ಚಾಮರಾಜನಗರ: ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾಗಿರುವ ಮಾಧ್ಯಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಗರದಲ್ಲಿ ಹಮ್ಮಿಕೊಂಡಿದ್ದ ಸಂಘದ ಬೆಳ್ಳಿ ಮಹೋತ್ಸವ, ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪತ್ರಕರ್ತರು ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವಂತಹವರು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಪತ್ರಿಕಾ ಮಾದ್ಯಮ ಹೊಂದಿದೆ. ದ್ಯಶ್ಯ ಮಾಧ್ಯಮ ಸುದ್ದಿಗಳನ್ನು ಹೆಚ್ಚು ವೈಭವೀಕರಿಸುತ್ತಿವೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಅಧಿಕಾರಿಗಳು, ರಾಜಕಾರಣಿಗಳು ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಪತ್ರಕರ್ತರನ್ನು ಅವರನ್ನು ತಮ್ಮ ವರದಿ ಮೂಲಕ ಎಚ್ಚರಿಸಿ ಸಮಾಜದ ಅಭಿವೃದ್ದಿಗೆ ದುಡಿಯುತ್ತಾರೆ’ ಎಂದರು.
‘ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಕೊಂಡೊಯ್ಯುವುದು, ದೇಶವನ್ನು ಕಲುಷಿತ ವಾತಾವರಣದಿಂದ ಒಳ್ಳೆಯ ದಿಕ್ಕಿನೆಡೆಗೆ ಸಾಗಿಸುವುದು ಮಾಧ್ಯಮಗಳ ಕೆಲಸ. ಅದಕ್ಕೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಧ್ಯಮವರ ಮಾರ್ಗದರ್ಶನವೂ ಅಗತ್ಯ. ಮಾಧ್ಯಮದ ಮಿತ್ರರು ಹಾಗೂ ಆಡಳಿತದ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು. ಇಲ್ಲಿ ಉತ್ತಮ ಕೆಲಸಗಳಾಗಬೇಕಾದರೆ ಮಾಧ್ಯಮದವರ ಸಹಕಾರ, ಮಾರ್ಗದರ್ಶನ ಜಿಲ್ಲಾಡಳಿತಕ್ಕೆ ಬೇಕು’ ಎಂದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.
‘ಪ್ರಜಾವಾಣಿ’ ಸಂತೇಮರಹಳ್ಳಿ ವರದಿಗಾರ ಮಹದೇವ್ ಹೆಗ್ಗವಾಡಿಪುರ ಸೇರಿದಂತೆ 10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪತ್ರಕರ್ತರು, ಕುಟುಂಬದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ಅಬ್ರಾಹಂ ಡಿಸಿಲ್ವಾ, ಎಸ್.ಎಂ.ನಂದೀಶ್ ಮತ್ತು ರಾಜ್ಯ ಪರಿಷತ್ ಸದಸ್ಯ ಎಂ.ಈ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ವರ್ತಕರ ಸಂಘದ ಅಧ್ಯಕ್ಷ ಎಚ್.ಬಿ.ರಾಜಶೇಖರ್, ಜಿಲ್ಲಾ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಸಂಘದ ಪದಾಧಿಕಾರಿಗಳು ಇದ್ದರು.