನಂತರ ಎಲ್ಲ ಅಡೆತಡೆಗಳು, ಸೀಮೆಯನ್ನು ಮೀರುವ ಯೋಚನೆಗಳು ನಮ್ಮಲ್ಲಿ ಬೆಳೆಯುತ್ತವೆ. ಅಥವಾ ಆ ರೀತಿ ಬೆಳೆಯಬೇಕು. ಆಗ ಮಾತ್ರ ವಿವಿಗೆ ಒಂದು ಅರ್ಥ ಬರುತ್ತದೆ' ಎಂದರು.
‘ಚಾಮರಾಜನಗರ ವಿಶಿಷ್ಟವಾದ ವಿಚಿತ್ರ ಜಿಲ್ಲೆ. ಇಲ್ಲಿ ಬುಡಕಟ್ಟು ಜನರಿದ್ದಾರೆ. ಅವರ ಜ್ಞಾನಕ್ಕೆ ನಾವು ಸರಿ ಸಮನಾಗಿರುವುದಕ್ಕೆ ಸಾಧ್ಯವೇ ಇಲ್ಲ. ಗಿರಿಜನರು ಸಾವಿರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಇದ್ದು, ಅಪಾರ ಜ್ಞಾನವನ್ನು ಸಂಪಾದಿಸಿದ್ದಾರೆ. ಅವರಿಗೆ ಎಲ್ಲ ವಿಷಯಗಳ ಬಗ್ಗೆ ತಿಳಿದಿದೆ. ಇದು ಜ್ಞಾನ ಶ್ರೀಮಂತಿಕೆ ಹೊಂದಿರುವ ಜಿಲ್ಲೆ. ಆ ಅರಿವನ್ನು ಹೆಚ್ಚು ಹೆಚ್ಚು ಶೋಧಿಸುವ ವಿವಿ ಇದಾಗಲಿ' ಎಂದು ಆಶಿಸಿದರು.
ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿವಿ ಬೋಧಕರು, ವಿದ್ಯಾರ್ಥಿಗಳು ಇದ್ದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ವರ್ಚುವಲ್ ಆಗಿ ನೂತನ ವಿವಿಯನ್ನು ಉದ್ಘಾಟಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಇದ್ದರು.
'ಉದ್ಯೋಗ ಆಧಾರಿತ ಕೋರ್ಸ್‌ಗೆ ಒತ್ತು'
ವಿವಿ ಕುಲಪತಿ ಡಾ.ಎಂ.ಆರ್.ಗಂಗಾಧರ್ ಮಾತನಾಡಿ, 'ಮೂರು ಕೋರ್ಸ್‌ಗಳು ಮತ್ತು 90 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸ್ನಾತಕೋತ್ತರ ಕೇಂದ್ರ, ಈಗ ಪ್ರತ್ಯೇಕ ವಿವಿಯಾಗಿದೆ. ಈ ಭಾಗದ ಮಕ್ಕಳು ಪ್ರತಿಭಾವಂತರಿದ್ದಾರೆ. ಸಾಕಷ್ಟು ಜ್ಞಾನ ಹೊಂದಿದ್ದಾರೆ. ಮಾನವಶಾಸ್ತ್ರಜ್ಞನಾಗಿ ನನಗೆ ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂದು ಅನಿಸಿಲ್ಲ. ಇಲ್ಲಿನ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳು ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ' ಎಂದರು.
'ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಉದ್ದೇಶ. ಬರೀ ಪದವಿ ಕೊಡುವುದಲ್ಲ. ಅವರಿಗೆ ಜೀವನ ನೀಡಬೇಕು. ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಹೆಚ್ಚು ತರಬೇತಿ ಕೊಡಬೇಕಾಗುತ್ತದೆ. ಈಗಿರುವ ಕೋರ್ಸ್ ಗಳ ಜೊತೆಗೆ ಉದ್ಯೋಗಾಧರಿತ ಕೋರ್ಸ್‌ಗಳನ್ನು ಕೊಡಬೇಕು ಎಂದುಕೊಂಡಿದ್ದೇವೆ.ವಿವಿಯನ್ನು ಇಡೀ ದೇಶದಲ್ಲೇ ಮಾದರಿ ವಿವಿ ಮಾಡುವುದು ನಮ್ಮ ಗುರಿ' ಎಂದು ಗಂಗಾಧರ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.