ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಅಪಘಾತ: 102 ಮಂದಿ ‘ತಲೆ’ ದಂಡ

ಅಘಾತಗಳಲ್ಲಿ ಹೆಲ್ಮೆಟ್ ಧರಿಸದಿರುವುದು ದ್ವಿಚಕ್ರ ವಾಹನ ಸವಾರರ ಸಾವಿಗೆ ಪ್ರಮುಖ ಕಾರಣ
Published : 28 ಆಗಸ್ಟ್ 2024, 5:25 IST
Last Updated : 28 ಆಗಸ್ಟ್ 2024, 5:25 IST
ಫಾಲೋ ಮಾಡಿ
Comments

ಚಾಮರಾಜನಗರ: ಇದೇ ವರ್ಷದ ಜನವರಿ 1ರಿಂದ ಆಗಸ್ಟ್‌ 26ರವರೆಗೆ ಜಿಲ್ಲೆಯಲ್ಲಿ 95 ದ್ವಿಚಕ್ರ ವಾಹನಗಳ ಅಪಘಾತ ಸಂಭವಿಸಿದ್ದು 102 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಪೈಕಿ ಬಹುತೇಕರು ದ್ವಿಚಕ್ರ ವಾಹನ ಸವಾರರಾಗಿದ್ದು, ಚಾಲನೆ ವೇಳೆ ಹೆಲ್ಮೆಟ್ ಧರಿಸದಿರುವುದು ಸಾವಿಗೆ ಪ್ರಮುಖ ಕಾರಣ ಎಂಬುದು ಆಘಾತಕಾರಿ ಹಾಗೂ ಆತಂಕಕಾರಿ ವಿಚಾರ.

ಬಹುತೇಕ ಅಪಘಾತದಲ್ಲಿ ಬೈಕ್ ಚಾಲಕರು ಹಾಗೂ ಹಿಂಬದಿ ಸವಾರರು ತಲೆಗೆ ಗಂಭೀರವಾದ ಪೆಟ್ಟುಬಿದ್ದು, ತೀವ್ರ ರಕ್ರಸ್ರಾವವಾಗಿ ಮೃತಪಡುತ್ತಿದ್ದಾರೆ. ಮೇಲ್ನೋಟಕ್ಕೆ ಹೆಲ್ಮೆಟ್ ಧರಿಸದಿರುವುದು, ಧರಿಸಿದ್ದರೂ ಹೆಲ್ಮೆಟ್‌ನ ನೆಕ್‌ ಬೆಲ್ಟ್ ಸೇಫ್ಟಿ ಪಿನ್ ಹಾಕದಿರುವುದು ಸಾವಿನ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎನ್ನಲಾಗಿದೆ.

‘ಕಳೆದ 1 ತಿಂಗಳಲ್ಲಿ ಜಿಲ್ಲಾ ವ್ಯಾಪ್ತಿಯ ಹಲವೆಡೆ ಸಂಭವಿಸಿದ ಅಪಘಾತಗಳಲ್ಲಿ 22 ಮಂದಿ ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದು ಅವರಲ್ಲಿ 15 ಮಂದಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದರು’ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ.

‘ಜಿಲ್ಲೆಯಲ್ಲಿ ಹೆಲ್ಮೆಟ್ ಹಾಕದೆ ವಾಹನ ಓಡಿಸುತ್ತಿರುವುದರಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಅಪ್ಪ, ಅಣ್ಣ, ಅಮ್ಮ, ಅಕ್ಕ ‌ಹೀಗೆ ಮನೆಗೆ ಆಧಾರ ಸ್ಥಂಭಗಳಾಗಿದ್ದವರು ಮೃತಪಟ್ಟು ಕುಟುಂಬಗಳು ಬೀದಿಗೆ ಬೀಳುತ್ತಿವೆ, ಚಿಕ್ಕ ಮಕ್ಕಳು ಅನಾಥರಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಎಸ್‌ಪಿ.

ಎಷ್ಟು ಅಪಘಾತ, ಸಾವು:

ಜನವರಿಯಲ್ಲಿ 12 ಅಪಘಾತಗಳು ನಡೆದಿದ್ದು 17 ಮಂದಿ ಸವಾರರು ಮೃತಪಟ್ಟರೆ, ಮಾರ್ಚ್‌ನಲ್ಲಿ 7 ಅಪಘಾತ, 7 ಸಾವು, ಏಪ್ರಿಲ್‌ನಲ್ಲಿ 12 ಅಪಘಾತ, 12 ಸಾವು, ಮೇನಲ್ಲಿ 14 ಅಪಘಾತ, 14 ಸಾವು, ಜೂನ್‌ನಲ್ಲಿ 14 ಅಪಘಾತ, 14 ಸಾವು, ಜುಲೈನಲ್ಲಿ 14 ಅಪಘಾತ 16 ಸಾವು, ಆಗಸ್ಟ್‌ 26ರವರೆಗೆ ಸಂಭವಿಸಿರುವ 7 ಅಪಘಾತಗಳಲ್ಲಿ 7 ಸವಾರರು ಮೃತಪಟ್ಟಿದ್ದಾರೆ ಎನ್ನುತ್ತವೆ ಪೊಲೀಸ್ ಇಲಾಖೆಯ ಅಂಕಿ ಅಂಶಗಳು.

ಜಾಗೃತಿ ಅಭಿಯಾನ:

ಹೆಲ್ಮೆಟ್‌ ಧರಿಸದ ಕಾರಣಕ್ಕೆ ಜೀವಗಳು ಬಲಿಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ ಹೆಲ್ಮೆಟ್ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಕಾರ್ಯಾಚರಣೆ ವೇಳೆ ಹೆಲ್ಮೆಟ್ ಹಾಕದವರಿಗೆ ಏಕಾಏಕಿ ದಂಡ ವಿಧಿಸದೆ ಅವರ ಮನವೊಲಿಸಿ ಹೆಲ್ಮೆಟ್ ಖರೀದಿಗೆ ಪ್ರೇರೇಪಿಸಲಾಗುತ್ತಿದೆ.

‘ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅಪಘಾತದಲ್ಲಿ ಮೃತಪಟ್ಟವರ ಭೀಕರ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಅಪಾಯಗಳ ಬಗ್ಗೆ ತಿಳಿ ಹೇಳಲಾಗುತ್ತಿದೆ. ಹೆಲ್ಮೆಟ್ ಧರಿಸುವ ಬಗ್ಗೆ ಸವಾರರಲ್ಲಿ ಸ್ವಯಂ ಜಾಗೃತಿ ಮೂಡಿಸುವುದು ಪೊಲೀಸ್ ಇಲಾಖೆಯ ಉದ್ದೇಶ’ ಎನ್ನುತ್ತಾರೆ ಎಸ್‌ಪಿ.

‘ಜಿಲ್ಲಾ ಪೊಲೀಸ್‌ ಇಲಾಖೆಯ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಬೇಕು, ದಂಡ ಕಟ್ಟುವ ಹಣದಲ್ಲಿ ಹೆಲ್ಮೆಟ್ ಖರೀದಿಸಿ ಸುರಕ್ಷಿತ ಚಾಲನೆ ಮಾಡಬೇಕು. ಸವಾರರು ಬೈಕ್ ಹತ್ತುವ ಮುನ್ನ ಹೆಲ್ಮೆಟ್ ತಲೆಯ ಮೇಲಿರಬೇಕು’ ಎಂದರು.

‘ಬದಲಾಗಲಿ ಜನರ ಮನಸ್ಥಿತಿ’

ಸಂಚಾರ ನಿಯಮಗಳ ಉಲ್ಲಂಘನೆ ತಡೆಗೆ ದಂಡವೇ ಅಸ್ತ್ರವಲ್ಲ; ಜನರ ಮನಸ್ಥಿತಿ ಬದಲಾದರೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣ ಕಡಿಮೆ ಮಾಡಬಹುದು. ಸಾವಿನ ಪ್ರಮಾಣವೂ ಇಳಿಕೆಯಾಗಲಿದೆ. ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಜನಪ್ರತಿನಿಧಿಗಳ ಸಹಕಾರ ಬಹಳ ಮುಖ್ಯ ಡಾ.ಬಿ.ಟಿ.ಕವಿತಾ ಎಸ್‌ಪಿ

ಪೊಲೀಸ್ ಇಲಾಖೆ ಟಿಪ್ಸ್‌...

*ಹೆಲ್ಮೆಟ್ ತಲೆಯ ಮೇಲಿರಲಿ ಕೈನಲ್ಲಿ ಅಲ್ಲ

*ಪೆಟ್ರೋಲ್ ಟ್ಯಾಂಕ್‌ ಹೆಲ್ಮೆಟ್ ಇರಿಸುವ ಸ್ಥಳವಲ್ಲ

*ಹೆಲ್ಮೆಟ್‌ ಧರಿಸಿದ ಬಳಿಕ ನೆಕ್ ಬೆಲ್ಟ್ ಕಡ್ಡಾಯ ಹಾಕಿ

*ಗುಣಮಟ್ಟದ ಹೆಲ್ಮೆಟ್ ಬಳಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT